

ಕೆಂಗೇರಿ: ಮೊಮ್ಮಗಳನ್ನು ಊರಿಗೆ ಕರೆದುಕೊಂಡು ಹೋಗಲು ಅಳಿಯನ ಮನೆಗೆ ಬಂದಿದ್ದ ಅತ್ತೆ ಬರ್ಬರವಾಗಿ ಹತ್ಯೆಯಾಗಿದ್ದಾರೆ. ಅತ್ತೆಗೆ ಅಳಿಯನೇ ಚಾಕುವಿನಿಂದ ಚುಚ್ಚಿ ಕೊಂದಿರುವ ಘಟನೆ ನಾಗದೇವನಹಳ್ಳಿಯ ಬೃಂದಾವನ ಲೇಔಟ್ನಲ್ಲಿ ನಡೆದಿದೆ.
ಏಳಲ್ ಅರಸಿ (48) ಮೃತ ದುರ್ದೈವಿ. ಅಳಿಯ ದಿವಾಕರ್ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಏಳಲ್ ಅರಸಿಗೆ ಐದು ಜನ ಮಕ್ಕಳಿದ್ದಾರೆ. ಮೊದಲನೇ ಮಗಳನ್ನ ದಿವಾಕರ್ಗೆ ಮದುವೆ ಮಾಡಿಕೊಟ್ಟಿದ್ದರು. ಕಳೆದ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದ ಈ ಜೋಡಿಗೆ ಹೆಣ್ಣು ಮಗು ಇದೆ. ಕಾರಣಾಂತರಗಳಿಂದ ದಿವಾಕರ್ ಮತ್ತು ಪತ್ನಿ ಮದ್ಯೆ ಜಗಳವಾಗ್ತಿತ್ತು. ಹೀಗಾಗಿ ದಿವಾಕರ್ನಿಂದ ದೂರವಾದ ಮಹಿಳೆ, ತಾಯಿ ಜೊತೆಗೆ ಕೋಲಾರದ ಕೆ.ಜಿ.ಎಫ್ನಲ್ಲಿ ವಾಸವಾಗಿದ್ದಾರೆ.
ಕೆಲವು ದಿನಗಳ ಹಿಂದೆ ದಿವಾಕರ್ ತಮ್ಮ ಮಗಳನ್ನ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು. ಮೊಮ್ಮಗಳಿಗೆ ಎಕ್ಸಾಂ ಇದೆ ಎಂದು ಏಳಲ್ ಅರಸಿ ತಮ್ಮ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದರು. ಈ ವೇಳೆ ಅತ್ತೆ, ಅಳಿಯನ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಅಳಿಯ ದಿವಾಕರ್ ಚಾಕುವಿನಿಂದ ಅತ್ತೆಗೆ ಇರಿದಿದ್ದಾನೆ. ಗಂಭೀರ ಗಾಯವಾಗಿ ಏಳಲ್ ಅರಸಿ ಸಾವನ್ನಪ್ಪಿದ್ದಾರೆ. ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪತ್ತೆಗೆ ಮುಂದಾಗಿದ್ದಾರೆ.