ಗಣಪತಿಯ ಹುಟ್ಟಿನ ಕಥೆಯಲ್ಲಡಗಿದ ರಹಸ್ಯವೇನೆಂದರೆ...

photo-68ade9cbef228
Published on
ಗಣಪತಿಯ ಕಥೆಯನ್ನು ಕೇಳಿದ ಬುದ್ಧಿವಂತರು ಇದೆಂಥ ಕಟ್ಟುಕತೆ ಎಂದುಕೊಳ್ಳುತ್ತಾರೆ. ಏಕೆಂದರೆ ಪಾರ್ವತಿ ಸ್ನಾನ ಮಾಡಲು ಹೋದಳು, ಸ್ನಾನಕ್ಕೆ ಮೊದಲು ಆಕೆ, ಮೈಮೇಲಿನ ಕೊಳೆಯನ್ನೆಲ್ಲ ತೆಗೆದು ಒಂದು ಗೊಂಬೆ ಮಾಡಿದಳು. ನಂತರ ಅದಕ್ಕೆ ಪ್ರಾಣ ಕೊಟ್ಟು ಅದನ್ನು ಬಾಗಿಲಲ್ಲಿ ಕೂರಿಸಿ, ಯಾರನ್ನೂ ಒಳಗೆ ಬಿಡಬೇಡ, ನಾನು ಸ್ನಾನಕ್ಕೆ ಹೋಗುತ್ತಿದ್ದೇನೆ ಎಂದಳು ಎನ್ನುವುದು ಆಭಾಸಕರ ಎಂದು ಅನ್ನಿಸಿ ಹಲವು ಪ್ರಶ್ನೆಗಳು ಎದುರಾಗುವುದು ಸಹಜ. ಮೈಮೇಲಿನ ಕೊಳೆಯನ್ನು ತೆಗೆದ ಮೇಲೆ ಮತ್ತೆ ಯಾಕೆ ಸ್ನಾನ ಮಾಡಬೇಕು? ಒಂದು ಮಗುವಿನ ಗೊಂಬೆ ಮಾಡುವಷ್ಟು ಮಲ ಅವಳ ಮೈಯಲ್ಲಿ ಸಂಗ್ರಹವಾಗಿತ್ತೇ? ಅವಳು ನಿತ್ಯ ಸ್ನಾನಮಾಡುತ್ತಿರಲಿಲ್ಲವೇ? ಇತ್ಯಾದಿ.

ನಂತರ ಶಿವ ಬಂದ. ಆ ಮಗ ಶಿವನನ್ನು ತಡೆದನೆಂದು ಕೋಪಗೊಂಡ. ಮಗುವಿನ ತಲೆಯನ್ನೇ ಕತ್ತರಿಸಿಬಿಟ್ಟ!. ಜಗತ್ತಿಗೇ ಒಡೆಯನಾದ ತ್ರಿಕಾಲಜ್ಞಾನಿಯಾದ ಶಿವನಿಗೇ ಕೋಪ ತಡೆಯಲಾಗಲಿಲ್ಲ ವೆಂದರೇನು? ಕೊನೆಗೆ, ಎದುರಿಗಿರುವುದು ಚಿಕ್ಕ ಮಗು ಎಂದೂ ನೋಡಲಿಲ್ಲ. ಮಾನವೀಯತೆಯೇ ಇಲ್ಲವೆಂದಮೇಲೆ ಅವನಿಗೆ ದೈವತ್ವ ಎಲ್ಲಿಂದ ಬಂದೀತು? ನಂತರವೂ ಹಾಗೆಯೇ. ಉತ್ತರಕ್ಕೆ ತಲೆಯಿಟ್ಟು ಮಲಗಿದವರ ತಲೆಯೇ ಏಕೆ ಬೇಕು? ಜಗತ್ತನ್ನೇ ನಿರ್ಮಾಣ ಮಾಡಿದವನಿಗೆ ಅದೇ ತಲೆಯನ್ನು ದೇಹಕ್ಕೆ ಜೋಡಿಸಲು ಅಸಾಧ್ಯವಾಗುತ್ತಿತ್ತೆ?... ನಾವು ಪೂಜಿಸುವ ದೇವರ ಬಗ್ಗೆ ಈ ಬಗೆಯ ಪ್ರಶ್ನೆಗಳನ್ನು ಕೇಳಿದರೆ ನಮ್ಮಲ್ಲಿ ಉತ್ತರವೇ ಇರುವುದಿಲ್ಲ. ನಮ್ಮ ಹಿಂದಿನವರು ಉದ್ದೇಶವಿಲ್ಲದೆ ಇಂತಹ ಕತೆಗಳನ್ನು ಹೆಣೆಯುವಷ್ಟು ದಡ್ಡರಲ್ಲ. ನಮ್ಮ ಪೂರ್ವಜರು ಈ ರಹಸ್ಯವನ್ನು ಸಾಂಕೇತಿಕವಾಗಿ ತಿಳಿಸಿದ್ದಾರೆ.

