ದೇಗುಲದಲ್ಲಿ ಕಳವು ಶೀಘ್ರ ತನಿಖೆಯಾಗಲಿ

manavi
ತೀರ್ಥಹಳ್ಳಿ ರಾಮೇಶ್ವರ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಒತ್ತಾಯಿಸಿ ಎಎಸ್ಪಿ ಎ.ಜೆ.ಕಾರಿಯಪ್ಪ ಅವರಿಗೆ ಬಿ.ವರಲಕ್ಷ್ಮೀ ಪ್ರಕಾಶ್, ಎನ್.ಎಚ್.ದೇವಕುಮಾರ್, ರೇಖಾ ಭದ್ರಾವತಿ, ಡಾ. ನಾಗರತ್ನ ಮನವಿ ಸಲ್ಲಿಸಿದರು.
Published on

ಶಿವಮೊಗ್ಗ: ತೀರ್ಥಹಳ್ಳಿಯ ರಾಮೇಶ್ವರ ದೇವಸ್ಥಾನದಲ್ಲಿ ನಡೆದಿರುವ ಕಳ್ಳತನ ಪ್ರಕರಣವನ್ನು ಶೀಘ್ರ ಪತ್ತೆ ಮಾಡಬೇಕು. ಈ ಪ್ರಕರಣದಲ್ಲಿ ಕಾಣದ ಕೈಗಳ ಕೈವಾಡವಿರುವ ಶಂಕೆಯಿದ್ದು, ತನಿಖೆ ನಡೆಸಬೇಕೆಂದು ಆಗ್ರಹಿಸಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ಬಿ.ವರಲಕ್ಷ್ಮೀ ಪ್ರಕಾಶ್ ನೇತೃತ್ವದಲ್ಲಿ ಎಎಸ್ಪಿ ಎ.ಜಿ.ಕಾರಿಯಪ್ಪ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ಜಿಲ್ಲಾ ಧಾರ್ಮಿಕ ಪರಿಷತ್ ಅಧ್ಯಕ್ಷರಾಗಿದ್ದು, ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳು ಈ ಪರಿಷತ್‌ನ ವ್ಯಾಪ್ತಿಗೊಳಪಟ್ಟಿವೆ. ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ರಾಮೇಶ್ವರ ದೇವಸ್ಥಾನವು ಜಿಲ್ಲಾ ಧಾರ್ಮಿಕ ಪರಿಷತ್‌ನ ವ್ಯಾಪ್ತಿಯಲ್ಲಿದೆ. ಈ ದೇವಸ್ಥಾನ ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯಮಟ್ಟದಲ್ಲೂ ಖ್ಯಾತಿ ಪಡೆದಿದೆ. ದಸರಾ ಸಂದರ್ಭದಲ್ಲಿ ಇಲ್ಲಿ ಅನೇಕ ಕಾರ್ಯಕ್ರಮಗಳು ಜರುಗುತ್ತವೆ. ಮಹತ್ವ ಹೊಂದಿರುವ ದೇವಸ್ಥಾನದಲ್ಲಿ ಆ.11ರ ರಾತ್ರಿ ಕಾಣಿಕೆ ಹುಂಡಿ ಒಡೆದು ಕಳ್ಳತನ ಮಾಡಿರುವುದು ಆತಂಕಕಾರಿ ಬೆಳವಣಿಗೆ. ಮುಖಕ್ಕೆ ಮಾಸ್ಕ್ ಧರಿಸಿ ಕಳ್ಳತನ ಮಾಡಲಾಗಿದೆ. ಅಡುಗೆ ಕೊಠಡಿಯಲ್ಲಿದ್ದ ಸಿಸಿ ಕ್ಯಾಮರಾವನ್ನು ಬೇರೆ ದಿಕ್ಕಿಗೆ ತಿರುಗಿಸಿ, ಬೀರುವಿನ ಬಾಗಿಲು ಮುರಿದಿದ್ದಾರೆ. ನಂತರ ಕೊಠಡಿಯಲ್ಲಿದ್ದ ಎರಡು ಕಾಣಿಕೆ ಹುಂಡಿಗಳನ್ನು ಒಡೆದು ಹಣ ಕಳವು ಮಾಡಲಾಗಿದೆ ಮನವಿಯಲ್ಲಿ ತಿಳಿಸಲಾಗಿದೆ.

ಕಳವು ಕೃತ್ಯದ ಹಿಂದೆ ದೇವಸ್ಥಾನಕ್ಕೆ ಕೆಟ್ಟ ಹೆಸರು ತರುವ ಹುನ್ನಾರವಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಜಿಲ್ಲೆಯ ವಿವಿಧೆಡೆ ಈ ಹಿಂದೆಯೂ ದೇವಸ್ಥಾನಗಳಲ್ಲಿ ಕಳ್ಳತನಗಳು ನಡೆದಿವೆ. ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುವ ಗ್ಯಾಂಗ್ ಹುಟ್ಟಿಕೊಂಡಿರುವ ಶಂಕೆಯಿದೆ. ಪೊಲೀಸ್ ಇಲಾಖೆ ಕೂಡಲೇ ಈ ಬಗ್ಗೆ ಗಮನ ಹರಿಸಿ ರಾಮೇಶ್ವರ ದೇವಸ್ಥಾನ ಸೇರಿ ವಿವಿಧ ದೇಗುಲಗಳಲ್ಲಿ ಕಳ್ಳತನ ಮಾಡಿದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಡಾ. ನಾಗರತ್ನ, ರೇಖಾ ಭದ್ರಾವತಿ, ಎನ್.ಎಚ್.ದೇವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net