ಸಂಯಮದಿಂದ ನಿಭಾಯಿಸಬೇಕಾದ ಅನಿವಾರ್ಯತೆಗಳು ಜೀವನದ ಪರೀಕ್ಷೆ

succuss
Published on

ಧರಣಿಗೋಳವು ಮೂಸೆ; ಜೀವಗಳನದರೊಳಗೆ|

ಪರಿಶುದ್ಧಿಗೊಳಿಸುವುದು ಸಂಸಾರತಾಪ||

ಪರಿಪರಿಯ ಬಂಧು ಧರ್ಮದಿನ ಅಹಂಮತಿ ಕರಗೆ|

ಹರಡಿ ಹಬ್ಬುವುದಾತ್ಮ-ಮಂಕುತಿಮ್ಮ||603||

ಭೂಮಿಯ ಬದುಕು ಲೋಹವನ್ನು ಸಂಸ್ಕರಿಸುವ ಮೂಸೆ. ಸಂಸಾರತಾಪವು ಜೀವಗಳನ್ನು ಅದರೊಳಗೆ ಪರಿಶುದ್ಧಿಗೊಳಿ ಸುತ್ತದೆ. ಬೇರೆಬೇರೆ ತರಹದ ಬಂಧುಗಳ ಜೊತೆಗಿನ ಒಡನಾಟ, ಪಾಲಿಸಬೇಕಾದ ಧರ್ಮಗಳಿಂದಾಗಿ ಅಹಂಕಾರವು ಕರಗುತ್ತದೆ. ತನ್ಮೂಲಕ ಆತ್ಮವಿಸ್ತರಣೆಯು ಸಾಧ್ಯವಾಗುತ್ತದೆ ಎನ್ನುತ್ತದೆ ಈ ಕಗ್ಗ. ಸೃಷ್ಟಿಯಲ್ಲಿ ಮನುಷ್ಯನು ವಿವೇಚನೆ ಮತ್ತು ಸಂವಹನ ಶಕ್ತಿಗಳಿರುವ ಕಾರಣಕ್ಕಾಗಿ ಉಳಿದೆಲ್ಲಾ ಪ್ರಾಣಿಗಳಿಗಿಂತ ವಿಭಿನ್ನ, ವಿಶಿಷ್ಟ. ಇವಷ್ಟೇ ಅಲ್ಲದೆ, ಅಹಂಕಾರ, ಈರ್ಷ್ಯೆ, ಕೋಪ, ದ್ವೇಷವೇ ಮೊದಲಾದ ನಕಾರಾತ್ಮಕ ಗುಣಗಳಿಂದಾಗಿಯೂ ಮನುಷ್ಯನು ಸೃಷ್ಟಿಯೊಳಗೆ ವಿಭಿನ್ನವಾಗಿ ಮತ್ತು ಅಸಹಜವಾಗಿ ಬದುಕುತ್ತಾನೆ.

ಮನುಷ್ಯನಲ್ಲಿ ಆತ್ಮಪ್ರಜ್ಞೆಯು ಜಾಗ್ರತವಾಗದೇ ಇದ್ದಾಗ ಲೌಕಿಕ ಸುಖ-ಭೋಗಕ್ಕಾಗಿ ಹಾತೊರೆಯುತ್ತಿರುತ್ತಾನೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಆರು ಬಗೆಯ ಹಗೆಗಳನ್ನು ಹೊತ್ತು ತಿರುಗುತ್ತಾನೆ. ನಾನು-ನನ್ನಿಂದಲೇ ಎನ್ನುವ ಹಮ್ಮು ನಡೆ-ನುಡಿಗಳಲ್ಲಿ ಎದ್ದು ಕಾಣುತ್ತದೆ. ಶೈಶವದ ಮುಗ್ಧತೆಯಲ್ಲಿ ಇಲ್ಲದೆ ಇದ್ದ ಗರ್ವವು ಬೆಳೆಯುತ್ತಾ ಬಂದಂತೆ ಹೆಮ್ಮರವಾಗುತ್ತದೆ. ಹುಟ್ಟಿದ ಮನೆ, ಬೆಳೆದ ಪರಿಸರ, ಪಡೆದ ಸುಖ ಸೌಲಭ್ಯಗಳು ವ್ಯಕ್ತಿಯಲ್ಲಿ ಅಹಂಕಾರವನ್ನು ಪೋಷಿಸುತ್ತವೆ. ಅದರಲ್ಲೂ ಬಾಲ್ಯದಿಂದಲೇ ಸುಖ-ಸಮೃದ್ಧಿಯಿಂದ ಬೆಳೆದವರಿಗೆ ಲೋಕದ ತಾಪತ್ರಯ, ಕಷ್ಟ-ನಷ್ಟಗಳ, ಪರಿಚಯವಿರುವುದಿಲ್ಲ. ಇತರರ ಕಷ್ಟಗಳನ್ನು ಕಂಡು ಮರುಗುವ, ಸ್ಪಂದಿಸುವ ಮನಸ್ಸೂ ಇರುವುದಿಲ್ಲ. ತನ್ನ ಜೀವನದ ಸೌಭಾಗ್ಯಗಳನ್ನು ವರ್ಣಿಸುತ್ತಾ, ತನ್ನ ಜೀವನಕ್ಕೆ ಇತರರ ಜೀವಿತವನ್ನು ಹೋಲಿಸುತ್ತಾ ಇನ್ನಿಲ್ಲದಷ್ಟು ಬೀಗುತ್ತಾನೆ. ಹೀಗೆ ಮೆರೆಯುವಾಗ ತಾನು ಯಾರು? ತನ್ನ ಮಿತಿ ಏನು ಎನ್ನುವುದನ್ನೇ ಮರೆಯುತ್ತಾನೆ. ಅಹಂಕಾರದಲ್ಲಿರುವ ವ್ಯಕ್ತಿಯ ಅರಿವಿನ ಕಣ್ಣು ಕುರುಡಾಗಿರುತ್ತದೆ. ಹಾಗಾಗಿಯೇ ಅವರಿಗೆ ತಮ್ಮೊಳಗೆ ಬಲಿತಿರುವ ಅಹಂಕಾರವು ಕಾಣುವುದೇ ಇಲ್ಲ. ನಾನೇ ಶ್ರೇಷ್ಠ, ನಾನು ಮಾಡಿದ್ದೇ ಸರಿ, ನನ್ನ ಮಾತೇ ನಡೆಯಬೇಕು ಎಂಬ ದೊಡ್ಡಸ್ತಿಕೆಯನ್ನು ತೋರುತ್ತಾರೆ. ಅಜ್ಞಾನದ ಅಂಧಕಾರದಲ್ಲಿ ನಿಜಸ್ಥಿತಿಯನ್ನು ಅರಿಯದೆ ಭ್ರಮಾಧೀನರಾಗಿರುತ್ತಾರೆ.

