

ಚಿಕ್ಕಮಗಳೂರು: ಹಿಂದೆ ಸಕಾಲಕ್ಕೆ ಉತ್ತಮವಾಗಿ ಮಳೆಯಾಗುತ್ತಿತ್ತು, ಇದರಿಂದ ರೈತರ ಬದುಕು ಹಸನಾಗುತ್ತಿತ್ತು. ಬದಲಾದ ಪರಿಸ್ಥಿತಿಗಳಿಂದ ಪ್ರಕೃತಿಯಲ್ಲೂ ಬದಲಾವಣೆಗಳಾಗುತ್ತಿದ್ದು, ಮಳೆಗಾಗಿ ಪ್ರಾರ್ಥಿಸಿ ದೇವರ ಮೋರೆ ಹೋಗುವ ಪರಿಸ್ಥಿತಿ ಎದುರಾಗಿದೆ. ಇದು ಮನುಷ್ಯ ಮಾಡಿಕೊಂಡಿರುವ ಅಪರಾಧ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಬೈರಾಪುರ ಪಿಕಪ್‌ನಿಂದ ಲಕ್ಯಾ ಮಾದರಸನ ಕೆರೆಗೆ ನೀರು ತುಂಬಿಸುವ ಮೋಟಾರ್ ಪಂಪ್‌ಗೆ ಶನಿವಾರ ಚಾಲನೆ ನೀಡಿ ಮಾತನಾಡಿ, ಮನುಷ್ಯನ ಪ್ರಯತ್ನಕ್ಕೆ ಪೂರಕವಾಗಿ ದೈವ ಕೃಪೆ ಆದಾಗ ಮಾತ್ರ ಎಲ್ಲವೂ ಸಾಧ್ಯವಾಗುತ್ತದೆ ಎಂದರು.
ಮಳೆಗಾಗಿ ಪ್ರಾರ್ಥಿಸಿ ತೇಗೂರಿನಲ್ಲಿ 101 ಎಡೆ ಬಿಲ್ಗುಡ್ ಸೇವೆ ಮಾಡಿ ಪೂಜೆ ಸಲ್ಲಿಸಲಾಗಿದೆ. ಈ ಮೂಲಕ ದೇವರು ಕೃಪೆ ತೋರಿ ಮಳೆ-ಬೆಳೆ ಚೆನ್ನಾಗಿ ಬಂದರೆ ಸಮೃದ್ಧ ನಾಡನ್ನು ಕಾಣಬಹುದು. ಪ್ರಸಕ್ತ ಸಾಲಿನಲ್ಲಿ ವರುಣ ಕೃಪೆ ತೋರದ ಕಾರಣ ಬಿತ್ತನೆ ಕಾರ್ಯ ಚುರುಕುಗೊಂಡಿಲ್ಲ. ಇತ್ತೀಚಿಗೆ ಉತ್ತಮವಾಗಿ ಮಳೆಯಾಗಿದ್ದು ರೈತರು ಕಾಲಕ್ಕೆ ತಕ್ಕಂತೆ ಬಿತ್ತನೆ ಮಾಡಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಡವರ ಅಲ್ಪಸಂಖ್ಯಾತರ ಪರವಾಗಿ ಕೊಟ್ಟ ಮಾತಿನಂತೆ ನಡೆಸಿಕೊಳ್ಳುತ್ತಿದ್ದಾರೆ. ಜನ ಪರವಾದ 5 ಗ್ಯಾರಂಟಿಗಳ ಪೈಕಿ ಈಗಾಗಲೇ 4 ಯೋಜನೆಗಳನ್ನು ಜಾರಿ ಮಾಡಿದ್ದು, ರೈತರ ಸಬಲೀಕರಣಕ್ಕಾಗಿ ಅಗತ್ಯ ಯೋಜನೆಗಳನ್ನು ಜಾರಿಗೆ ತರಲಿದ್ದಾರೆ ಎಂದು ಹೇಳಿದರು.
ಕರಗಡಕ್ಕೆ ಹೋಗುವ ಕಾಲುವೆ ಕೊಳಚೆಯಿಂದ ತುಂಬಿದ್ದು, ದೇವಿಕೆರೆ ಸಮೀಪ 2 ಕಾಲುವೆಗಳನ್ನು ಹಿಟಾಚಿಗಳ ಮೂಲಕ ಸ್ವಚ್ಚ ಮಾಡುವ ಕೆಲಸ ನಡೆಯುತ್ತಿದೆ. ಮಳೆ ಬಂದರೆ ಕರಗಡ ನೀರಾವರಿ ಯೋಜನೆ ಮೂಲಕ ಬೆಳವಾಡಿ, ಕಳಸಾಪುರ ಕೆರೆ ತುಂಬಿಸುವ ಕೆಲಸಕ್ಕೆ ಪೂರ್ವಭಾವಿ ಸಿದ್ದತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಬೈರಾಪುರ ಪಿಕಪ್‌ನಿಂದ 300 ಎಚ್‌ಪಿ ಮೋಟಾರ್ 45 ದಿನಗಳ ಚಾಲನೆ ಮಾಡಿದರೆ ಮಾದರಸನ ಕೆರೆ ಭರ್ತಿಯಾಗುತ್ತದೆ. ಇದರಿಂದ ಲಕ್ಯಾ ಹೋಬಳಿಯ ಹಲವು ಗ್ರಾಮಗಳಿಗೆ ಅನುಕೂಲವಾಗಲಿದೆ. ನೀರನ್ನು ಮಿತವಾಗಿ ಬಳಕೆ ಮಾಡುವ ಮೂಲಕ ಲಭ್ಯವಿರುವ ನೀರನ್ನು ಹೆಚ್ಚಿನ ಕಾಲ ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.
ಶಾಸಕ ಟಿ.ಡಿ.ರಾಜೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ ಮಂಜೇಗೌಡ, ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು, ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ , ದಯಾಶಂಕರ್, ವಿಕಾಸ್ ಇದ್ದರು.