ಮತಾಂತರ ತಡೆಗೆ ಸುಗ್ರೀವಾಜ್ಞೆ: ರಾಜ್ಯಪಾಲರ ಅಂಕಿತ ಬಿದ್ದ ಬಳಿಕ ರಾಜ್ಯದಲ್ಲಿ ಕಾನೂನು ಜಾರಿ

Front
Published on

ಬೆಂಗಳೂರು: ಬಹು ರ್ಚಚಿತ, ಪರ-ವಿರೋಧಕ್ಕೆ ಕಾರಣವಾಗಿದ್ದ ಬಲವಂತದ ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ವಿಧಾನಸಭೆಯಲ್ಲಿ ಅನುಮೋದನೆಗೊಂಡು, ಪರಿಷತ್ತಿನಲ್ಲಿ ಬಾಕಿ ಉಳಿದುಕೊಂಡಿದ್ದ ‘ಕರ್ನಾಟಕ ಧಾರ್ವಿುಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧ್ಯಾದೇಶ, 2022’ಕ್ಕೆ ಗುರುವಾರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಸಂಪುಟದ ತೀರ್ವನವನ್ನು ಶುಕ್ರವಾರ ರಾಜಭವನಕ್ಕೆ ಕಳಿಸಲಾಗುತ್ತದೆ. ರಾಜ್ಯಪಾಲರು ಕಾನೂನು ತಂಡದ ಜತೆ ಸಮಾಲೋಚಿಸಿ ಸುಗ್ರೀವಾಜ್ಞೆಗೆ ಸಹಿ ಹಾಕಿದ ಕೂಡಲೇ ಮತಾಂತರ ನಿಷೇಧ ಕಾನೂನು ಜಾರಿಗೆ ಬರಲಿದೆ. ಪ್ರಕ್ರಿಯೆಯ ಮುಂದಿನ ಭಾಗವಾಗಿ ಆರು ತಿಂಗಳೊಳಗೆ ಅಥವಾ ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಅನುಮೋದನೆ ಪಡೆದುಕೊಂಡರೆ ಸಾಕು. ಅಲ್ಲಿಯವರೆಗೆ ಕಾನೂನು ಜಾರಿಗೆ ಸರ್ಕಾರಕ್ಕೆ ಸಂವಿಧಾನಬದ್ಧ ಅವಕಾಶ ಇರಲಿದೆ.

ಅಡೆ ತಡೆಯ ಹಾದಿ: ಮತಾಂತರ ನಿಷೇಧ ಮಸೂದೆ 2021ರ ಡಿಸೆಂಬರ್​ನಲ್ಲಿ ಬೆಳಗಾವಿ ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ಮಂಡನೆಯಾಗಿ ಗದ್ದಲದ ನಡುವೆ ಅನು ಮೋದನೆಯಾಗಿತ್ತು. ಅದರೆ ಪರಿಷತ್​ನಲ್ಲಿ ಒಪ್ಪಿಗೆ ಸಿಕ್ಕಿರಲಿಲ್ಲ. ವಿಧೇಯಕಕ್ಕೆ ಒಪ್ಪಿಗೆ ಪಡೆಯಬೇಕೆಂದು ಸರ್ಕಾರ ನಡೆಸಿದ ಪ್ರಯತ್ನ ಹಿಮ್ಮೆಟ್ಟಿಸಲು ಹೈಡ್ರಾಮವೇ ನಡೆದಿತ್ತು. ಬಳಿಕ ಬೆಂಗಳೂರಿನಲ್ಲಿ ನಡೆದ ಅಧಿವೇಶನದಲ್ಲೂ ಸರ್ಕಾರಕ್ಕೆ ಒಪ್ಪಿಗೆ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ.

