

ಶಿವಮೊಗ್ಗ: ಪೌರ ಕಾರ್ಮಿಕರು ಸ್ವಚ್ಛತೆಯ ಹರಿಕಾರರು. ಒಂದು ದಿನ ಪೌರ ಕಾರ್ಮಿಕರು ಕಾರ್ಯನಿರ್ವಹಿಸದಿದ್ದರೂ ನೈರ್ಮಲ್ಯ ಮರೆಯಾಗಿ ಜನರು ಪರಿತಪಿಸಬೇಕಾಗುತ್ತದೆ ಎಂದು ನಗರ ಪಾಲಿಕೆ ಮಾಜಿ ಸದಸ್ಯೆ ಅನಿತಾ ರವಿಶಂಕರ್ ಹೇಳಿದರು.
ಭಾವಸಾರ ವಿಜನ್ ಇಂಡಿಯಾ ಪ್ರೇರಣಾದಿಂದ ಏರ್ಪಡಿಸಿದ್ದ ಪೌರ ಕಾರ್ಮಿಕರಿಗೆ ಸೀರೆ ವಿತರಣೆ, ಉಡಿ ತುಂಬುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪೌರ ಕಾರ್ಮಿಕರಿಂದ ನಗರ ಸುಂದರವಾಗಿರುತ್ತದೆ. ಉತ್ತಮ ವಾತಾವರಣ ಅವರಿಂದ ಸೃಷ್ಟಿಯಾಗುತ್ತದೆ. ಹೀಗಾಗಿ ಅವರ ಕಾರ್ಯಕ್ಕೆ ನಾವೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಬೇಕು ಎಂದರು.
ಭಾವಸಾರ ವಿಜನ್ ಇಂಡಿಯಾ ಪ್ರೇರಣಾ ಸಂಸ್ಥೆ ಅಧ್ಯಕ್ಷೆ ಉಮಾ ವೆಂಕಟೇಶ್ ಮಾತನಾಡಿ, ಪೌರ ಕಾರ್ಮಿಕರು ಯಾವುದೇ ಬೇಸರ ಇಲ್ಲದೆ ತಮ್ಮ ಕಾರ್ಯವನ್ನು ನಿಷ್ಠೆ, ಪ್ರಾಮಾಣಿಕವಾಗಿ ಮಾಡುತ್ತಾರೆ. ಅವರ ಆರೋಗ್ಯವೂ ಮುಖ್ಯ. ಬರುವ ದಿನಗಳಲ್ಲಿ ಪೌರ ಕಾರ್ಮಿಕರಿಗೆ ನಮ್ಮ ಸಂಸ್ಥೆಯಿಂದ ಆರೋಗ್ಯ ತಪಾಸಣೆ ಹಮ್ಮಿಕೊಳ್ಳುವುದಾಗಿ ಭರವಸೆ ನೀಡಿದರು.
ಕಾರ್ಯದರ್ಶಿ ಕವಿತಾ ಹರೀಶ್, ಸಹಕಾರ್ಯದರ್ಶಿ ಸುಮಾ ನವುಲೆ, ವುಮೆನ್ ವೆಲ್ಫೇರ್ ಸಂಸ್ಥೆಯ ಸ್ನೇಹಾ ಪ್ರಶಾಂತ್, ಪ್ರಮುಖರಾದ ಜಿ.ವಿಜಯಕುಮಾರ್, ವೀಣಾ ಮುಂತಾದವರಿದ್ದರು.