

ಬೆಂಗಳೂರು: ಇಬ್ಬರು ಅಪ್ರಾಪ್ತ ಬಾಲಕಿಯರ ಹತ್ಯೆ ಮಾಡಿ ಪರಾರಿಯಾಗಿದ್ದ ಮಲತಂದೆಯನ್ನು
ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಡೆಹರಾಡೂನ್ ಮೂಲದ ಸುಮೀತ್ ಮೋಹನ್(೪೦) ಬಂಧಿತ ಆರೋಪಿ.
ಆರೋಪಿಯು ಪತ್ನಿ ಹಾಗೂ ಮಕ್ಕಳ ಮೇಲೆ ಅತಿಯಾದ ಅನುಮಾನ ಹೊಂದಿದ್ದ ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ಆರೋಪಿ ಹಾಗೂ ಆತನ ಪತ್ನಿ ಉತ್ತರ ಪ್ರದೇಶದ ಮೂಲದವರು. ಆರೋಪಿಯೇ ಸಮ್ಮತಿಸಿ ಎರಡನೇ ಮದುವೆಯಾಗಿದ್ದ. ಕಳೆದ ೩ ವರ್ಷದಿಂದ ದಾಸರಹಳ್ಳಿಯ ಕಾವೇರಿ ಬಡಾವಣೆಯಲ್ಲಿ ದಂಪತಿ ವಾಸವಿದ್ದರು. ಇತ್ತೀಚಿಗೆ ಪತ್ನಿ ಹಾಗೂ ಮಕ್ಕಳ ಬಗ್ಗೆ ಶಂಕಿಸಲಾರಂಭಿಸಿದ್ದ ಆರೋಪಿ ಜಗಳವಾಡುತ್ತಿದ್ದ. ಎರಡು ತಿಂಗಳಿನಿಂದ ಬಾಡಿಗೆ ಕೂಡ ನೀಡದಿದ್ದರಿಂದ ಮನೆ ಖಾಲಿ ಮಾಡುವಂತೆ ಮಾಲೀಕರು ಸೂಚಿಸಿದ್ದರು.
ಮತ್ತೊಂದೆಡೆ ಪದೇ ಪದೇ ಜಗಳವಾಡುವ ಗಂಡನೇ ತನ್ನ ಮಕ್ಕಳಿಬ್ಬರಿಗೆ ಎಂದಾದರೂ ಕಂಟಕವಾಗಬಹುದು ಎಂಬ ಅನುಮಾನ ಹೊಂದಿದ್ದ ಆತನ ಪತ್ನಿ, ಮಕ್ಕಳಿಬ್ಬರನ್ನೂ ಹೆಬ್ಬಾಳದಲ್ಲಿರುವ ತನ್ನ ಸಹೋದರನ ಮನೆಯಲ್ಲಿ ಬಿಟ್ಟು ಬಂದಿದ್ದಳು. ಸೋದರ ಮಾವನ ಮನೆಯಲ್ಲಿಯೇ ಇದ್ದ ಸಹೋದರಿಯರಿಬ್ಬರೂ ಕೆಲ ದಿನಗಳ ಕಾಲ ಅಲ್ಲಿಂದಲೇ ಶಾಲೆಗೆ ಹೋಗುತ್ತಿದ್ದರು. ಆದರೆ ೨೦ ದಿನಗಳ ಹಿಂದಷ್ಟೆ ಪತ್ನಿ ಹಾಗೂ ಆಕೆಯ ಸಹೋದರನ ಬಳಿ ಕ್ಷಮೆಯಾಚಿಸಿದ್ದ ಆರೋಪಿ ಸುಮಿತ್, ಮಕ್ಕಳನ್ನ ಮತ್ತೆ ಮನೆಗೆ ಕರೆ ತಂದಿದ್ದ. ಇದೇ ವಿಚಾರಕ್ಕೆ ಮನೆಯಲ್ಲಿ ಜಗಳ ನಡೆದಿತ್ತು. ಶನಿವಾರ ಮಧ್ಯಾಹ್ನ ಕೂಡ ಆರೋಪಿ ಮಕ್ಕಳ ಜತೆಗೆ ಗಲಾಟೆ ನಡೆದಿದ್ದು, ಅದು ವಿಕೋಪಕ್ಕೆ ಹೋದಾಗ ಮನೆಯಲ್ಲಿದ್ದ ಮಾರಕಾಸ್ತ್ರಗಳಿಂದ ಇಬ್ಬರ ಮಕ್ಕಳ ಕುತ್ತಿಗೆಗೆ ಕೊಚ್ಚಿ ಭೀಕರವಾಗಿ ಹತ್ಯೆಗೈದಿದ್ದಾನೆ. ಬಳಿಕ ರಕ್ತದ ಬಟ್ಟೆಯಲ್ಲೇ ಮನೆಯಿಂದ ಪರಾರಿಯಾಗಿದ್ದ. ಮಕ್ಕಳಿಬ್ಬರ ಹತ್ಯೆಯಿಂದ ಆಘಾತಕ್ಕೊಳಗಾಗಿರುವ ತಾಯಿ, ಪೊಲೀಸರ ಮುಂದೆ ನಡೆದಿದ್ದೆಲ್ಲವನ್ನೂ ವಿವರಿಸಿದ್ದಾಳೆ. ತಾಯಿಯ ಹೇಳಿಕೆಯ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಪತ್ತೆ ಮಾಡಿ ಬಂಧಿಸಿದ್ದಾರೆ.
ಜೋಡಿ ಕೊಲೆ ಮಾಡಿದ್ದ ಆರೋಪಿಯನ್ನು ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ಕೋರ್ಟ್ ಮುಂದೆ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು. ತನಿಖೆ ನಂತರ ಕೊಲೆ ನಿಖರ ಕಾರಣ ತಿಳಿದು ಬರಲಿದೆ.
ವಿ.ಜೆ.ಸಜಿತ್, ಈಶಾನ್ಯ ವಿಭಾಗದ ಡಿಸಿಪಿ.