

ಶಿವಮೊಗ್ಗ: ಜೀವನದಲ್ಲಿ ಸಕಾರಾತ್ಮಕ ದೃಷ್ಟಿಕೋನ ಹೊಂದಲು ಭಗವದ್ಗೀತೆಯ ಪಠಣ ಸಹಕಾರಿ ಎಂದು ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಹೆಗಡೆ ಹೇಳಿದರು.
ಪೇಸ್ ಪಿಯು ಕಾಲೇಜಿನಲ್ಲಿ ಶಿರಸಿ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿವಮೊಗ್ಗದ ಸ್ವರ್ಣರಶ್ಮಿ ಟ್ರಸ್ಟ್‌ನಿಂದ ಆಯೋಜಿಸಿದ್ದ ಭಗವದ್ಗೀತಾ ಅಭಿಯಾನದಲ್ಲಿ 11ನೇ ಅಧ್ಯಾಯದ ಪಠಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರ ಮನಸ್ಸಿನಲ್ಲಿ ಉದ್ಭವಿಸುವ ಸಮಸ್ಯೆ, ಗೊಂದಲಗಳಿಗೆ ಪರಿಹಾರ ಭಗವದ್ಗೀತೆಯಲ್ಲಿದೆ. ದೈವಿಕವಾದ ಭಗವದ್ಗೀತೆ ಮನುಷ್ಯನ ಜೀವನದೊಂದಿಗೆ ಸದಾ ಮಿಡಿಯುತ್ತಿರುತ್ತದೆ. ಮಹಾತ್ಮ ಗಾಂಧಿ, ಬಾಲಗಂಗಾಧರ ತಿಲಕ್, ಡಾ. ಬಿ.ಆರ್.ಅಂಬೇಡ್ಕರ್, ಡಾ. ಎಪಿ.ಜೆ.ಅಬ್ದುಲ್ ಕಲಾಂ ಮುಂತಾದ ಮಹನೀಯರು ಭಗವದ್ಗೀತೆಯಿಂದ ಪ್ರಭಾವಿತರಾಗಿದ್ದರು ಎಂದರು.
ಇಂದಿನ ಯುವ ಪೀಳಿಗೆ ದೇಶದ ಅಮೂಲ್ಯ ಆಸ್ತಿ. ಅವರ ವ್ಯಕ್ತಿತ್ವ ವಿಕಸನಗೊಳಿಸುವುದು ಮತ್ತು ಸರಿಯಾಗಿ ರೂಪಿಸುವುದೇ ಭಗವದ್ಗೀತಾ ಪಠಣದ ಮುಖ್ಯ ಉದ್ದೇಶ. ವಿದ್ಯಾರ್ಥಿಗಳನ್ನು ವಿಶ್ವದ ಉತ್ತಮ ನಾಗರಿಕರನ್ನಾಗಿಸುವುದೇ ಈ ಅಭಿಯಾನದ ಉದ್ದೇಶ. ಯಾವುದೇ ಜಾತಿ, ಮತ, ಪಂಥ, ಧರ್ಮಗಳ ತಾರತಮ್ಯಗಳಿಲ್ಲದೆ ಎಲ್ಲರೂ ಪಾಲ್ಗೊಳ್ಳಬಹುದು ಎಂದು ಹೇಳಿದರು.
ಅಭಿಯಾನದ ಸಲಹೆಗಾರ ಟಿ.ಜೆ.ಲಕ್ಷ್ಮೀನಾರಾಯಣ ಮಾತನಾಡಿ, ಈಗಿನ ಎಂಬಿಎ ಕೋರ್ಸ್ ಪರಿಚಯವಾಗುವ ಮುನ್ನವೇ ನಮ್ಮಲ್ಲಿ ಭಗವದ್ಗೀತೆ ಮೂಲಕ ವ್ಯವಹಾರ ನಿರ್ವಹಣೆ ಬಗ್ಗೆ ತಿಳಿಸಲಾಗಿತ್ತು ಎಂದರು.
ನಿವೃತ್ತ ತಹಸೀಲ್ದಾರ್ ಮಂಜುನಾಥ ಶರ್ಮಾ, ಉಪನ್ಯಾಸಕಿ ಡಾ. ಮೈತ್ರೇಯಿ ಆದಿತ್ಯಪ್ರಸಾದ್, ಪ್ರಮುಖರಾದ ವಿನುತಾ ಜೋಶಿ, ಸುಜಾತಾ ಪರಮೇಶ್ವರ್ ಉಪಸ್ಥಿತರಿದ್ದರು.