

ಹಲಗೂರು(ಮಂಡ್ಯ): ಮೈಕ್ರೋ ಫೈನಾನ್ಸ್ ಕಂಪನಿ ಮನೆ ಜಪ್ತಿ ಮಾಡಿದ್ದರಿಂದ ತಾಯಿ ವಿಷ ಕುಡಿದು ಸಾವಿಗೀಡಾದ ವಿಷಯ ತಿಳಿದು ತೀವ್ರ ಮನನೊಂದಿದ್ದ ಪುತ್ರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹಲಗೂರು ಸಮೀಪದ ಕೊನ್ನಾಪುರ ಗ್ರಾಮದ ಅಂದಾನಯ್ಯ ಅವರ ಪುತ್ರ ಕೆ.ಎ.ರಂಜಿತ್(30) ಆತ್ಮಹತ್ಯೆ ಮಾಡಿಕೊಂಡವರು.
ಸಾಲದ ಕಂತುಗಳನ್ನು ಪಾವತಿಸಿಲ್ಲ ಎಂದು ಖಾಸಗಿ ಮೈಕ್ರೋ ಫೈನಾನ್ಸ್ ಕಂಪನಿ ಸಿಬ್ಬಂದಿ ಇತ್ತೀಚೆಗೆ ಪ್ರೇಮಾ ಅವರ ಮನೆಯನ್ನು ಜಪ್ತಿ ಮಾಡಿದ್ದರು. ಇದರಿಂದಾಗಿ ಮನನೊಂದಿದ್ದ ಪ್ರೇಮಾ ಅವರು ಜ.27ರಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಚಾರ ತಿಳಿದ ಪುತ್ರ ಅಂದಿನಿಂದಲೂ ನಾಪತ್ತೆಯಾಗಿದ್ದ.
ಸಂಬಂಧಿಕರ ಮನೆಗಳಲ್ಲೂ ಹುಡುಕಾಡಿದ ಕುಟುಂಬದ ಸದಸ್ಯರು, ಪುತ್ರ ರಂಜಿತ್ ಇಲ್ಲದೆ ತಾಯಿ ಪ್ರೇಮಾ ಅವರ ಅಂತ್ಯಕ್ರಿಯೆ ನಡೆಸಿದ್ದರು. ಆದರೆ, ಶನಿವಾರ ಬೆಳಗ್ಗೆ ಹಲಗೂರು ಕೆರೆಯಲ್ಲಿ ರಂಜಿತ್ ಮೃತದೇಹ ಪತ್ತೆಯಾಗಿದೆ. ಪ್ರೇಮಾ ಜತೆಗೆ ರಂಜಿತ್‌ನನ್ನೂ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.
ವಿಷಯ ತಿಳಿದ ಹಲಗೂರು ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಬಿ.ಮಹೇಂದ್ರ ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಹೊರತೆಗೆಸಿದರು. ದೂರು ದಾಖಲು ಮಾಡಿಕೊಂಡು ಕ್ರಮ ಕೈಗೊಂಡಿದ್ದಾರೆ.