

ಸೊರಬ: ಪಕ್ಷ ಸಂಘಟನೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತನ ಸಹಕಾರ ಅಗತ್ಯವಿದೆ. ಆಂತರಿಕ ಗುಂಪುಗಾರಿಕೆಯಿಂದ ಹೊರಬಂದರೆ ಮಾತ್ರ ತಾಲೂಕಿನಲ್ಲಿ ಜೆಡಿಎಸ್ ಪಕ್ಷವನ್ನು ಸದೃಢವಾಗಿ ಕಟ್ಟಲು ಸಾಧ್ಯ ಎಂದು ಜೆಡಿಎಸ್ ಹಿರಿಯ ಮುಖಂಡ ಬಾಸೂರು ಚಂದ್ರೇಗೌಡ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಜೆಡಿಎಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷ ನೀಡಿದ ಜವಾಬ್ದಾರಿ ಸರಿಯಾಗಿ ಮಾಡದೆ ಇತರ ಪಕ್ಷದ ಏಜೆಂಟರಂತೆ ಕೆಲಸ ಮಾಡುತ್ತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸುವುದಾಗಿ ಹೇಳಿದರೆ ಜೆಡಿಎಸ್ ಅಭ್ಯರ್ಥಿ ಗೆಲುವು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಪಕ್ಷ ವಿರೋಧಿಗಳಿಗೆ ಜಿಲ್ಲಾ ಹಾಗೂ ರಾಜ್ಯ ಮುಖಂಡರು ಮಣೆಹಾಕುತ್ತಾರೆ. ತಾಲೂಕಿನಲ್ಲಿ ಇನ್ನೊಬ್ಬರು ತಾವೇ ಅಧ್ಯಕ್ಷರು ಎಂದು ಹೇಳಿಕೊಂಡು ಸಭೆ, ಸಮಾರಂಭ ಮಾಡಿದರೆ ಜಿಲ್ಲಾ ಮುಖಂಡರು ಅವರಿಗೂ ಬೆಂಬಲ ನೀಡುತ್ತಾರೆ. ಹೀಗಿರುವುವಾಗ ಪಕ್ಷದಲ್ಲಿ ಒಗ್ಗಟ್ಟು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು?
ಇಂದು ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲದಂತಾಗಿ ವಂಶ ಪರಂಪರೆಯ ರಾಜಕಾರಣ, ಹಣಕ್ಕಾಗಿ ಮತಹಾಕುವ ಸಂಪ್ರದಾಯ, ಸಮಾಜ ಸೇವೆ ಮಾಡದವರಿಗೆ ಟಿಕೆಟ್, ಜಾತಿಯತೆ ಹೀಗೆ ಮಾನವಿಯ ಸಂಬಂಧಗಳು ಇಲ್ಲದಂತಾಗಿ ಪಕ್ಷಕ್ಕೆ ಮತಹಾಕಬೇಕಾದವರು ವಿರೋಧಿಗಳಿಗೆ ಮತಹಾಕುತ್ತಾರೆ. ಇದನ್ನು ಜಿಲ್ಲಾ ಮುಖಂಡರು ಗಂಭೀರವಾಗಿ ಪರಿಗಣಿಸಬೇಕು ಎಂದರು.
ತಾಲೂಕಿನಲ್ಲಿ ಅಧಿಕಾರಕ್ಕಾಗಿ 40 ವರ್ಷಗಳಿಂದ ಪೈಪೋಟಿ ನಡೆಯುತ್ತಿದೆ. ಅಭಿವೃದ್ಧಿ ಮಾತ್ರ ಆಗುತ್ತಿಲ್ಲ. ಜನಸಾಮಾನ್ಯರ ಸಮಸ್ಯೆಗಳನ್ನು ಕೇಳುವವರು ಇಲ್ಲದಂತಾಗಿದೆ. ಜನಸೇವೆ ಮಾಡಲು ಅಧಿಕಾರ ಬೇಡ. ಕಾರ್ಯಕರ್ತರ ಜತೆಗೂಡಿ ಪಕ್ಷದ ಸದಸ್ಯತ್ವ ಅಭಿಯಾನ ನಡೆಸುವುದಾಗಿ ತಿಳಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಗಣಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಯ್ಯ, ಮುಖಂಡರಾದ ಆನಂದ ನಾಯ್ಕ, ಗಣೇಶ್, ರಾಜು, ತುಳಜಪ್ಪ, ರಾಮಪ್ಪ, ಮಹೇಶ್ ಹೆಗೆಡೆ, ಸುಧೀರ್ ಭಟ್ಟ, ಎಂ.ಕುಮಾರ, ನಾಗಪ್ಪ, ವಿಷ್ಣು, ಶಿವಮೂರ್ತಿ, ಬಸನಗೌಡ ಪಾಟೀಲ್, ಅಶೋಕ ಇತರರಿದ್ದರು.