ಮೂವರ ನಡುವೆ ಪರಸ್ಪರ ಹೊಡೆದಾಡಿಕೊಂಡು ಆರೋಪ

Published on

ಸಾಲಿಗ್ರಾಮ: ಗ್ರಾಮ ಪಂಚಾಯಿತಿ ಪಿಡಿಒ ಸಂದೀಪ್ ಮತ್ತು ಮಿರ್ಲೆ ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಹಾಗೂ ಗ್ರಾಮಸ್ಥ ಕಾಂತರಾಜು ನಡುವೆ ಕಾಮಗಾರಿ ಹಗರಣಗಳ ಬಗ್ಗೆ ವೈಮನಸ್ಸು ಇದ್ದ ಕಾರಣ ಮೂವರು ಹೊಡೆದಾಡಿಕೊಂಡು ಸಾಲಿಗ್ರಾಮ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಸೋಮವಾರ ಮಿರ್ಲೆ ಗ್ರಾಮದಲ್ಲಿ ಮೂವರೂ ಬೀದಿಯಲ್ಲಿ ಜಗಳವಾಡಿ ಕೈ ಕೈ ಮಿಲಾಯಿಸಿ ಒಡೆದಾಡಿಕೊಂಡು ಸಾಲಿಗ್ರಾಮ ಪೊಲೀಸ್ ಠಾಣೆಗೆ ಬಂದು ಇವರ ಮೇಲೆ ಅವರು ಅವರ ಮೇಲೆ ಇವರು ದೂರು ನೀಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಮಿರ್ಲೆ ಪಂಚಾಯಿತಿ ಪಿಡಿಒ ಸಂದೀಪ್ ದೂರಿನ ವಿವರ: ನಾವು ನಮ್ಮ ಸಿಂಬ್ಬಂದಿ ಮಿರ್ಲೆ ಗ್ರಾಮದ ಹಾಸ್ಟೆಲ್ ರಸ್ತೆಯ ಧನುಶ್ರೀ ಅವರ ಮನೆ ಹತ್ತಿರ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಸಮೀಕ್ಷೆ ಪರಿಶೀಲನೆ ಮಾಡುವ ಸಂದರ್ಭದಲ್ಲಿ ರಾಮಕೃಷ್ಣೇಗೌಡರ ಮಗ ಹರೀಶ್ ಏಕಾಏಕಿ ನನ್ನ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಹರೀಶ್ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ್ದಾರೆ.

ಮಿರ್ಲೆ ಗ್ರಾಮದ ಕಾಂತರಾಜು ದೂರು: ಮಿರ್ಲೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಕಾಮಗಾರಿಗಳ ಹಗರಣ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಮತ್ತು ನಾನು ಲೋಕಾಯುಕ್ತರಿಗೆ ದೂರು ನೀಡಿದ ಕಾರಣಕ್ಕಾಗಿ ಪಿಡಿಒ ಸಂದೀಪ್ ಸೋಮವಾರ ಶುಂಠಿ ಮಂಜುನಾಥ್ ಮನೆ ಮುಂಭಾಗ ರಸ್ತೆಯಲ್ಲಿ ನಾವು ನಿಂತಿದ್ದಾಗ ಅಲ್ಲಿಗೆ ಬಂದು ನನ್ನ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲು ನೀವು ಯಾರು? ಎಂದು ಅವಾಚ್ಯ ಶಬ್ದಗಳಿಂದ ಬೈದು ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಮತ್ತು ನನಗೆ ಹೊಡೆದು ತಳ್ಳಾಡಿ ಕೊಲೆ ಬೆದರಿಕೆ ಹಾಕಿದ್ದಾರೆ. ಪಿಡಿಒ ಸಂದೀಪ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂತರಾಜ್ ದೂರು ನೀಡಿದ್ದಾರೆ.

ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಸಾಲಿಗ್ರಾಮ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಎಂಎಲ್ಸಿ ಮಾಡಿಸಿದ್ದಾರೆ. ಇನ್‌ಸ್ಪೆಕ್ಟರ್ ಶಶಿಕುಮಾರ್ ಎರಡೂ ದೂರುಗಳನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net