

ಸಾಗರ: ತಾಲೂಕಿನಾದ್ಯಂತ ಮಹಿಳೆಯರು ಸಾಂಪ್ರದಾಯಿಕ ಆಚರಣೆ ಮತ್ತು ಆರಾಧನೆಯಿಂದ ಗೌರಿ ಬರಮಾಡಿಕೊಂಡರು. ನಗರದ ಮನೆ ಮನೆಗಳಲ್ಲಿ ಗೌರಿ ಸ್ಥಾಪಿಸಿ ವಿವಿಧ ಹೂ, ಗೆಜ್ಜೆ ವಸ್ತ್ರಗಳಿಂದ ಅಲಂಕರಿಸಲಾಗಿತ್ತು. ಸುಮಂಗಲಿಯರು ಬಾಗಿನ ನೀಡಿ ಮಂಗಳಗೌರಿಗೆ ಉಡಿ ತುಂಬಿದರು.
ವೀರಶೈವ ಕಲ್ಯಾಣ ಮಂಟಪದಲ್ಲಿ ವೀರಶೈವ ಅಕ್ಕನ ಬಳಗದಿಂದ ಗೌರಿ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗೌರಿ ಹಬ್ಬದ ವಿಶೇಷತೆ ಕುರಿತು ಉಪನ್ಯಾಸ ನಡೆಯಿತು. ಅಕ್ಕನ ಬಳಗದ ಸದಸ್ಯರಿಂದ ಭಜನೆ ಯಶಸ್ವಿಯಾಗಿ ನಡೆಯಿತು.
ಬಳಗದ ಅಧ್ಯಕ್ಷೆ ಮಧು ಮಲ್ಲಿಕಾರ್ಜುನ ಕೋರಿ, ಉಪಾಧ್ಯಕ್ಷೆ ರೇಖಾ ಶಿವಕುಮಾರ್, ಕಾರ್ಯದರ್ಶಿ ಮಂಜುಳಾ ಚಂದ್ರಶೇಖರ್, ಸಹಕಾರ್ಯದರ್ಶಿ ಸವಿತಾ ದುಗ್ಗಾವಿ, ಖಜಾಂಚಿ ಗೀತಾ ದಳವಾಯಿ, ಮಾಜಿ ಅಧ್ಯಕ್ಷೆ ಕಾವ್ಯಾ ಗುರುಪ್ರಸಾದ್ ಇತರರಿದ್ದರು.
ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಾಲಯದಲ್ಲಿ ನಾಡಿನ ಗಣೇಶನ ಹಬ್ಬಕ್ಕೆ ವಿಶೇಷ ಸಿದ್ಧತೆ ನಡೆದಿದೆ. ದೇವಾಲಯದ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಗಣಪತಿ ಕೆರೆಯಲ್ಲಿ ಭಕ್ತರು ಗಣಪತಿ ವಿಸರ್ಜಿಸುವ ಹಿನ್ನೆಲೆಯಲ್ಲಿ ಕೆರೆ ಸ್ವಚ್ಛಗೊಳಿಸಲಾಗಿದೆ.ನಗರಸಭೆಯಿಂದ ದೀಪದ ವ್ಯವಸ್ಥೆ ಮಾಡಲು ಸಿದ್ಧತೆ ನಡೆದಿದೆ.
ಹೂ, ಹಣ್ಣುಗಳ ಬೆಲೆ ಹೆಚ್ಚಳ ಇದ್ದರೂ ಜನರು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಗರದ ವಿವಿಧ ಭಾಗಗಳಲ್ಲಿ ಹೂವಿನ ಮಾರಾಟ ಜೋರಾಗಿತ್ತು. ಹಬ್ಬಗಳ ಆಚರಣೆಗೆ ಅಗತ್ಯ ವಸ್ತುಗಳನ್ನು ಜನರು ಖರೀದಿಸಿದರು.