ಮುಂದೆ ಅನುಮೋದನೆ: ವಿಧಾನಸಭೆ ಅನುಮೋದನೆ ಸಿಕ್ಕಿರುವುದರಿಂದ ಪರಿಷತ್​ನಲ್ಲಿ ಅಧ್ಯಾದೇಶಕ್ಕೆ ಒಪ್ಪಿಗೆ ಪಡೆದುಕೊಂಡರೆ ಸಾಕಾಗುತ್ತದೆ. ಒಂದು ವೇಳೆ ವಿಧಾನಸಭೆಯಿಂದ ಅನುಮೋದನೆ ರೂಪದಲ್ಲಿರುವ ಮಸೂದೆಗೆ ತಿದ್ದುಪಡಿ ಮಾಡಬೇಕಾದ ಸಂದರ್ಭ ಬಂದಲ್ಲಿ ಪುನಃ ವಿಧಾನಸಭೆಯಲ್ಲಿ ಮಂಡನೆಯಾಗಿ ಒಪ್ಪಿಗೆ ಪಡೆದುಕೊಳ್ಳಬೇಕಾಗುತ್ತದೆ. ವಿಧಾನ ಪರಿಷತ್​ನಲ್ಲಿ ಸರ್ಕಾರಕ್ಕೆ ಈವರೆಗೂ ಬಹುಮತ ಇರಲಿಲ್ಲ. ಒಂದು ವೇಳೆ ವಿಧೇಯಕವನ್ನು ಪರ್ಯಾಲೋಚನೆ ಪ್ರಕ್ರಿಯೆಗೆ ತೆಗೆದುಕೊಂಡ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಜಂಟಿಯಾಗಿ ಮಸೂದೆ ತಿರಸ್ಕರಿಸಲು ಅವಕಾಶವಿತ್ತು ಅಥವಾ ಜಂಟಿ ಸದನ ಸಮಿತಿಗೆ ಕೊಡುವಂತೆ ಒತ್ತಡ ಹೇರಿ ಒಂದಷ್ಟು ಕಾಲ ತಡೆಹಾಕಬಹುದಿತ್ತು. ಪ್ರಸ್ತುತ 75 ಸದಸ್ಯ ಬಲದ ವಿಧಾನಪರಿಷತ್​ನಲ್ಲಿ ಆಡಳಿತ ಪಕ್ಷ 37 ಸದಸ್ಯರನ್ನು (ಶೇ.49.3) ಹೊಂದಿದೆ. ಇತ್ತೀಚೆಗಷ್ಟೇ ಸಿಎಂ ಇಬ್ರಾಹಿಂ ರಾಜೀನಾಮೆ ಕೊಟ್ಟಿರುವುದರಿಂದ ಪ್ರತಿಪಕ್ಷದ ಬಲ ಒಂದು ಸ್ಥಾನ ತಗ್ಗಿದೆ. ಜತೆಗೆ ಪರಿಷತ್​ನ ಏಳು ಸ್ಥಾನಕ್ಕೆ ಜೂ.3ಕ್ಕೆ ಚುನಾವಣೆ ನಡೆಯಲಿದ್ದು, ಆಡಳಿತ ಪಕ್ಷದ ಬಲ 39ಕ್ಕೆ ಏರಲಿದೆ. ಇದರಿಂದ ವಿಧೇಯಕ ಪಾಸ್ ಮಾಡಿಕೊಳ್ಳಲು ಸಲೀಸಾಗಲಿದೆ.

ಸುಗ್ರೀವಾಜ್ಞೆ ಮೊರೆ ಏಕೆ?: ವಿಧಾನಸಭೆಯಲ್ಲಿ ಅನುಮೋದನೆ ರೂಪದಲ್ಲಿರುವ ‘ಕರ್ನಾಟಕ ಧಾರ್ವಿುಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಮಸೂದೆ’ ಪರಿಷತ್​ನಲ್ಲಿ ಅನುಮೋದನೆ ಪಡೆದ ನಂತರ ರಾಜ್ಯಪಾಲರ ಸಹಿ ಆದ ಬಳಿಕವಷ್ಟೇ ಕಾನೂನು ಜಾರಿ ಮಾಡಬಹುದು. ಸದ್ಯಕ್ಕೆ ಅಧಿವೇಶನ ನಡೆಯದ ಕಾರಣ ಈ ಪ್ರಕ್ರಿಯೆ ಅಸಾಧ್ಯ. ಹೀಗಾಗಿ ಸುಗ್ರೀವಾಜ್ಞೆಯ ಸಂವಿಧಾನ ಬದ್ಧ ಅಧಿಕಾರ ಬಳಸಿಕೊಳ್ಳಲಾಗಿದೆ.

ಕಾಯ್ದೆ ಜಾರಿಯಿಂದ ಏನಾಗುತ್ತೆ?

  • ಬಲವಂತದ ಮತಾಂತರ ಅಸಿಂಧು, ಜಾಮೀನುರಹಿತ ಅಪರಾಧ, ಉಡುಗೊರೆ, ಕೆಲಸ, ಉಚಿತ ಶಿಕ್ಷಣ, ವಿವಾಹದ ಆಮಿಷ ಒಡ್ಡಿ ಮತಾಂತರ ಸಲ್ಲ
  • ಭಾವನಾತ್ಮಕವಾಗಿ ಸೆಳೆದು ಮತಾಂತರ ಮಾಡುವುದೂ ಅಪರಾಧ, ಆಮಿಷ ಒಡ್ಡಿ ಮತಾಂತರಗೊಳಿಸಿ ಮಾಡುವ ವಿವಾಹ ಅಸಿಂಧು. ಈ ಬಗ್ಗೆ ಘೊಷಿಸಲು ಕೌಟುಂಬಿಕ ನ್ಯಾಯಾಲಯಕ್ಕೆ ಮಸೂದೆಯಲ್ಲಿ ಅವಕಾಶ
  • ಸಾಮೂಹಿಕ ಮತಾಂತರದಲ್ಲಿ ಶಿಕ್ಷಣ ಸಂಸ್ಥೆ, ಆಶ್ರಮ, ಧಾರ್ವಿುಕ ಮಿಷನರಿ, ಎನ್​ಜಿಓಗಳಿಗಿಲ್ಲ ಅವಕಾಶ
  • ಸಾಮೂಹಿಕ ಮತಾಂತರದಲ್ಲಿ ಭಾಗಿಯಾದ ಸಂಸ್ಥೆಗಳಿಗೆ ಸರ್ಕಾರಿ ಅನುದಾನ ಸ್ಥಗಿತ
  • ಧರ್ಮ ಬದಲಿಸುವ 60 ದಿನ ಮೊದಲು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು
  • ಮತಾಂತರ ಬಳಿಕ ಶಾಲೆ, ಕಾಲೇಜು ಸಕ್ಷಮ ಪ್ರಾಧಿಕಾರಕ್ಕೆ ಮತ ಬದಲಾವಣೆಗೆ ಡಿಸಿ ಸೂಚಿಸಬೇಕು
  • ಮತಾಂತರಗೊಂಡ ಎಸ್​ಸಿ, ಎಸ್​ಟಿ ವ್ಯಕ್ತಿಗಳಿಗೆ ಸಿಗುವ ಮೀಸಲಾತಿ, ಇತರ ಸೌಲಭ್ಯ ರದ್ದು

