

ಎನ್.ಆರ್.ಪುರ: ಪಟ್ಟಣದಲ್ಲಿ 15 ವರ್ಷಗಳ ಹಿಂದೆ ಪಟ್ಟಣ ಪಂಚಾಯಿತಿಯಿಂದ 20 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ರಂಗಮಂದಿರದ ಬಣ್ಣ ಮಾಸಿ ಕಳಾಹೀನವಾಗಿದೆ. ಇಷ್ಟೇ ಆಗಿದ್ದರೆ ಗಮನಾರ್ಹ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಸೂಕ್ತ ನಿರ್ವಹಣೆ ಇಲ್ಲದೆ ಹಾಳುಬಿದ್ದು ಅಕ್ರಮ ಚಟುವಟಿಕೆಗೆ ಬಳಸುತ್ತಿದ್ದಾರೆ. ಜನರಿಗೆ ಮನರಂಜನೆ ನೀಡುವ ಮಂದಿರದಲ್ಲಿ ರಾತ್ರಿ ಕುಡುಕರ ಸದ್ದು ಕೇಳಿಸುತ್ತಿದೆ.
ಪಟ್ಟಣದ ವಾಟರ್ ಟ್ಯಾಂಕ್ ವೃತ್ತದಲ್ಲಿರುವ ರಂಗಮಂದಿರದಲ್ಲಿ ಯಾವುದೇ ರೀತಿಯ ಮನರಂಜನಾ ಕಾರ್ಯಕ್ರಮವಾಗಲಿ, ಸಭೆ, ಸಮಾರಂಭಗಳಾಗಲಿ ನಡೆಯುತ್ತಿಲ್ಲ. ಇದನ್ನು ನಿರ್ಮಾಣ ಮಾಡಿ ಕೆಲವು ವರ್ಷಗಳು ಮಾತ್ರ ಸಾಂಸ್ಕೃತಿಕ ಚಟುವಟಿಕೆ, ರಾಜಕೀಯ ಸಭೆ, ಸಮಾರಂಭಗಳು ನಡೆದವು. ಇಲ್ಲಿಯೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗಿತ್ತು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಲವು ಮಹನೀಯರ ಜಯಂತಿಗಳನ್ನು ಆಚರಿಸಲಾಗುತ್ತಿತ್ತು. ಆದರೆ ನಿರ್ಮಾಣವಾದ ಕೆಲವು ವರ್ಷಗಳ ನಂತರ ಇದನ್ನು ನಿರ್ಲಕ್ಷಿೃಸಲಾಯಿತು.
ಪಟ್ಟಣದಲ್ಲಿ ದಿನನಿತ್ಯ ಹಲವಾರು ಕಾರ್ಯಕ್ರಮಗಳು ನಡೆಯುತ್ತವೆ. ಈ ರಂಗಮಂದಿರದಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಸಂಘ, ಸಂಸ್ಥೆಗಳಿಗೆ ಉತ್ತೇಜಿಸಬೇಕು. ಇದರಿಂದ ಸಾರ್ವಜನಿಕರಿಗೂ ಬಹಳ ಅನುಕೂಲವಾಗಲಿದೆ. ಪಟ್ಟಣದ ಜನರಿಗೆ ರಂಗಮಂದಿರ ಹತ್ತಿರವಾಗುವುದರಿಂದ ಹಾಗೂ ರಂಗಮಂದಿರದ ಸುತ್ತಮುತ್ತ ಅಂಗಡಿ ಮಳಿಗೆಗಳು ಇರುವುದರಿಂದ ಜನರಿಗೆ ಅನುಕೂಲವಾಗಲಿದೆ. ಶಾಲಾ ಮಕ್ಕಳ ಕಾರ್ಯಕ್ರಮಕ್ಕೂ ಸಹಾಯಕವಾಗಲಿದೆ.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನಡೆಸುವ ವಿವಿಧ ಜಯಂತಿ, ರಾಷ್ಟ್ರೀಯ ಹಬ್ಬಗಳನ್ನು ನಾಮ್‌ಕೇವಸ್ತೆಗೆ ಕಚೇರಿ ಕೊಠಡಿಯಲ್ಲೇ ಆಚರಿಸುವ ಬದಲು ಇಂಥ ಬಯಲು ರಂಗಮಂದಿರದಲ್ಲಿ ಆಚರಿಸಿದರೆ ಸಾರ್ವಜನಿಕರಿಗೂ ಕಾರ್ಯಕ್ರಮಗಳ ಮಾಹಿತಿ ದೊರಕಲಿದೆ. ಎಲ್ಲದಕ್ಕೂ ಪಪಂ ಗಮನಹರಿಸಬೇಕು.
