ಕನ್ನಡಿಗರ ಉದ್ಯೋಗಕ್ಕಾಗಿ ಜುಲೈ 1ರಂದು ಕರವೇ ಹೋರಾಟ ಆರಂಭ

Karave Narayana gowda
Published on

ಬೆಂಗಳೂರು ಕನ್ನಡ ನಾಮಫಲಕ ಚಳವಳಿಯ ನಂತರ ಬಹುದೊಡ್ಡ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸಜ್ಜಾಗಿದೆ. ‘ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ’ ಎಂಬ ಘೋಷಣೆಯೊಂದಿಗೆ ಜು.1ರಂದು ರಾಜ್ಯಾದ್ಯಂತ ಬೃಹತ್ ಧರಣಿ ಸತ್ಯಾಗ್ರಹ ನಡೆಸುವುದಾಗಿ ೋಷಿಸಿದೆ.

ಕರ್ನಾಟಕದ ಎಲ್ಲ ಬಗೆಯ ಉದ್ಯೋಗದಲ್ಲಿ ಕನ್ನಡಿಗರಿಗೆ ಸಿಂಹಪಾಲು ಇರಬೇಕೆಂಬುದು ನ್ಯಾಯಯುತವಾದ ಬೇಡಿಕೆ. ಇದಕ್ಕಾಗಿಯೇ ಡಾ.ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಲಾಗಿದೆ. ಆದರೆ, ಖಾಸಗಿ ವಲಯ ದೊಡ್ಡದಾಗಿ ಬೆಳೆದ ಪರಿಣಾಮ ಹಾಗೂ ವರದಿಯನ್ನು ಸಮರ್ಪಕವಾಗಿ ಜಾರಿಯಾಗದ ಹಿನ್ನೆಲೆಯಲ್ಲಿ ಕನ್ನಡದ ಯುವ ಸಮುದಾಯ ಉದ್ಯೋಗವಿಲ್ಲದ ಬಳಲುವಂತಾಗಿದೆ ಎಂದು ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ತಿಳಿಸಿದ್ದಾರೆ.

ಕರ್ನಾಟಕಕ್ಕೆ ಹೊರ ರಾಜ್ಯಗಳಿಂದ ಅವ್ಯಾಹತವಾಗಿ ವಲಸೆ ನಡೆಯುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಇದು ತೀವ್ರ ಸ್ವರೂಪ ಪಡೆದಿದೆ. ಬೆಂಗಳೂರು ಸೇರಿ ರಾಜ್ಯದ ಮಹಾನಗರಗಳು ವಲಸಿಗರ ಹಾವಳಿಯಿಂದ ಸಂಪೂರ್ಣ ಬದಲಾಗುತ್ತಿವೆ. ಕನ್ನಡಿಗರ ಉದ್ಯೋಗಗಳನ್ನು ಹೊರರಾಜ್ಯದವರು ಕಿತ್ತುಕೊಳ್ಳುತ್ತಿದ್ದಾರೆ. ಕನ್ನಡಿಗರು ತಮ್ಮ ನೆಲದಲ್ಲೇ ನಿರುದ್ಯೋಗಿಗಳಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ವೇದಿಕೆ ದೊಡ್ಡ ಪ್ರಮಾಣದ ಚಳವಳಿಗೆ ಸಜ್ಜಾಗಿದೆ ಎಂದು ತಿಳಿಸಿದ್ದಾರೆ.

2014ರಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಿಂದ ವಿಧಾನಸೌಧದವರೆಗೆ ಬಹುದೊಡ್ಡ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗಾಗಿ ಆಗ್ರಹಿಸಿತ್ತು. ಆದರೆ ನಮ್ಮ ಕೂಗಿಗೆ ಇದುವರೆಗೆ ರಾಜ್ಯ ಸರ್ಕಾರಗಳು ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ನಾವು ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಕಾಲ ಮಿಂಚಿ ಹೋಗುತ್ತದೆ. ನಾವು ಮಾಡಿದ ತಪ್ಪುಗಳಿಗಾಗಿ, ನಮ್ಮಬೇಜವಾಬ್ದಾರಿಗೆ ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಶಪಿಸುವ ಕಾಲ ಬರುತ್ತದೆ. ಹೀಗಾಗಿ ಕನ್ನಡಿಗರನ್ನು, ಕನ್ನಡಿಗರ ಬದುಕನ್ನು ಉಳಿಸುವ ಕಾರ್ಯವನ್ನು ನಾವು ಮಾಡಲೇಬೇಕಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net