ಪಾರ್ವತಿ ಎಂದರೆ ಪ್ರಕೃತಿ. ಪ್ರಕೃತಿಯಲ್ಲಿ ಉತ್ಸವ ಉಂಟಾದಾಗ ಅದರ ಅಂಗವಾಗಿ ಅನೇಕ ವಿಘ್ನಗಳು ಎದುರಾಗುತ್ತವೆ. ಇವು ಆಯಾ ಉತ್ಸವದ ಮಲ. ಪ್ರಕೃತಿಯಲ್ಲಿ ಮಲ ಉಂಟಾಗುವುದು ಸಹಜ ಹಾಗೂ ಸಾಧಾರಣ. ಮಲ ಅಥವಾ ಮಲಿನತೆ ಎಂದರೆ ಶುದ್ಧ ದಲ್ಲಿ ಅಶುದ್ಧ ಮಿಶ್ರಣವಾಗಿರುವುದು. ಉದಾಹರಣೆಗೆ, ನೀರೂ ಶುದ್ಧವಾಗಿರುತ್ತದೆ, ಮಣ್ಣೂ ಶುದ್ಧವಾಗಿರುತ್ತದೆ. ಆದರೆ ನೀರಿನ ಜೊತೆ ಮಣ್ಣು ಬಂದರೆ ಅದನ್ನು ಅಶುದ್ಧ ನೀರು ಎನ್ನುತ್ತೇವೆ. ಮಣ್ಣಿನ ಜೊತೆ ನೀರು ಸೇರಿಕೊಂಡರೆ ಅದನ್ನು ಕೊಚ್ಚೆಮಣ್ಣು ಎನ್ನುತ್ತೇವೆ. ಹೀಗೆ, ಒಂದರಲ್ಲಿ ಇನ್ನೊಂದು ಬೆರೆತಾಗ ಮಲ ಉಂಟಾಗುತ್ತದೆ.

ಪ್ರಕೃತಿಯ ಸ್ವಭಾವವೇ ಮಲಿನವಾಗುವುದು. ಪ್ರಕೃತಿಯಾದ ಪಾರ್ವತಿ ಮತ್ತು ಪುರುಷನಾದ ಶಿವನ ನಡುವೆ ಬಂದವನು ವಿಘ್ನರಾಜ, ಗಣಪತಿ. ಗಣಪತಿ ಅಥರ್ವಶೀರ್ಷದಲ್ಲಿ ‘ತ್ವಂ ಬ್ರಹ್ಮಸ್ತ್ವಂ ವಿಷುಸ್ತ್ವಂ....’ಎಂದು ಸ್ತುತಿಸುತ್ತೇವೆ. ಎಲ್ಲ ರೂಪಗಳಲ್ಲೂ ಇರುವವನು ನೀನೇ ಎನ್ನುತ್ತಾ ಕೊನೆಗೆ ‘ತ್ವಂ ಸಾಕ್ಷಾತ್ ಆತ್ಮಾಸಿ’- ನೀನು ನನ್ನ ಆತ್ಮವೇ ಆಗಿರುವೆ ಎಂದು ಸ್ತುತಿಸುತ್ತೇವೆ. ಹೀಗಿರುವಾಗ, ಆ ಶಿವನಿಂದಲೇ ಮಾಯೆ ದೂರವಾಯಿತು ಎಂದರ್ಥ. ತಲೆಯು ಮಾಯೆಯನ್ನು ಸಂಕೇತಿಸುತ್ತದೆ. ತಲೆಯಲ್ಲಿರುವ ಚಿಕ್ಕ ಬುದ್ಧಿ, ಚಿಕ್ಕ ಮನಸ್ಸುಗಳನ್ನು ತರಿದು ಹಾಕಿ ದೊಡ್ಡ ಬುದ್ಧಿ, ದೊಡ್ಡ ಮನಸ್ಸನ್ನು ಕೊಟ್ಟ. ಈ ದೊಡ್ಡ ಮನಸ್ಸಿನ ಸಂಕೇತ ಆನೆಯ ತಲೆ.

