ಕೊಲ್ಲಿ ರಾಷ್ಟ್ರದಲ್ಲಿ ನೌಕರರಿಗೆ ಧರ್ಮಸಂಕಟ; ಉದ್ಯೋಗಕ್ಕೆ ಮುಳುವಾಗುತ್ತಿದೆ ಜಾಲತಾಣ

Satet kolli 26 april 20
Published on

ಮಂಗಳೂರು: ಒಳ್ಳೆಯ ನೌಕರಿ ಹಿಡಿದು, ಕೈತುಂಬ ಸಂಬಳ ಪಡೆದು ಕೊಲ್ಲಿ ರಾಷ್ಟ್ರಗಳಲ್ಲಿ ಸಂತೃಪ್ತ ಜೀವನ ನಡೆಸುತ್ತಿದ್ದ ಕರಾವಳಿ ಮೂಲದ ಕೆಲ ನೌಕರರಿಗೆ ಜಾಲತಾಣದಲ್ಲಿರುವ ಅವರ ಹಳೇ ಪೋಸ್ಟ್​ಗಳೇ ಮುಳುವಾಗುತ್ತಿವೆ!

ಲೌಕ್​ಡೌನ್ ಬೆನ್ನಲ್ಲೇ ಕುವೈತ್​ನಲ್ಲಿರುವ ಮಂಗಳೂರು ಮೂಲದ ವ್ಯಕ್ತಿಯೊಬ್ಬರು ಉದ್ಯೋಗ ಕಳೆದುಕೊಂಡಿದ್ದಾರೆ. ಕುವೈತ್ ಆಸ್ಪತ್ರೆಯೊಂದರಲ್ಲಿ ತಾಂತ್ರಿಕ ವಿಭಾಗದ ಪರಿಣಿತೆಯಾಗಿರುವ ಅವರ ಪತ್ನಿಯೂ, ಈಗ ನೌಕರಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರು ವರ್ಷದ ಹಿಂದೆ ಫೇಸ್​ಬುಕ್ ಪೇಜ್​ನಲ್ಲಿ ಹಾಕಿರುವ ಉಗ್ರ ಜಿಹಾದಿಗಳನ್ನು ಲೇವಡಿ ಮಾಡುವ ಕಾರ್ಟೂನ್​ನ ಪೋಸ್ಟ್ ವ್ಯಾಪಕವಾಗಿ ವೈರಲ್ ಆಗಿರುವುದು.

ಪ್ರಸ್ತುತ ಅವರು ವಾಟ್ಸ್​ಆಪ್ ಸಂದೇಶ ಮೂಲಕ ಕ್ಷಮೆ ಯಾಚಿಸಿದ್ದಾರೆ. ‘ತಿಳಿವಳಿಕೆ ಕೊರತೆಯಿಂದ ಈ ಕೆಲಸ ಮಾಡಿದ್ದೇನೆ. ಇದು ಉದ್ದೇಶಪೂರ್ವಕ ಆಗಿರಲಿಲ್ಲ. ನಾನು ಎಲ್ಲ ವಿಭಾಗದ ಜನರ ಬಗ್ಗೆ ಗೌರವ ಹೊಂದಿದ್ದೇನೆ. ನನ್ನ ಫೇಸ್​ಬುಕ್ ಪುಟವನ್ನು ಕೂಡ ರದ್ದು(ಡಿಆಕ್ಟಿವೇಟ್) ಮಾಡಿದ್ದೇನೆ’ ಎಂದು ಅವರು ಕ್ಷಮೆ ಯಾಚಿಸಿದ್ದಾರೆ.