ಶಿಕ್ಷೆ ಏನೇನು?

  • ಅಪ್ರಾಪ್ತರು, ಮಹಿಳೆಯರು, ಬುದ್ಧಿಮಾಂದ್ಯರಿಗೆ ಆಸೆ, ಆಮಿಷ ಒಡ್ಡಿ ಮತಾಂತರ ಮಾಡುವ ಹಾಗಿಲ್ಲ
  • ಕಾಯ್ದೆ ಉಲ್ಲಂಘಿಸಿದ್ದಲ್ಲಿ ಕನಿಷ್ಠ 3ರಿಂದ 10 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ
  • ಇತರರನ್ನು ಬಲವಂತವಾಗಿ ಮತಾಂತರಿಸಿದ್ದಲ್ಲಿ 3ರಿಂದ 5 ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ರೂ. ದಂಡ
  • ಸಾಮೂಹಿಕ ಮತಾಂತರ ಮಾಡಿದವರಿಗೆ 3ರಿಂದ 10 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ
  • ಮತಾಂತರ ಸಾಬೀತಾದರೆ ಮತಾಂತರಕ್ಕೆ ಒಳಗಾದವನಿಗೆ 5 ಲಕ್ಷ ರೂ.ಪರಿಹಾರ
  • ಈ ಹಿಂದಿನ ಮತಾಂತರ ಸಾಬೀತಾದಲ್ಲಿ ದುಪ್ಪಟ್ಟು ದಂಡ

ಸಂಪುಟದ ಇತರ ಪ್ರಮುಖ ನಿರ್ಧಾರ

  • ರಾಜ್ಯದ 287 ನಗರಗಳಲ್ಲಿ ಅಟಲ್ ನಗರ ಪುನರುಜ್ಜೀವನ ಯೋಜನೆ ಜಾರಿ ಮಾಡಲಾಗುತ್ತಿದ್ದು, ಇದಕ್ಕೆ ಕೇಂದ್ರ ಸಹಭಾಗಿತ್ವದಲ್ಲಿ 9,230 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಎಲ್ಲ ಮನೆಗೂ ಕುಡಿಯುವ ನೀರಿನ ಪೂರೈಕೆ, ಒಳಚರಂಡಿ ಮತ್ತು ನಗರ ನವೀಕರಣಕ್ಕೆ ಉತ್ತೇಜನ ನೀಡಲಾಗುತ್ತದೆ.
  • ಹ್ಯಾಕಿಂಗ್, ಸೈಬರ್ ದಾಳಿ, ಸೈಬರ್ ವಂಚನೆ ಪ್ರಕರಣ ಹೆಚ್ಚುತ್ತಿದ್ದು, ದೇಶದಲ್ಲಿ ಅತ್ಯಧಿಕ ಸೈಬರ್ ಅಪರಾಧಗಳು ಕರ್ನಾಟಕದಲ್ಲಿ ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಲು ರಾಜ್ಯವು ಕರ್ನಾಟಕ ಸೈಬರ್ ಭದ್ರತಾ ನೀತಿ 2022-27ನ್ನು ಅಳವಡಿಸಿಕೊಳ್ಳುತ್ತಿದೆ.
  • ಪುರಸಭೆ ವ್ಯಾಪ್ತಿಯಲ್ಲಿರುವ ಒಂಟಿ ಮನೆಗಳು, ಪುರಸಭೆ ಪಟ್ಟಿಯಲ್ಲಿರುವ ಮನೆಗಳು ಹಾಗೂ ಹಳ್ಳಿಗಳ ಜಮೀನಿನಲ್ಲಿ ಮನೆ ಕಟ್ಟಲು ಇದ್ದ ನಿರ್ಬಂಧ ಸಡಿಲಗೊಳಿಸಲು ತೀರ್ವನಿಸಲಾಗಿದೆ. ಈ ಸಂಬಂಧ ಕಾನೂನು ಹಿಂಪಡೆಯಲಾಗುತ್ತಿದೆ.
  • ಬಗರ್​ಹುಕುಂ ಸಾಗುವಳಿ ಸಕ್ರಮಕ್ಕೆ ಅರ್ಜಿ ಸಲ್ಲಿಸಲು 6 ತಿಂಗಳು ಗಡುವು ವಿಸ್ತರಣೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net