

Cheetah Death: ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಧಾಮದ ಶಾಗ್ಯ ಶಾಖೆಯ ಹೊಳೆಮುರದಟ್ಟಿ ಗಸ್ತಿನ ಕಿರಬನಕಲ್ಲು ಅರಣ್ಯ ಪ್ರದೇಶದಲ್ಲಿ ಮಂಗಳವಾರ (ಆಗಸ್ಟ್ 12) ಎರಡು ಹುಲಿ ಮರಿಗಳ ಕಳೇಬರ ಪತ್ತೆಯಾಯಿತು. ಎರಡು ಹುಲಿ ಮರಿಗಳ ಸಾವು ಇನ್ನೂ ಮಾಸಿಲ್ಲ. ಅದಾಗಲೇ ಚಿರತೆಯ ಕಳೇಬರ ಪತ್ತೆಯಾಗಿರುವುದು ಸದ್ಯ ಪ್ರಾಣಿಪ್ರಿಯರಲ್ಲಿ ತೀರ ಆಶ್ಚರ್ಯ ಮೂಡಿಸಿದೆ.
ಹನೂರು ವಲಯದ ಬಂಡಳ್ಳಿ ಶಾಖೆಯ ಮೇಕೆದಾಟು ಗಸ್ತಿನ ತಮ್ಮಡಿ ಬಾವಿ ಹಳ್ಳ ಕಾಡು ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ಗಸ್ತು ತಿರುಗುವಾಗ ಅಂದಾಜು 5 ವರ್ಷದ ಹೆಣ್ಣು ಚಿರತೆಯ ಕಳೆಬರ ಪತ್ತೆಯಾಗಿದೆ. ಮೃತ ಚಿರತೆಯ ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದು, ಚಿರತೆಯ ಹಿಂಗಾಲುಗಳ ಪಾರ್ಶ್ವ ವಾಯುವಿನಿಂದ ಸ್ವಾಧೀನ ಕಳೆದುಕೊಂಡಿವೆ ಎಂದು ಪಶು ವೈದ್ಯರು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಅನಾರೋಗ್ಯವೆಂದು ಭಾವಿಸಿದರೂ ಚಿರತೆಯ ಸಾವಿನ ನಿಖರ ಕಾರಣ ತಿಳಿಯಲು ಪ್ರಮುಖ ಅಂಗಾಂಗಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಮರಣೊತ್ತರ ಪರೀಕ್ಷೆಯ ಬಳಿಕ ಎನ್ಟಿಸಿಎ ಸದಸ್ಯರನ್ನೊಳಗೊಂಡ ತಂಡದ ಸಮ್ಮುಖದಲ್ಲಿ ಚಿರತೆಯ ಮೃತದೇಹವನ್ನು ನಿಯಮಾನುಸಾರ ಸುಡಲಾಯಿತು ಎಂದು ವರದಿಯಾಗಿದೆ.
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ 2025ರ ಜೂನ್ 26ರಂದು ಒಂದು ತಾಯಿ ಹುಲಿ ಮತ್ತು ಅದರ ನಾಲ್ಕು ಮರಿಗಳು ಸೇರಿ ಐದು ಹುಲಿಗಳು ವಿಷ ಸೇವನೆಯಿಂದ ಸಾವಿಗೀಡಾದವು. ಈ ಪ್ರಕರಣ ರಾಜ್ಯದಲ್ಲಿ ಭಾರಿ ಸುದ್ದಿಯಾಯಿತು ಮತ್ತು ಜನರ ಆಕ್ರೋಶಕ್ಕೂ ಕಾರಣವಾಯಿತು. ವಿಷಪೂರಿತ ಆಕಳ ಶವವನ್ನು ಹುಲಿಗಳು ತಿಂದು ಮೃತಪಟ್ಟವು. ಈ ಘಟನೆಗೆ ಸಂಬಂಧಿಸಿದಂತೆ ಸಮೀಪದ ಗ್ರಾಮಸ್ಥರಾದ ಮಧುರಾಜು, ನಾಗರಾಜು ಮತ್ತು ಕುನ್ನಪ್ಪ ಎಂಬ ಮೂವರನ್ನು ಅರಣ್ಯ ಇಲಾಖೆ ಬಂಧಿಸಿದೆ. ಆರೋಪಿಗಳು ತಮ್ಮ ದನಗಳ ಮೇಲಿನ ಹುಲಿಯ ದಾಳಿಗೆ ಪ್ರತೀಕಾರವಾಗಿ ವಿಷಯುಕ್ತ ಆಕಳ ಕಳೇಬರವನ್ನು ಇಟ್ಟಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.