ದೇಶಿಯರಿಂದಲೇ ವೇದಾಭ್ಯಾಸ ಕಡೆಗಣನೆ

dharmika
ಯಜುಃ ಸಂಹಿತಾ ಯಾಗದ ಪೂರ್ಣಾಹುತಿ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮೀಜಿ ಅವರಿಗೆ ಫಲ ಸಮರ್ಪಣೆ ಮಾಡಲಾಯಿತು. ಕೆ.ಸಿ.ನಟರಾಜ ಭಾಗವತ್, ಬಿ.ಕೆ.ವೆಂಕಟೇಶಮೂರ್ತಿ, ಮುಂತಾದವರಿದ್ದರು.
Published on

ಶಿವಮೊಗ್ಗ: ನಮ್ಮ ದೇಶಕ್ಕೆ ಪಾಶ್ಚಾತ್ಯರು ಬಂದು ವೇದಾಭ್ಯಾಸ ಮಾಡುತ್ತಿದ್ದಾರೆ. ಆದರೆ ಇಲ್ಲಿನವರು ನಿವೃತ್ತಿ ಬಳಿಕ ವೇದ ಕಲಿಯುವ ಚಿಂತನೆ ಮಾಡುತ್ತಾರೆ ಎಂದು ವಿಜಯನಗರ ಜಿಲ್ಲೆಯ ಹೊಸಪೇಟೆ ಚಿಂತಾಮಣಿ ಮಠದ ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಮಂಗಳವಾರ ಏರ್ಪಡಿಸಿದ್ದ ಯಜುಃ ಸಂಹಿತಾ ಯಾಗದ ಪೂರ್ಣಾಹುತಿಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ವಿಪ್ರರು ಪ್ರಸ್ತುತ ಅನುಷ್ಠಾನಗಳನ್ನು ತ್ಯಜಿಸಿದ್ದಾರೆ. ಸಂಸ್ಕಾರ ಬಿಟ್ಟಿದ್ದಾರೆ. ತ್ರಿಕಾಲ ಜಪ, ಅನುಷ್ಠಾನ ಮಾಡಬೇಕಿತ್ತು. ಒಂದು ಹೊತ್ತು ಊಟ, ಮೂರು ಹೊತ್ತು ಜಪ ಎಂದು ಶಿವ ಹೇಳಿದ್ದ. ಆದರೆ ಒಂದು ಹೊತ್ತು ಜಪ, ಮೂರು ಹೊತ್ತು ಊಟ ಎಂಬ ಪರಿಸ್ಥಿತಿ ಈಗ ನಿರ್ಮಾಣವಾಗಿದೆ ಎಂದರು.

ಎಷ್ಟು ಹಣವಿದ್ದರೂ ಮನಸ್ಸು ಖರೀದಿಗೆ ಸಿಗುವುದಿಲ್ಲ. ಮನಸ್ಸಿನ ಸಂಸ್ಕರಣೆ ಮಾಡುವುದು ಕಷ್ಟದ ಕೆಲಸ. ತ್ರೇತಾಯುಗದಲ್ಲಿ ಬಿಲ್ಲು, ದ್ವಾಪರ ಯುಗದಲ್ಲಿ ಕತ್ತಿ, ಗುರಾಣಿಗಳೇ ಆಯುಧಗಳಾಗಿದ್ದವು. ಕಲಿಯುಗದಲ್ಲಿ ನಾಲಿಗೆಯೇ ಆಯುಧ. ಪರಮಾತ್ಮನ ಸ್ತುತಿ ನಿಂದನೆಗೆ ನಾಲಿಗೆಯೊಂದೇ ಸಾಕು ಎಂದು ಹೇಳಿದರು.

ಮನುಷ್ಯನ ದಿಕ್ಕು ತಪ್ಪಿಸಲು ಇಂದ್ರಿಯಗಳನ್ನು ಪರಮಾತ್ಮನೇ ಕೊಟ್ಟಿದ್ದ. ಆದರೆ ಈಗ ಮೊಬೈಲ್ ಒಂದೇ ಸಾಕು. ಮೊಬೈಲ್ ಕೊಟ್ಟಿಲ್ಲ ಎಂದರೆ ಕೈ ಕೊಯ್ದು ಕೊಳ್ಳಲು ಮುಂದಾಗುವ ಮಕ್ಕಳೂ ಇದ್ದಾರೆ. ಅದರಲ್ಲೂ ರೀಲ್ಸ್ ಹುಚ್ಚು ಹೆಚ್ಚಿದೆ. ಮಕ್ಕಳಿಗಿಂತ ತಾಯಂದಿರಲ್ಲೇ ರೀಲ್ಸ್ ಹುಚ್ಚು ಹೆಚ್ಚು. ಹೀಗಿರುವಾಗಿ ಮಕ್ಕಳನ್ನು ಮೊಬೈಲ್‌ನಿಂದ ದೂರವಿಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಪ್ರ ಸಮಾಜದ ಭದ್ರಾವತಿಯ ಬಿ.ಕೃಷ್ಣ ಉಪಾಧ್ಯ, ಸೊರಬ ಆನವಟ್ಟಿಯ ಪ್ರಭಾ ಶರತ್ ಹೊಂಕಣ್, ಸಾಗರದ ಎಂ.ಪಿ.ಕಷ್ಣಮೂರ್ತಿ, ಹೊಸನಗರದ ಶ್ರೀಧರ್, ತೀರ್ಥಹಳ್ಳಿ ತಾಲೂಕಿನ ಸೂರ್ಯನಾರಾಯಣ ಐತಾಳ್, ಮತ್ತೂರಿನ ಲಕ್ಷ್ಮೀಕೇಶವ ಅವಧಾನಿ, ಶಿವಮೊಗ್ಗದ ವಿಜಯಲಕ್ಷ್ಮೀ ರಾಮಭಟ್, ಗೋಪಾಲಕೃಷ್ಣ ಕೊಳ್ತಾಯ, ಸತೀಶ್ ಐಯ್ಯಂಗಾರ್ ಅವರನ್ನು ಗೌರವಿಸಲಾಯಿತು.

ಜಿಲ್ಲಾ ಬ್ರಾಹ್ಮಣ ಮಹಾಸಭಾಧ್ಯಕ್ಷ ಕೆ.ಸಿ.ನಟರಾಜ ಭಾಗವತ್, ಪ್ರಮುಖರಾದ ಸೂರ್ಯನಾರಾಯಣ, ಕುಮಾರ ಶಾಸ್ತ್ರಿ, ಚಂದ್ರಶೇಖರ, ಬಿ.ಕೆ.ವೆಂಕಟೇಶಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net