ಸೌಕರ್ಯಗಳಿಲ್ಲ: ರಂಗಮಂದಿರದಲ್ಲಿ ಮೂಲ ಸೌಕರ್ಯಗಳು ಇಲ್ಲದಿರುವುದರಿಂದ ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಸಂಘಸಂಸ್ಥೆಗಳು ಮುಂದೆ ಬರುವುದಿಲ್ಲ. ರಂಗಮಂದಿರದಲ್ಲಿ ಸುಸಜ್ಜಿತ ಶೌಚಗೃಹವಿದ್ದರೂ ನಿರ್ವಹಣೆ ಇಲ್ಲದೆ ಹಾಳು ಬಿದ್ದಿವೆ. ಇಲ್ಲಿನ ಸಾಮಗ್ರಿಗಳಿಗೆ ತುಕ್ಕು ಹಿಡಿಯುವ ಸ್ಥಿತಿ ತಲುಪಿವೆ. ರಂಗ ಮಂದಿರದ ವೇದಿಕೆ ಶೀಟುಗಳು ಹಳೇಯದಾಗಿರುವುದರಿಂದ ಪುಡಿಯಾಗುವ ಹಂತ ತಲುಪಿವೆ. ರಂಗಮಂದಿರ ನಿರ್ಮಾಣದ ನಂತರ ಇದೂವರೆಗೂ ಸುಣ್ಣಬಣ್ಣ ಕಂಡಿಲ್ಲ. ಇದರಿಂದ ರಂಗಮಂದಿರದ ಸೌಂದರ್ಯವೇ ಇಲ್ಲದಂತಾಗಿದೆ.
ವಿದ್ಯುತ್ ಸಂಪರ್ಕ: ರಂಗಮಂದಿರದ ಪ್ರದೇಶದಲ್ಲಿ ರಾತ್ರಿ ವಿದ್ಯುತ್ ಇಲ್ಲದಿರುವುದರಿಂದ ಕತ್ತಲಾವರಿಸುತ್ತದೆ. ಈ ಸಂದರ್ಭದಲ್ಲಿ ಪಡ್ಡೆ ಹುಡುಗರ ಅಡ್ಡವಾಗುತ್ತದೆ. ರಂಗಮಂದಿರದ ವೇದಿಕೆಯಲ್ಲಿ ಮದ್ಯಪಾನ, ಧೂಮಪಾನ ಮಾಡುತ್ತಾರೆ. ವಿದ್ಯುತ್ ದೀಪಗಳನ್ನು ಅಳವಡಿಸಿ ಬೆಳಕು ನೀಡಿದರೆ ಅಕ್ರಮ ಚಟುವಟಿಕೆ ತಪ್ಪಿಸಬಹುದು. ಆವರಣದಲ್ಲಿ ಕೆಲವರು ತ್ಯಾಜ್ಯ ಸುರಿಯುತ್ತಿದ್ದಾರೆ.
ಶೌಚಗೃಹ ಸಮಸ್ಯೆ: ರಂಗ ಮಂದಿರದ ಸುತ್ತಮುತ್ತ ಪಪಂನಿಂದ 18 ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ರಂಗಮಂದಿರದ ಪಕ್ಕದಲ್ಲೇ ಮಹಿಳೆಯರ ಹಾಗೂ ಪುರುಷರ ಪ್ರತ್ಯೇಕ ಶೌಚಗೃಹ ವ್ಯವಸ್ಥೆ ಮಾಡಲಾಗಿದೆ. ಆದರೆ ರಂಗಮಂದಿರದ ಸುತ್ತಮುತ್ತ ಇರುವ ಅಂಗಡಿ ಬಾಡಿಗೆದಾರರಿಗೆ ಶೌಚಗೃಹದ ಸೇವೆ ದೊರೆಯುತ್ತಿಲ್ಲ. ಇಲ್ಲಿನ ಅಂಗಡಿ ಬಾಡಿಗೆದಾರರು ಬಸ್ ನಿಲ್ದಾಣದ ಶೌಚಗೃಹಕ್ಕೆ ಹೋಗಬೇಕು. ಅಲ್ಲಿಗೆ ಹೋಗಿ ಬರುವಷ್ಟರಲ್ಲಿ ಅಂಗಡಿ ಕಾಯುವುದು ಸಮಸ್ಯೆಯಾಗಿದೆ. ರಂಗಮಂದಿರದ ಶೌಚಗೃಹ ಸ್ವಚ್ಛಗೊಳಿಸಿ ಕೊಟ್ಟಲ್ಲಿ ಅಂಗಡಿ ಬಾಡಿಗೆದಾರರಿಗೆ ಅನುಕೂಲವಾಗಲಿದೆ. ಸಂಜೆ ಸಮಯದಲ್ಲಿ ಪಾನಿಪೂರಿ, ಗೋಬಿ ಮಂಚೂರಿ ಅಂಗಡಿಗಳಲ್ಲಿ ಮಹಿಳೆಯರೂ ವ್ಯಾಪಾರ ಮಾಡುತ್ತಾರೆ. ಇವರಿಗೂ ಶೌಚಗೃಹದ ಸಮಸ್ಯೆ ಎದುರಾಗಿದೆ. ಪಪಂಗೆ ಇವೆಲ್ಲವೂ ಗೊತ್ತಿದ್ದರೂ ಮೌನವಾಗಿದೆ. ಅಂಗಡಿ ಬಾಡಿಗೆಯನ್ನು ಕಡ್ಡಾಯವಾಗಿ ಕಟ್ಟಿಸಿಕೊಳ್ಳುವ ಪಪಂ, ಬಾಡಿಗೆದಾರರಿಗೆ ಇರುವ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ.