ಹೀಗೆ ಬೀಗುವವರ ಭ್ರಮೆಯ ಸೌಧವು ಉರುಳಿದರೆ ತಮ್ಮ ಇತಿಮಿತಿಗಳು ಅರ್ಥವಾಗುತ್ತದೆ. ಬದುಕು ಮತ್ತು ಅವಕಾಶಗಳು ದೇವಭಿಕ್ಷೆ ಎನ್ನುವುದು ಮನನವಾದರೆ ವಿನಮ್ರರಾಗುತ್ತಾರೆ. ಅಹಂಕಾರವು ವ್ಯಕ್ತಿಯನ್ನು ಎಲ್ಲರಿಂದಲೂ ಪ್ರತ್ಯೇಕಿಸುತ್ತದೆ, ಸರಳತೆಯು ಎಲ್ಲರೊಂದಿಗೆ ಬೆರೆಯುವಂತೆ ಮಾಡುತ್ತದೆ. ಒಂದು ವೇಳೆ ಜೀವನದ ಸಂಕಟಗಳಿಂದ ವ್ಯಕ್ತಿಯು ಪಾಠವನ್ನು ಕಲಿಯದೆ ಇದ್ದರೆ, ಭಾವಾವೇಶಕ್ಕೆ ಒಳಗಾಗಿ ಮೂರ್ಖನಂತೆ ವರ್ತಿಸುತ್ತಿದ್ದರೆ ಮತ್ತೆ ಮತ್ತೆ ಲೋಕತಾಪಕ್ಕೆ ಒಳಗಾಗಿ ಕಂಗೆಡಬೇಕಾಗುತ್ತದೆ. ಸಾರ್ಥಕ ಜೀವನವು ಕನಸಾಗುತ್ತದೆ.

