

ವಿಜಯವಾಣಿ ಸುದ್ದಿಜಾಲ ಪಿರಿಯಾಪಟ್ಟಣ
ಲಾಕ್‌ಡೌನ್ ಹಿನ್ನೆಲೆಯಲ್ಲಿ ಭಾನುವಾರ ರಾಜ್ಯದಲ್ಲಿ ಕರೆ ನೀಡಲಾಗಿದ್ದ ಭಾನುವಾರದ ಕರ್ಫ್ಯೂಗೆ ಪಿರಿಯಾಪಟ್ಟಣ ತಾಲೂಕಿನಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ.
ಸರ್ಕಾರದ ಕೆಲವು ನಿಯಮಗಳೊಂದಿಗೆ ಲಾಕ್‌ಡೌನ್ ಸಡಿಲಿಕೆಯ ಬಳಿಕೆ ಪ್ರತಿನಿತ್ಯವೂ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಪಟ್ಟಣದ ಸಂತೇಪೇಟೆ, ಬಿ.ಎಂ.ರಸ್ತೆ ಮತ್ತಿತರ ಪ್ರದೇಶಗಳು ಮುಂಜಾನೆಯಿಂದಲೇ ಜನರ ಓಡಾಟವಿಲ್ಲದೆ ಬಿಕೋ ಎನ್ನುತ್ತಿದ್ದವು.
ಕರೋನಾ ಸೋಂಕು ಹರಡುವಿಕೆಯ ಭಯದಿಂದ ಜನರೇ ತಮ್ಮ ಮನೆಗಳಿಂದ ಹೊರ ಬಾರದಿದ್ದುದು ಕಂಡು ಬಂತು. ಸಾರ್ವಜನಿಕರು ಮತ್ತು ವಾಹನಗಳ ಓಡಾಟ ವಿರಳವಾಗಿತ್ತು. ಟ್ಯಾಕ್ಸಿ ಮತ್ತು ಆಟೋ ಚಾಲಕರು ಸ್ವಯಂ ಪ್ರೇರಿತರಾಗಿ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿ ರಸ್ತೆಗಿಳಿಯಲಿಲ್ಲ.
ಹಾಲು ಉತ್ಪನ್ನಗಳ ಮಾರಾಟ ಕೇಂದ್ರಗಳು ಮತ್ತು ಮೆಡಿಕಲ್ ಸ್ಟೋರ್‌ಗಳು ಮಾತ್ರ ಬಾಗಿಲು ತೆರೆದು ವಹಿವಾಟು ನಡೆಸಿದವು. ಮಾಂಸದಂಗಡಿ ಮತ್ತು ಮೀನು ಮಾರಾಟ ಮಳಿಗೆಗಳಿಗೆ ಅವಕಾಶ ನೀಡಿದ್ದರೂ ಸಹ ಗ್ರಾಹಕರಿಲ್ಲದೇ ಬಿಕೋ ಎನ್ನುತ್ತಿದ್ದವು. ಪಟ್ಟಣದಲ್ಲಿ ಆಸ್ಪತ್ರೆ ಎಂದಿನಂತೆ ಕಾರ್ಯನಿರ್ವಹಿಸಿತು. ಕರ್ಫ್ಯೂವಿಗೆ ತಾಲೂಕಿನ ಬೈಲುಕುಪ್ಪೆ, ಬೆಟ್ಟದಪುರ, ಕಿತ್ತೂರು, ರಾವಂದೂರು, ಕಂಪಲಾಪುರ, ಪಂಚವಳ್ಳಿ ಸೇರಿದಂತೆ ಪ್ರಮುಖ ಊರುಗಳಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.