

ನೀನು ವಿಶ್ವೇದೇವತೆಗಳಿಗೆ ಸಂಬಂಧಿಸಿದ ಎರಡು ಸೂಕ್ತಗಳನ್ನು ಅವರಿಗೆ ನೆನಪಿಸು. ಸಂತುಷ್ಟಗೊಂಡ ಅವರು ಯಜ್ಞದಲ್ಲಿ ಉಳಿದ ಸಂಪತ್ತೆಲ್ಲವನ್ನೂ ನಿನಗೆ ಅನುಗ್ರಹಿಸುತ್ತಾರೆ ಎಂಬುದೇ ಆ ಸಲಹಾಪೂರ್ವಕ ಮಾರ್ಗ. ತಂದೆಯ ಮಾತಿಗೆ ಗೌರವಕೊಟ್ಟು ಶೀಘ್ರವಾಗಿ ತೆರಳಿದ ಆತ, ತಂದೆಯ ಅಣತಿಯಂತೆಯೇ ಮಾಡುತ್ತಾನೆ. ಸಂತೋಷಗೊಂಡ ಅಂಗೀರಸರು ಆತನಿಗೆ ಯಜ್ಞದಲ್ಲಿ ಉಳಿದ ಎಲ್ಲವನ್ನೂ ಕೊಟ್ಟು ಕಳುಹಿಸುತ್ತಾರೆ.
ಅವನು ಅಲ್ಲಿಂದ ಊರಿಗೆ ಹೊರಟ. ಅವನು ಮುಂದೆ ಸಾಗುತ್ತಿರುತ್ತಾನೆ. ಇದ್ದಕ್ಕಿದ್ದಂತೆ ಮಾರ್ಗ ಮಧ್ಯದಲ್ಲಿ ದೇದೀಪ್ಯಮಾನವಾದ ಕಪ್ಪು ಒಡಲ ಒಬ್ಬ ಮಹಾಪುರುಷ ಪ್ರತ್ಯಕ್ಷ. ಆ ಮಹಾಪುರುಷ ಹೇಳುತ್ತಾನೆ : ನೀನು ಕೊಂಡು ಹೋಗುತ್ತಿರುವ ಸಂಪತ್ತೆಲ್ಲಾ ನನಗೆ ಸೇರಿದ್ದು. ಆದ್ದರಿಂದ ಇದಕ್ಕೆಲ್ಲ ನಾನು ಒಡೆಯ. ತಬ್ಬಿಬ್ಬಾದ ನಾಭಾಗ ಅದೆಲ್ಲವನ್ನೂ ತನಗೆ ಅಂಗೀರಸರು ಕೊಟ್ಟದ್ದಾಗಿ ಇದ್ದಸಂಗತಿಯನ್ನು ತಿಳಿಸುತ್ತಾನೆ. ಮಹಾಪುರುಷನ ಆದೇಶ - ಸಂಶಯವಿದ್ದರೆ ನಿನ್ನ ತಂದೆಯವರಲ್ಲಿ ವಿಚಾರಿಸು ಎಂದು. ಯೋಗ ದೃಷ್ಟಿಯಲ್ಲಿ ನಡೆದಿದ್ದನ್ನು ಅರಿತ ತಂದೆ, ಹೌದು. ನಿಜವಾಗಿ ಅವನಿಗೆ ಸೇರಬೇಕು. ನಿನ್ನ ಮುಂದೆ ಪ್ರತ್ಯಕ್ಷನಾದ ಮಹಾಪುರುಷ, ಮಹಾದೇವ, ರುದ್ರ ಎನ್ನುತ್ತಾನೆ. ಹಿಂದಿರುಗಿದ ನಾಭಾಗ, ತಂದೆಯವರು ತಿಳಿಸಿದ್ದನ್ನು ಮಹದೇವನಲ್ಲಿ ವಿನಂತಿಸಿಕೊಳ್ಳುತ್ತಾನೆ. ಸಂತೋಷಗೊಂಡ ಮಹಾದೇವ, ಸತ್ಯಸಂಧ ನಾಭಾಗನಿಗೆ ಅಷ್ಟೂ ಸಂಪತ್ತನ್ನು ಕೊಟ್ಟು ಅಂತರ್ಧಾನನಾಗುತ್ತಾನೆ. ಸುಳ್ಳು ಹೇಳಿದ್ದರೆ ಆತನ ಕಥೆ?