ಪರಸ್ಪರ ಅವಲಂಬಿತವಾದ ಲೋಕ ಜೀವನದಲ್ಲಿ ಮೇಲ್ನೋಟಕ್ಕೆ ಎಲ್ಲರೂ, ಎಲ್ಲವೂ ಸಮಾನವೆಂದು ಕಂಡರೂ ಎಲ್ಲದರಲ್ಲೂ ಅಸಮಾನತೆ ಇದೆ. ಸೃಷ್ಟಿಯ ಮುಂದುವರಿಕೆಗೆ ಈ ಅಸಮಾನತೆಯು ಅತ್ಯಗತ್ಯ. ಹಾಗಾಗಿ ಕುಟುಂಬ, ಸಮಾಜದೊಳಗೆ ಮಿಳಿತನಾಗಿ ಬಾಳಬೇಕಾದ ವ್ಯಕ್ತಿಯು ಈ ವಿಭಿನ್ನತೆಯಿಂದಾಗಿ ಹಲವು ತೆರನಾದ ಅನುಭವಗಳನ್ನು ಪಡೆಯುತ್ತಾನೆ. ಹೊಂದಿಕೊಂಡು ಹೋಗಬೇಕಾದ, ಸಂಯಮದಿಂದ ನಿಭಾಯಿಸಬೇಕಾದ ಅನಿವಾರ್ಯತೆಗಳು ಜೀವನದ ಪರೀಕ್ಷೆ. ಪ್ರತಿಕೂಲ ಸಂದರ್ಭದಲ್ಲಿ ವ್ಯಕ್ತಿಯು ಹೇಗೆ ವರ್ತಿಸುತ್ತಾನೆ, ತನ್ನನ್ನು ತಾನು ಹೇಗೆ ನಿಯಂತ್ರಿಸಿಕೊಳ್ಳುತ್ತಾನೆ ಎನ್ನುವುದರ ಮೇಲೆ ವ್ಯಕ್ತಿಯ ಸಾಮರ್ಥ್ಯ. ಹಾಗಾಗಿ ಪ್ರೀತಿ-ಸ್ನೇಹಗಳ ನಂಟಿನಲ್ಲಿ ಮತ್ತೆಮತ್ತೆ ಭಾವತಲ್ಲಣಕ್ಕೆ ಒಳಗಾಗುತ್ತಾನೆ. ನಂಬಿಕೆ ದ್ರೋಹ, ವಿನಾಕಾರಣ ದ್ವೇಷ, ಅನೀತಿ- ಅನ್ಯಾಯದ ನಡೆ, ರೋಗ, ಸೋಲಿನಂಥ ಅಸಹಾಯಕತೆಗಳು ವ್ಯಕ್ತಿಯನ್ನು ಹದಗೊಳಿಸುತ್ತವೆ. ಅಹಂಕಾರದಿಂದ ಬೀಗುತ್ತಿದ್ದವನು ಬಗೆದಂತಿರದ ಬದುಕಿನ ಓಟಕ್ಕೆ ಬಳಲುತ್ತಾನೆ. ಸಂಸಾರವೆಂಬ ತಾಪಕ್ಕೆ ಸಿಲುಕಿ ಮಾಗುತ್ತಾನೆ. ಪರಿಪಕ್ವನಾಗುತ್ತಾನೆ.

ಜೀವನೋತ್ಸಾಹ, ಪುರುಷ ಪ್ರಯತ್ನ ಮತ್ತು ಲೋಕ ಸ್ನೇಹಗಳು ಜೀವನದ ಉತ್ಕರ್ಷಕ್ಕೆ ಅತ್ಯಗತ್ಯ. ಬಗೆಬಗೆಯ ಕರ್ತವ್ಯಗಳನ್ನು, ಬಂಧು ಧರ್ಮವನ್ನು ಅನುಸರಿಸುವಾಗ ಎದುರಿಸುವ ಸಂದಿಗ್ಧತೆ, ಬೆರಗು, ನೋವು-ನಲಿವುಗಳು ವ್ಯಕ್ತಿಯನ್ನು ಆತ್ಮಾವಲೋಕನಕ್ಕೆ ಹಚ್ಚುತ್ತವೆ. ಬದುಕಿನ ಸೋಲು, ನೋವುಗಳಲ್ಲಿ ಅಭಾವ ವೈರಾಗ್ಯ ಕಾಡುವುದಿದೆ. ಸೋಲುಗಳು ಬದುಕಿಗೆ ಪಾಠವಾಗಬೇಕು, ಮನದ ಶೋಧನೆಯು ನಡೆದು ದೌರ್ಬಲ್ಯಗಳು ಇಲ್ಲವಾಗಬೇಕು. ತನ್ನ ಬದುಕು ತನ್ನದಲ್ಲ, ನಿಯಾಮಕ ಶಕ್ತಿಯು ಮುನ್ನಡೆಸುತ್ತಿದೆ. ಎಲ್ಲವೂ ದೇವನ ಇಚ್ಛೆ ಎನ್ನುವುದು ಮನನವಾದರೆ ಸಹಜ ವಿರಕ್ತಿ ಅರಳುತ್ತದೆ. ಜ್ಞಾನದೀಪವು ಬೆಳಗುತ್ತದೆ. ವ್ಯಕ್ತಿಯಲ್ಲಿ ದೇಹಾಭಿಮಾನವು ಹೊರಟುಹೋಗಿ ಆತ್ಮೋತ್ಕರ್ಷಕ್ಕಾಗಿ ಪ್ರಯತ್ನಿಸುತ್ತಾನೆ. ಪ್ರತಿಯೊಂದು ಸ್ನೇಹ-ಸಂಬಂಧಗಳು, ಅವು ನೀಡುವ ಜೀವನಾನುಭವಗಳು ವ್ಯಕ್ತಿಯ ಆತ್ಮವಿಸ್ತರಣೆಗೆ ಅನುವು ಮಾಡಿಕೊಡುತ್ತವೆ. ಲೋಕಜೀವನದ ಉದ್ದೇಶವು ಸಫಲವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net