ಆನೆಯ ತಲೆಯಲ್ಲಿ ಅನೇಕ ವಿಶೇಷಗಳಿವೆ. ಅದರಲ್ಲಿ ಜ್ಞಾನೇಂದ್ರಿಯವೂ ಇದೆ, ಕಮೇಂದ್ರಿಯವೂ ಇದೆ. ಆನೆಯು ಕಣ್ಣು, ಕಿವಿಗಳಿಂದ ಗ್ರಹಿಸುತ್ತದೆ, ಸೊಂಡಿಲಿನಿಂದ ಆಘ್ರಾಣಿಸುತ್ತದೆ, ಕೆಲಸವನ್ನೂ ಮಾಡುತ್ತದೆ. ಉತ್ತರಕ್ಕೆ ತಲೆಯಿಟ್ಟು ಮಲಗಿದೆ ಅಂದರೆ ಯಾವ ತಲೆಯಲ್ಲಿ ಪ್ರಶ್ನೆಗಳಿರುವುದಿಲ್ಲವೋ ಎಲ್ಲ ಪ್ರಶ್ನೆಗಳಿಗೂ ಉತ್ತರವನ್ನು ಕೊಡಬಲ್ಲ ಜ್ಞಾನವನ್ನು ಹೊಂದಿದ ತಲೆ ಎಂದರ್ಥ. ಈ ಬೃಹತ್ ತಲೆಯು ಸಿದ್ಧಿ, ಬುದ್ಧಿ ಎರಡನ್ನೂ ಹೊಂದಿರುವ ತತ್ತ್ವವನ್ನು ಪ್ರತಿಪಾದಿಸುತ್ತದೆ. ಶಿವ ಆ ತಲೆಯನ್ನು ಜೋಡಿಸಿದ. ಆ ಭಗವಂತನ ಸ್ವರೂಪವೇ ಗಣಪತಿ. ಗಣಗಳಿಗೆಲ್ಲ ಅಧಿಪತಿಯಾದವನು ಗಣಪತಿ.

ಈ ಪ್ರಪಂಚವೇ ಗಣಗಳಿಂದ ತುಂಬಿಕೊಂಡಿದೆ. ಗಣ ಎಂದರೆ ಗುಂಪು. ಬೇರೆಬೇರೆ ಅಣುಗಳ ಗುಂಪುಗಳಿಂದ ಈ ಜಗತ್ತು ನಿರ್ವಣವಾಗಿದೆ. ಒಂದು ಅಣುಗಳ ಗುಂಪನ್ನು ಚಿನ್ನ ಎಂದೂ ಇನ್ನೊಂದು ಅಣುಗಳ ಗುಂಪನ್ನು ಕಬ್ಬಿಣ ಎಂದೂ ಕರೆಯುತ್ತೇವೆ. ಹೀಗೆ, ಇತರ ಕೆಲವು ಅಣುಗಳ ಗುಂಪನ್ನು ಅಕ್ಕಿ, ಗೋಧಿ, ಧಾನ್ಯ ಎಂದೆಲ್ಲಾ ಕರೆಯುತ್ತೇವೆ. ಜಗತ್ತಿನಲ್ಲಿ ಎಷ್ಟು ದ್ರವ್ಯಗಳಿವೆಯೋ ಅವೆಲ್ಲವೂ ಗಣಗಳೇ. ಎಷ್ಟು ವಿಧದ ಬುದ್ಧಿಗಳಿವೆಯೋ ಅವೆಲ್ಲವೂ ಗಣಗಳು. ಈ ಗಣಗಳಿಗೆಲ್ಲ ಅಧಿಪತಿಯಾಗಿರುವವನು, ಗಣಪತಿ.

ಪ್ರಕೃತಿ ಮತ್ತೆ ಪರಮಾತ್ಮನ, ಅಂದರೆ ಪ್ರಕೃತಿ ಮತ್ತು ಪುರುಷನ ಸಂಯೋಗದಿಂದ ಉಂಟಾಗಿರುವ ಈ ದೈವೀಶಕ್ತಿಗೆ ಗಣಪತಿ ಎಂದು ಹೆಸರಿಸಿ ಯಾವುದೇ ಕೆಲಸದಲ್ಲಿ ತೊಡಗಿಕೊಳ್ಳುವ ಮೊದಲು ವಂದನೆ ಮಾಡುವುದು ಸಂಪ್ರದಾಯ. ಗಣಗಳಿಂದ ತುಂಬಿದ ಈ ಪ್ರಪಂಚದಿಂದ ಮುಕ್ತಿ ನೀಡಿ ಈಶ್ವರ ಪ್ರಾಪ್ತಿಯನ್ನು ಸಾಧ್ಯ ಮಾಡುವುದು ಗಣಪತಿತತ್ತ್ವ.

(ಲೇಖಕರು ಆಧ್ಯಾತ್ಮಿಕ ಚಿಂತಕರು, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರು) (ಪ್ರತಿಕ್ರಿಯಿಸಿ:  instagram@gurudev.kannada ) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net