

ಕರೊನಾ ವಾರಿಯರ್ಸ್ಗಳಿಗೆ ಸ್ಪೂರ್ತಿಯ ಸೆಲೆಯಾಗಿ ಅವಿರತವಾಗಿ ಕೆಲಸ ಮಾಡಿದ ಸಿಎಂ ಯಡಿಯೂರಪ್ಪ ಅವರು, ಕೊವಿಡ್ ಕಮಾಂಡರ್ ಎಂದೇ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾದರು. ಕೊವಿಡ್-19 ರಾಜ್ಯಕ್ಕೆ ಕಾಲಿಟ್ಟ ದಿನದಿಂದ ಇಲ್ಲಿಯತನಕ ಸಿಎಂ ಒಂದು ದಿನವೂ ವಿರಮಿಸಲಿಲ್ಲ. ನಿರ್ಲಕ್ಷಿಸಲಿಲ್ಲ. ಒಂದು ದಿನವೂ ರಜೆ ಹಾಕದೆ ಅಧಿಕಾರಿಗಳ ಸಭೆಗಳನ್ನು ಮಾಡುವ ಮೂಲಕ ಕಾಲಕಾಲಕ್ಕೆ ಅಗತ್ಯವಿರುವ ನಿರ್ದೇಶನಗಳನ್ನು ನೀಡಿದ್ದರ ಪರಿಣಾಮ, ರಾಜ್ಯದಲ್ಲಿ ಕರೊನಾ ಟೀಂ ವರ್ಕ್ ಮಾಡಲು ಸಾಧ್ಯವಾಗಿದೆ ಎಂದು ಹಿರಿಯ ಅಧಿಕಾರಿಗಳು ಸಂತೃಪ್ತಿ ವ್ಯಕ್ತಪಡಿಸುತ್ತಾರೆ.
ಕರೊನಾ ಯುದ್ದ ಕಾಲದಲ್ಲಿ ತೆಗೆದುಕೊಳ್ಳಬೇಕಾದ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆಗಳಾಗುತ್ತಿದ್ದಂತೆ, ಒಂದು ಕ್ಷಣವೂ ಹಿಂದೆ ಮುಂದೆ ಯೋಚನೆ ಮಾಡದೆ ಅಲ್ಲಿಯೇ ನಿರ್ಣಯ ತೆಗೆದುಕೊಂಡಿದ್ದಲ್ಲದೆ, ಅವೆಲ್ಲ ಕಾರ್ಯಗತವಾಗುವಂತೆ ನೋಡಿಕೊಳ್ಳುವಲ್ಲಿ ಸಿಎಂ ಮುತುವರ್ಜಿ ವಹಿಸಿದ್ದರು ಎನ್ನುವುದು ವಿಶೇಷ.
ಬಜೆಟ್ ಅಧಿವೇಶನ ಸಂದರ್ಭ ಕೋವಿಡ್ ತಲೆಬೇನೆ ತಂದಿತ್ತು. ಈ ಬಗ್ಗೆ ವಿಧಾನಸಭೆ ಮತ್ತು ವಿಧಾನಪರಿಷತ್ಗಳಲ್ಲಿ ಸತತ ಚರ್ಚೆಗಳು ನಡೆದವು. ಆ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಸಿಎಂ, ತಕ್ಷಣವೇ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ, ಮದುವೆ, ಜಾತ್ರೆ, ಸಭೆ-ಸಮಾರಂಭಗಳಿಗೆ ನಿರ್ಬಂಧ ಹೇರಿದ್ದಲ್ಲದೆ ಮಾಲ್, ಸಿನಿಮಾ ಮಂದಿರಗಳನ್ನು ಬಂದ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದು ರಾಜ್ಯದಲ್ಲಿ ಕರೊನಾ ತಹಬಂದಿಗೆ ತರಲು ಅನುಕೂಲವಾಯಿತು. ಒಂದು ವೇಳೆ ಅಂದು ಸಭೆಯಲ್ಲಿ ನಾವು ನೀಡಿದ ಸಲಹೆಯನ್ನು ಸಿಎಂ ನಿರ್ಲಕ್ಷಿಸಿದ್ದರೆ ಕರೊನಾ ವ್ಯಾಪಕವಾಗಿ ಹರಡುತ್ತಿತ್ತು. ಸಿಎಂ ಗಟ್ಟಿ ತೀರ್ಮಾನ ಮಾಡಿದ್ದರಿಂದ ರಾಜ್ಯವೂ ಸೇಫ್ ಆಯಿತು ಎನ್ನುವುದನ್ನು ಅಧಿಕಾರಿಗಳು ಈಗಲೂ ನೆನಪಿಸಿಕೊಳ್ಳುತ್ತಾರೆ.