ಉಳಿದ, ಉಚ್ಛಿಷ್ಟ ಭಾಗವೇ ರುದ್ರನಿಗೇಕೆ? ಅದರ ಹಿಂದೆಯೂ ಒಂದು ಕಥೆ, ಎಲ್ಲರಿಗೂ ತಿಳಿದಿದ್ದೇ. ದಕ್ಷಪ್ರಜಾಪತಿ, ಪಾರ್ವತಿಯ ತಂದೆ, ಶಿವನ ಮಾವ. ಸ್ತ್ರೀ- ಪುರುಷ ಸಂಯೋಗದಿಂದ ಉತ್ಪತ್ತಿ ಮಾರ್ಗವನ್ನು ಕಂಡುಹಿಡಿದ ಅವನ ಮೇಲೆ ಬ್ರಹ್ಮದೇವರ ವಿಶೇಷ ಪ್ರೀತಿ. ಆತನ ಒಂದು ಯಜ್ಞಕ್ಕೆ ದೇವತೆಗಳೆಲ್ಲರೂ, ಮಹಾದೇವನೂ ಆಗಮಿಸಿರುತ್ತಾರೆ. ಯಜ್ಞಶಾಲೆಗೆ ದಕ್ಷ ಬಂದೊಡನೆಯೇ ಎಲ್ಲರೂ ಎದ್ದು ನಿಲ್ಲುತ್ತಾರೆ, ಬ್ರಹ್ಮ ಶಿವರನ್ನು ಹೊರತುಪಡಿಸಿ. ಕೋಪಗೊಂಡ ಮಾವ ದಕ್ಷ, ಶಿವನನ್ನು ವಾಚಾಮಗೋಚರವಾಗಿ ಬೈದು, ಇವನಿಗೆ ಇನ್ನುಮೇಲೆ ಯಜ್ಞಗಳಲ್ಲಿ ಪಾಲಿಲ್ಲದೆ ಹೋಗಲಿ ಎಂದು ಶಪಿಸುತ್ತಾನೆ. ಶಿವಗಣಗಳು ಮತ್ತಿತರ ಋಷಿಮುನಿಗಳು ಶಾಪ ಪ್ರತಿಶಾಪಗಳ ಮಧ್ಯೆ ಶಾಂತ ಸ್ವರೂಪನಾದ ಶಿವ ಮೌನವಾಗಿ ಹಿಂದಿರುಗುತ್ತಾನೆ.
ಕೆಲವು ಕಾಲದ ನಂತರ ದಕ್ಷನಿಂದ ಮತ್ತೊಂದು ವೈಭವೋಪೇತವಾದ ಯಜ್ಞದ ಆರಂಭ, ಎಲ್ಲರಿಗೂ ಆಹ್ವಾನ, ಶಿವ ಪಾರ್ವತಿಯರನ್ನು ಹೊರತುಪಡಿಸಿ. ತವರುಮನೆಯ ವಾಂಛಲ್ಯದಿಂದ ಶಿವ ಬೇಡವೆಂದರೂ ಯಜ್ಞಕ್ಕೆ ಪಾರ್ವತಿಯ ಆಗಮನ, ಗಣಗಳೊಡಗೂಡಿ. ತಂದೆ ಪಾರ್ವತಿಯನ್ನು ನೋಡುವುದೇ ಇಲ್ಲ. ಅವಮಾನವನ್ನು ಸಹಿಸದ ಪಾರ್ವತಿಯ ದೇಹತ್ಯಾಗ, ಯಜ್ಞಾಗ್ನಿಯಲ್ಲಿ.