ಪೋಸ್ಟ್ ಹಾಕುವಾಗ ಎಚ್ಚರಿಕೆ ಅಗತ್ಯ

ಜಾಲತಾಣಗಳಲ್ಲಿ ಪೋಸ್ಟ್ ಹಾಕುವವರು ಅತ್ಯಂತ ಎಚ್ಚರಿಕೆ ವಹಿಸಬೇಕು. ಯಾವುದೋ ಒಂದು ಸಂದರ್ಭ ತಮಾಷೆಯಿಂದ ಅಥವಾ ಸುಮ್ಮನೆ ಫಾರ್ವರ್ಡ್ ಮಾಡಿದ ಸಂದೇಶ ಮುಂದೊಂದು ದಿನ ನಮ್ಮ ಬದುಕಿಗೆ ಮುಳ್ಳಾಗಬಹುದು. ಜಾಲತಾಣಗಳಲ್ಲಿ ಖಾಸಗಿ ಮಾಹಿತಿ ಎಲ್ಲರಿಗೂ ಲಭ್ಯವಿರದಂತೆ ನೋಡಿಕೊಳ್ಳುವುದು ಅಗತ್ಯ. ಅಗತ್ಯ ಸಂದರ್ಭಗಳಲ್ಲಿ ಖಾತೆಯನ್ನೇ ಡಿಆಕ್ಟಿವೇಟ್ ಮಾಡುವುದು ಸೂಕ್ತ ಎಂದು ಅನಿವಾಸಿ ಭಾರತೀಯರೊಬ್ಬರು ಸಲಹೆ ನೀಡಿದ್ದಾರೆ.

ಧರ್ಮ ಅವಹೇಳನ ಆರೋಪ

ನವದೆಹಲಿಯಲ್ಲಿ ತಿಂಗಳ ಹಿಂದೆ ನಡೆದ ಬೃಹತ್ ಧಾರ್ವಿುಕ ಸಮಾವೇಶದಿಂದ ದೇಶದಲ್ಲಿ ಕರೊನಾ ಸೋಂಕು ವ್ಯಾಪಕವಾಗಿ ಹರಡಿದ ವಿಷಯಕ್ಕೆ ಸಂಬಂಧಿಸಿ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಪ್ರಕಟವಾದ ಕಾರ್ಟೂನ್ ಫಾರ್ವರ್ಡ್ ಮಾಡಿದ್ದಾರೆ ಎನ್ನುವ ಕಾರಣದಿಂದ ಕೊಲ್ಲಿ ದೇಶವೊಂದರಲ್ಲಿ ನೌಕರಿಯಲ್ಲಿರುವ ವ್ಯಕ್ತಿಯೊಬ್ಬರು ಕೆಲಸ ಕಳೆದುಕೊಂಡಿದ್ದಾರೆ. ನಿರ್ದಿಷ್ಟ ಧರ್ಮದ ಅವಹೇಳನ ಅವರ ಮೇಲಿರುವ ಆರೋಪ.

ಜಾಲತಾಣಗಳ ಮೇಲೆ ನಿಗಾ

ಕೊಲ್ಲಿ ರಾಷ್ಟ್ರಗಳಲ್ಲಿ ನೌಕರಿಯಲ್ಲಿರುವ ಕರಾವಳಿಯ ಜನರ ಸಾಮಾಜಿಕ ಜಾಲತಾಣಗಳ ಚಟುವಟಿಕೆಗಳನ್ನು ನಿತಂತರವಾಗಿ ಗಮನಿಸುತ್ತಿರುವ ಗುಂಪೊಂದು, ಧಾರ್ವಿುಕ ಕಾರಣಗಳಿಗೆ ಆಕ್ಷೇಪಿಸಲು ಅವಕಾಶವಿರುವ ಪೋಸ್ಟ್​ಗಳನ್ನು ಪತ್ತೆ ಹಚ್ಚಿ ಅವುಗಳನ್ನು ಕುವೈತ್ ಮಿನಿಸ್ಟ್ರಿ ಆಫ್ ಇಂಟೀರಿಯರ್, ಸಂಬಂಧಪಟ್ಟ ವಿಭಾಗ, ಉದ್ಯೋಗಿಯ ಸಂಸ್ಥೆ ಮಾಲೀಕರಿಗೆ ಟ್ಯಾಗ್ ಮಾಡುತ್ತದೆ. ಪರಿಣಾಮ ಇತ್ತೀಚಿನ ದಿನಗಳಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡುವ ಹಲವರು ಕೆಲಸ ಕಳೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net