

ಬೆಂಗಳೂರು: ಸರ್ಕಾರದಿಂದ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರ ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆ ಚುರುಕುಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಆಯ್ಕೆ ಸಮಿತಿ ಸಭೆಯಲ್ಲಿ 68 ಸಾಧಕರನ್ನು ಹಾಗೂ ಸಂಸ್ಥೆಗಳನ್ನು ಗುರುತಿಸುವ ಕಾರ್ಯ ನಡೆಯಿತು. 68 ಪ್ರಶಸ್ತಿಗೆ ತಲಾ ನಾಲ್ಕು ಆಯ್ಕೆಗಳಂತೆ ಪ್ರಸ್ತಾವನೆಗಳು ಸಭೆಯ ಮುಂದಿದ್ದವು. ಈ ಸಭೆಯಲ್ಲಿ ಭಾಗಶಃ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ವಿವಿಧ ಕ್ಷೇತ್ರಗಳಲ್ಲಿ ಪ್ರಮುಖ ಹೆಸರನ್ನು ಮುಂದಿನ ಹಂತಕ್ಕೆ ಪರಿಗಣಿಸಲಾಗಿದೆ. ಮುಂದಿನ ಸಭೆಯನ್ನು ಇಷ್ಟರಲ್ಲೇ ನಡೆಸಿ ಪಟ್ಟಿಯನ್ನು ಅಂತಿಮಗೊಳಿಸಲು ನಿರ್ಣಯಿಸಲಾಯಿತು.
ಆಯ್ಕೆ ಪಟ್ಟಿಯ ಬಗ್ಗೆ ಗೊಂದಲಗಳಿರಬಾರದು, ದೋಷಗಳಿರಬಾರದು. ಪ್ರಾದೇಶಿಕ ನ್ಯಾಯ, ಸಾಮಾಜಿಕ ನ್ಯಾಯ ಒಳಗೊಂಡಂತೆ ಅರ್ಹರಿಗೆ ಮಾತ್ರ ಅವಕಾಶ ಸಿಗಬೇಕು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟ ಸೂಚನೆಯನ್ನೂ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅಕ್ಟೋಬರ್ 9ರಂದು ಪ್ರಶಸ್ತಿ ಆಯ್ಕೆ ಸಲಹಾ ಸಮಿತಿ ಸದಸ್ಯರೊಂದಿಗೆ ಮೊದಲ ಸಭೆ ನಡೆಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣಿ ದೇವಿ ಮಾಲಗತ್ತಿಯವರು ಪ್ರಶಸ್ತಿ ಆಯ್ಕೆ ಮಾನದಂಡದ ಚೌಕಟ್ಟಿನ ಕುರಿತು ಸಲಹಾ ಸಮಿತಿಗೆ ತಿಳಿಸಿದರು. ವಿಷಯವಾರು ರಚನೆಯಾಗಿದ್ದ 50 ಸದಸ್ಯರನ್ನೊಳಗೊಂಡ ಸಲಹಾ ಸಮಿತಿ ಸರ್ಕಾರಕ್ಕೆ ಸಲ್ಲಿಕೆಯಾದ 2800 ಪ್ರಸ್ತಾವನೆಗಳನ್ನು ಪರಿಶೀಲಿಸಿ ಪರಿಗಣಿಸಬಹುದಾದ ಹೆಸರನ್ನು ಪಟ್ಟಿಮಾಡಿಕೊಂಡಿತ್ತು.