

ಸಾಗರ: ಯಾವುದೇ ಊರು ಸುಂದರವಾಗಿರಲು ಕಾರಣ ಪೌರ ಕಾರ್ಮಿಕರು, ಅವರ ಸೇವೆ ಮತ್ತು ಶ್ರಮ. ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರ ನಗರಸಭೆಯ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಪೌರಕಾರ್ಮಿಕರಿಗೆ ದುಡಿಮೆ ಇರುತ್ತದೆ. ಆದರೆ ನೀವು ಸಂಪಾದಿಸಿದ ಹಣ ಕುಟುಂಬಕ್ಕೆ ಬಳಕೆಯಾಗಬೇಕು ಎಂದು ಸಲಹೆ ನೀಡಿದರು.
ದುಶ್ಚಟಗಳಿಂದ ದೂರವಿದ್ದು, ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಜತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನ ಕೊಡಿ. ನಿಮ್ಮ ಮಕ್ಕಳು ಉನ್ನತ ಸ್ಥಾನಕ್ಕೆ ಹೋಗಲು ನಿಮ್ಮ ಸಹಕಾರ, ಮಾರ್ಗದರ್ಶನ ಅಗತ್ಯವಿರುತ್ತದೆ. ನಿಮ್ಮ ಕರ್ತವ್ಯದ ಜತೆ ಮಕ್ಕಳ ಭವಿಷ್ಯದ ಬಗ್ಗೆಯೂ ಯೋಚಿಸಬೇಕು ಎಂದು ಸಲಹೆ ನೀಡಿದರು.
ಹೊರಗುತ್ತಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಕಾಯಂಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಕಾಲಕಾಲಕ್ಕೆ ಬಂದ ಸರ್ಕಾರಗಳು ಹಂತ ಹಂತವಾಗಿ ಸೇವೆ ಕಾಯಂ ಮಾಡುತ್ತಿವೆ. ಏಕಕಾಲಕ್ಕೆ ಎಲ್ಲ ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸಲು ಮುಖ್ಯಮಂತ್ರಿಗಳ ಹತ್ತಿರ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪೌರಾಯುಕ್ತ ಎಚ್.ಕೆ.ನಾಗಪ್ಪ ಮಾತನಾಡಿ, ಪೌರ ಕಾರ್ಮಿಕರಲ್ಲಿ ಇನ್ನಷ್ಟು ಬದ್ಧತೆ ಬೇಕು. ವೈದ್ಯರು, ನರ್ಸ್‌ಗಳು ಮಾಡುವ ಸೇವೆ ನಿಮಗೆ ಪ್ರೇರಣೆಯಾಗಬೇಕು. ಅತ್ಯಂತ ಕಷ್ಟಪಟ್ಟು ಕೆಲಸ ಮಾಡುವ ಪೌರ ಕಾರ್ಮಿಕರ ಬಗ್ಗೆ ಸಮಾಜ ಸಹ ಗೌರವ ಭಾವನೆ ಹೊಂದಿರಬೇಕು ಎಂದರು.
ಪೌರ ಕಾರ್ಮಿಕರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಉಪವಿಭಾಗಾಧಿಕಾರಿ ಆರ್.ಯತೀಶ್, ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ, ಪರಿಸರ ವಿಭಾಗದ ಮದನ್, ನಗರಸಭೆ ಸದಸ್ಯರಾದ ಮಧುರಾ ಶಿವಾನಂದ್, ಎನ್.ಲಲಿತಮ್ಮ, ಗಣಪತಿ ಮಂಡಗಳಲೆ, ಶೈಲೇಶ್, ಬಾಲಚಂದ್ರ, ರಾಜಕುಮಾರ್, ತಾಲೂಕು ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ನಾಗರಾಜ್ ಇತರರಿದ್ದರು.