2020ರ ಮಾ.23ರಂದು ಲಾಕ್ಡೌನ್ ಘೋಷಣೆ ಮಾಡಿದ ದಿನದಿಂದ ಇಲ್ಲಿಯತನಕ ಸಿಎಂ, ಯುವಕರು ನಾಚಿಸುವಂತೆ ಕೆಲಸ ಮಾಡಿದ್ದಾರೆ. ಎಷ್ಟೋ ಬಾರಿ ಬೆಳಿಗ್ಗೆ 8 ಗಂಟೆಯಿಂದ ತಡ ರಾತ್ರಿ ತನಕ ಸಭೆಗಳನ್ನು ನಡೆಸಿ ಕಾಲ ಕಾಲಕ್ಕೆ ಅಗತ್ಯ ನಿರ್ದೇಶನಗಳನ್ನು ನೀಡಿದ್ದಾರೆ. ಸಭೆಗಳ ಮೇಲೆ ಸಭೆಗಳನ್ನು ನಡೆಸಿದರೂ ಸಿಎಂ ಎಂದು ದಣಿಯಲಿಲ್ಲ ಎನ್ನುವುದು ಹಲವು ಅಧಿಕಾರಿಗಳ ಅಭಿಮತ. ಪ್ರಧಾನಿ ಜತೆಗೆ ವಿಡಿಯೋ ಸಂವಾದ, ಜಿಲ್ಲಾಧಿಕಾರಿಗಳ ಜತೆ ಸಂವಾದ ಸೇರಿ ಆಗಿಂದಾಗ್ಗೆ ಸಚಿವ ಸಂಪುಟ, ವಿರೋಧ ಪಕ್ಷಗಳೋಟ್ಟಿಗೂ ಸಭೆ ನಡೆಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ನಡೆಸಿದ ಪ್ರಯತ್ನಗಳು ಟೀಂ ಸ್ಪಿರಿಟ್ ಹೆಚ್ಚಿಸಿವೆ.
ಲಾಕ್ಡೌನ್ ಸಂದರ್ಭದಲ್ಲಿ ಉದ್ಭವಿಸಿದ ಸಮಸ್ಯೆಗಳಿಗೆ ಧ್ವನಿಯಾಗಿ ಯಡಿಯೂರಪ್ಪ ಅವರೇ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದು ನಮ್ಮಂತಹ ಹಿರಿಯ ಅಧಿಕಾರಿಗಳಿಗಷ್ಟೇ ಅಲ್ಲ, ಕಿರಿಯ ಅಧಿಕಾರಿಗಳಿಗೂ ಸ್ಪೂರ್ತಿಯಾಗಿದೆ. ಇಷ್ಟು ದಿನದಲ್ಲಿ ನಿಮ್ಮ ಪಾಡಿಗೆ ನೀವೇ ಸಭೆ ಮಾಡಿ ತೀರ್ಮಾನ ತೆಗೆದುಕೊಳ್ಳಿ ಅಂತ ಎಂದೂ ಹೇಳಲಿಲ್ಲ. ಯಾವಾಗ ಸಭೆ ಅಂದರೂ ಅವರು ರೆಡಿ ಇರುತ್ತಿದ್ದರು. ಅವರ ಕ್ರೀಯಾಶೀಲ ಮನೋಭಾವವೇ ನಮ್ಮನ್ನು ಇನ್ನಷ್ಟು ಬದ್ದತೆಯಿಂದ ಕೆಲಸ ಮಾಡುವಂತೆ ಮಾಡಿದೆ ಎಂಬುದು ಎಲ್ಲರ ಸಹಮತ.
ಕಳೆದ ವರ್ಷ ಅತಿವೃಷ್ಟಿಯಾದ ಸಂದರ್ಭದಲ್ಲಿ ಬಿಎಸ್ವೈ ಒಬ್ಬರೇ ಎಲ್ಲ ಕಡೆಯಲ್ಲೂ ಪ್ರವಾಸ ಮಾಡಿ, ಜನರನ್ನು ಭೇಟಿ ಮಾಡಿ ಕೆಲಸ ಮಾಡಿದ್ದರು. ಆದರೆ ಇಂದು ಅವರ ಜತೆಗೆ ಸಚಿವ ಸಂಪುಟದ ದಂಡೇ ಇದೆ. ಆದರೂ, ಅವರು ಯಾವ ಸಚಿವರ ಮೇಲೂ ದೋಷಾರೋಪಣೆ ಮಾಡದೆ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ತಜ್ಞರ ಸಮಿತಿಯಿಂದ ಹಿಡಿದು ಹಿರಿಯ, ಕಿರಿಯ ಅಧಿಕಾರಿಗಳ ತನಕ ಎಲ್ಲರ ಬೆನ್ನುತಟ್ಟಿ ಪ್ರೋತ್ಸಾಯಿಸಿ ಕೆಲಸ ಮಾಡಿಸುತ್ತಿರುವ ಸಿಎಂ ಬಿಎಸ್ವೈ, ಒಂದರ್ಥದಲ್ಲಿ ಕರೊನಾ ವಾರಿಯರ್ಸ್ಗೆ ನಿಜವಾದ ಕಮಾಂಡರ್ ಆಗಿ ಕೆಲಸ ಮಾಡಿದ್ದನ್ನು ಯಾರೂ ಅಲ್ಲಗಳೆಯುವುದಿಲ್ಲ.