ಶ್ರೀರಂಗಮಹಾಗುರುಗಳು ಹೇಳುತ್ತಾರೆ: ಅಲ್ಲಿ ಅಗ್ನಿ ಎನ್ನುವಾಗ, ಸಮಾಧಿ ಎಂಬ ಅಗ್ನಿ - ಪ್ರಾಣಾಪಾನಗಳನ್ನು ಮೂಲಾಧಾರದಿಂದ ಭ್ರೂಮಧ್ಯಸ್ಥಾನಕ್ಕೆ ಏರಿಸಿ, ಅಲ್ಲಿಂದ ಮುಂದುವರಿದು ಸಮಾಧಿ ಸ್ಥಿತಿಗೆ ಏರಿ, ಅದರಿಂದ ಉಂಟಾದ ಅಗ್ನಿಯಲ್ಲಿ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುತ್ತಾಳೆ. ಕೋಪಗೊಂಡ ಗಣಗಳು ಯಜ್ಞವನ್ನು ಧ್ವಂಸಮಾಡಲು ಉದ್ಯುಕ್ತವಾಗುತ್ತವೆ. ಆದರೆ ಭೃಗು ಮಹರ್ಷಿಗಳು ತಮ್ಮ ತಪಃಶಕ್ತಿಯಿಂದ ಋಭಗಳು ಎಂಬ ದೇವತೆಗಳನ್ನು ಸೃಷ್ಟಿಮಾಡಿ ರುದ್ರಗಣಗಳನ್ನೆಲ್ಲ ಓಡಿಸುತ್ತಾರೆ. ನಾರದರ ಮೂಲಕ, ಅಂದರೆ, ಶ್ರೀರಂಗಮಹಾಗುರುಗಳು ಹೇಳುವಂತೆ ಮನಸ್ತತ್ತ್ವ ದ ಮೂಲಕ ವಿಷಯ ತಿಳಿದ ಶಿವ ತನ್ನ ರೌದ್ರರೂಪದ ಒಂದೇ ಒಂದು ರೋಮದಿಂದ ಅತಿಘೊರ ವೀರಭದ್ರನನ್ನು ಸೃಷ್ಟಿಮಾಡುತ್ತಾನೆ. ವೀರಭದ್ರ ತನ್ನ ಗಣಗಳೊಂದಿಗೆ ಯಜ್ಞವನ್ನು ಧ್ವಂಸಮಾಡಿ ಇದ್ದವರೆಲ್ಲರಿಗೂ ಹೇಗೆಲ್ಲ ಬುದ್ಧಿಕಲಿಸಬೇಕೋ ಹಾಗೆಲ್ಲ ಬುದ್ಧಿಯನ್ನು ಕಲಿಸುತ್ತಾನೆ. ಕೊನೆಗೆ ವಿಷ್ಣುವಿನ ಸಹಕಾರದಿಂದ ಎರಡೂ ಕಡೆಗೂ ರಾಜಿ. ಯಜ್ಞಗಳು ಮುಂದುವರಿಯಲೋಸುಗ ಮಹಾದೇವನಿಗೆ ಕೊನೆಯಲ್ಲಿ ಉಳಿದ ಭಾಗವೆಲ್ಲಾ ಅರ್ಪಣೆ. ಆದ್ದರಿಂದಲೇ ಅವನು ಉಚ್ಛಿಷ್ಟ ಭುಕ್. ಈ ಕಾರಣದಿಂದಲೇ ಆತ, ತನ್ನಭಾಗವನ್ನು ನಾಭಾಗನಿಂದ ಕೇಳಿದ್ದು.
(ಲೇಖಕರು, ಸಂಸ್ಕೃತಿ ಚಿಂತಕರು,
ಅಷ್ಟಾಂಗಯೋಗ ವಿಜ್ಞಾನಮಂದಿರಂ)