ಸಿಲಿಂಡರ್ ಸ್ಫೋಟ ಪ್ರಕರಣ: ಗಂಭೀರವಾಗಿ ಗಾಯಗೊಂಡಿದ್ದ ತಂದೆ-ಮಗು ಸಾವು

gas-cylinder-explosion.jpg
Published on

ಬೆಂಗಳೂರು: ಇತ್ತೀಚೆಗೆ ಅಡುಗೆ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದ ತಂದೆ ಹಾಗೂ ಎರಡೂವರೆ ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮುಂಜಾನೆ ಮೃತಪಟ್ಟಿದ್ದಾರೆ.


ಉತ್ತರ ಪ್ರದೇಶ ಮೂಲದ ಸಂದೇಶ್ (೩೧) ಮತ್ತು ಅವರ ಎರಡೂವರೆ ವರ್ಷದ ಪುತ್ರ ರೋಹನ್ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸಂದೇಶ್ ಮತ್ತಿಬ್ಬರು ಮಕ್ಕಳಾದ ರೋಷಿಣಿ(೧೪), ರೋಷನ್(೪) ಮತ್ತು ನಾದಿನಿ ನಿಖಿಲಾ(೨೬) ಗಾಯಗೊಂಡು, ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿ.೧೯ರಂದು ಬೇಗೂರಿನ ಲಕ್ಷ್ಮೀ ಲೇಔಟ್‌ನಲ್ಲಿ ನಡೆದ ಸಿಲಿಂಡರ್ ಸ್ಫೋಟದಲ್ಲಿ ಐವರು ಗಾಯಗೊಂಡಿದ್ದರು. ಈ ಪೈಕಿ ಸಂದೇಶ್ ಮತ್ತು ರೋಹನ್ ಶೇ.೪೫ರಷ್ಟು ಗಾಯಗೊಂಡಿದ್ದರು. ಹೀಗಾಗಿ ಇಬ್ಬರಿಗೂ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಭಾನುವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ತಂದೆ-ಮಗ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಉತ್ತರ ಪ್ರದೇಶ ಮೂಲದ ಸಂದೇಶ್, ಪತ್ನಿ ಅನಿತಾ ಹಾಗೂ ಮಕ್ಕಳ ಜತೆ ೩ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಬೇಗೂರಿನ ಲಕ್ಷ್ಮೀ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸಂದೇಶ್ ಭದ್ರತಾ ಸಿಬ್ಬಂದಿಯಾಗಿದ್ದರು. ಈತನ ಪತ್ನಿ ಅನಿತಾ ಕೂಡ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಈತನ ನಾದಿನಿ ನಿಖಿಲಾ, ಸಹೋದರಿಯ ಮನೆಗೆ ಬಂದಿದ್ದಾರೆ. ಹೀಗಾಗಿ ಮನೆ ಚಿಕ್ಕದಾಗಿದ್ದರಿಂದ ಅನಿತಾ, ಪಕ್ಕದಲ್ಲಿರುವ ಸಂಬಂಧಿಯ ಮನೆಗೆ ಹೋಗಿ ಮಲಗಿದ್ದರು. ಡಿ.೧೮ರ ರಾತ್ರಿ ಸಂದೇಶ್ ಹಾಗೂ ಕುಟುಂಬ ಸದಸ್ಯರು ಊಟ ಮಾಡಿ, ಸಿಲಿಂಡರ್ ಆಫ್ ಮಾಡದೆ ಮಲಗಿದ್ದಾರೆ. ಮಂಗಳವಾರ ಮುಂಜಾನೆ ೬ ಗಂಟೆ ಸುಮಾರಿಗೆ ಎಚ್ಚರಗೊಂಡ ಸಂದೇಶ, ವಿದ್ಯುತ್ ಸ್ವಿಚ್ ಒತ್ತುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಕಿಟಕಿ, ಬಾಗಿಲು ಹಾಕಿದ್ದರಿಂದ ಸೋರಿಕೆಯಾದ ಅಡುಗೆ ಅನಿಲ ಹೊರಗಡೆ ಹೋಗಲು ಸಾಧ್ಯವಾಗದೇ, ಬೆಂಕಿಯ ಕಿಡಿ ಇಡೀ ಮನೆ ಆವರಿಸಿದೆ. ಈ ವೇಳೆ ಸಂದೇಶ್ ಮತ್ತು ರೋಹನ್‌ಗೆ ಗಂಭೀರ ಗಾಯವಾಗಿತ್ತು. ಈ ಮಾಹಿತಿ ಮೇರೆಗೆ ಮೂರು ವಾಹನಗಳ ಸಮೇತ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಎಲ್ಲರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ತಂದೆ-ಮಗ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net