ಸಿಸ್ಟನ್ ಮೇಲೆ ಡ್ರಮ್: ರಂಗಮಂದಿರಕ್ಕೆ ನೀರಿನ ವ್ಯವಸ್ಥೆಗಾಗಿ ಸಿಸ್ಟನ್ ಅಳವಡಿಸಿ ಸುತ್ತಲೂ ನಲ್ಲಿಗಳನ್ನು ಅಳವಡಿಸಲಾಗಿತ್ತು. ರಂಗಮಂದಿರದ ಸುತ್ತಲೂ ಇರುವ ಅಂಗಡಿ ಮಳಿಗೆಗಳಲ್ಲಿ ಕೆಲವು ಅಂಗಡಿಗಳಿಗೆ ಮಾತ್ರ ಮಳಿಗೆಯ ಒಳಭಾಗಕ್ಕೇ ನೀರಿನ ಸೌಲಭ್ಯ ಇದೆ. ಆದರೆ ಇನ್ನುಳಿದ ಅಂಗಡಿಯವರು ಈ ಸಿಸ್ಟಿನ್‌ನ ನಲ್ಲಿಯಿಂದ ನೀರು ಹಿಡಿದುಕೊಳ್ಳುತ್ತಿದ್ದರು. ಆದರೆ ಸಿಸ್ಟನ್‌ನ್ನು ಸರಿಯಾಗಿ ನಿರ್ವಹಣೆ ಮಾಡದೆ ಇರುವುದರಿಂದ ಸಿಸ್ಟನ್ ಅಧೋಗತಿಯತ್ತ ಸಾಗಿದೆ. ಸಿಸ್ಟನ್ ಮೇಲೆ ಒಂದು ಡ್ರಮ್ ಇರಿಸಿ ನೀರು ಪೂರೈಸಲಾಗುತ್ತಿದೆ. ಅಂಗಡಿ ಮಳಿಗೆಗಳಲ್ಲಿ ತರಕಾರಿ, ಹಣ್ಣಿನ ಮಳಿಗೆಗಳೂ ಇವೆ. ಇವರಿಗೆ ನೀರಿನ ಅಗತ್ಯವಿದೆ. ಆದರೆ ಇವರು ನೀರಿಗೆ ಪರ್ಯಾಯ ವ್ಯವಸ್ಥೆ ಕಂಡುಕೊಂಡಿದ್ದಾರೆ. ಪಪಂಗೆ ಹಲವು ಬಾರಿ ತಿಳಿಸಿದರೂ ನೀರಿನ ಸೌಲಭ್ಯ ಕಲ್ಪಿಸಿಲ್ಲ ಎಂಬುದು ಅಂಗಡಿ ಬಾಡಿಗೆದಾರರ ದೂರು.
ರಂಗಮಂದಿರದ ಅವ್ಯವಸ್ಥೆ ಬಗ್ಗೆ ದೂರುಗಳಿವೆ. ನಾನು ಇತ್ತೀಚೆಗೆ ಮುಖ್ಯಾಧಿಕಾರಿಯಾಗಿ ವರ್ಗಾವಣೆ ಆಗಿ ಬಂದಿದ್ದೇನೆ. ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ರಂಗಮಂದಿರದ ಸ್ಥಿತಿ ಸುಧಾರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಪಪಂ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ವಿಜಯವಾಣಿಗೆ ಮಾಹಿತಿ ನೀಡಿದರು.