ಸಾಹಿತ್ಯ ಗ್ರಾಮ ಯೋಜನೆ ಪ್ರತಿ ಜಿಲ್ಲೆಗೂ ವಿಸ್ತರಿಸಲಿ

sahitya
ಶಿವಮೊಗ್ಗದಲ್ಲಿ ಸಾಹಿತ್ಯ ಗ್ರಾಮದಲ್ಲಿ ಬಂಗಾರಪ್ಪ ಸ್ಮಾರಕ ಗ್ರಂಥಾಲಯವನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಡಿ.ಮಂಜುನಾಥ್, ಎಸ್.ರವಿಕುಮಾರ್ ಮುಂತಾದವರಿದ್ದರು.
Published on

ಶಿವಮೊಗ್ಗ: ಸಾಹಿತ್ಯಾತ್ಮಕ ಬರವಣಿಗೆ, ಅಧ್ಯಯನದಂತಹ ಕ್ರಿಯಾಶೀಲತೆಯ ಸಂಗಮವಾದ ಸಾಹಿತ್ಯ ಗ್ರಾಮ ಯೋಜನೆಯು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಸಾಹಿತ್ಯ ಗ್ರಾಮದಲ್ಲಿ ಬುಧವಾರ ಮಾಜಿ ಸಿಎಂ ಎಸ್.ಬಂಗಾರಪ್ಪ ಸ್ಮಾರಕ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಅವರು, ಬಂಗಾರಪ್ಪ ಅವರ ಹೆಸರಿನಲ್ಲಿ ನಿರ್ಮಾಣವಾಗಿರುವ ಗ್ರಂಥಾಲಯದ ಮೂಲಕ, ಕನ್ನಡ ಸಾಹಿತ್ಯ ಪರಿಷತ್ ಬಂಗಾರಪ್ಪ ಅವರಿಗೆ ದೊಡ್ಡ ಗೌರವ ನೀಡಿದೆ ಎಂದರು.

ಸಾಹಿತ್ಯ ಗ್ರಾಮ ಯೋಜನೆಯನ್ನು ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಬೇಕು. ಸಾಹಿತಿಗಳು, ಚಿಂತಕರು ಒಂದೆಡೆ ಸೇರಿ ಸಮಾಜದ ಉನ್ನತಿಯ ಕುರಿತು ಚರ್ಚಿಸುವ ಚಿಂತಕರ ಚಾವಡಿಯಾಗಿ ರೂಪುಗೊಳ್ಳಲಿ. ಅಂತಹ ಸೃಜನಶೀಲ ಚಿಂತನೆಗಳ ಮೂಲಕ ಯುವ ಸಮೂಹಕ್ಕೆ ಸಾಹಿತ್ಯ ಬರವಣಿಗೆ ಮಾರ್ಗದರ್ಶನದ ಕೇಂದ್ರವಾಗಲಿ ಎಂದು ಆಶಿಸಿದರು.

ರಾಜ್ಯ ಸರ್ಕಾರ ಸಾಹಿತಿಗಳಿಗೆ ಬಲ ತುಂಬುವ ಕೆಲಸ ಮಾಡುತ್ತಿದೆ. ಸೃಜನಶೀಲ ಸಾಹಿತ್ಯ ಚಟುವಟಿಕೆಗಳಿಗೆ ಹೆಚ್ಚು ಪೂರಕ ವಾತಾವರಣ ನಿರ್ಮಿಸಲು ಕಾಳಜಿ ತೋರುತ್ತಿದೆ. ಗಾಂಧಿ ಭಾರತ ಕಾರ್ಯಕ್ರಮದ ಮೂಲಕ ಮುಂದಿನ ಪೀಳಿಗೆಗೆ ಗಾಂಧೀಜಿ ಅವರ ಆದರ್ಶಗಳನ್ನು ಬಿತ್ತುವ ಕಾರ್ಯ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ರೂಪುಗೊಳ್ಳುವ ಯಾವುದೇ ಸಾಹಿತ್ಯಾತ್ಮಕ ಯೋಜನೆಗಳು ನಮ್ಮ ಅಸ್ಮಿತೆಯಾದ ಕುವೆಂಪು ಅವರ ಹೆಸರಿನೊಂದಿಗೆ ಆರಂಭವಾಗುವಂತಿರಲಿ. ಈ ಸ್ಥಳಕ್ಕೆ ಕುವೆಂಪು ಸಾಹಿತ್ಯ ಗ್ರಾಮ ಎಂಬ ಹೆಸರಿದ್ದರೆ ಮತ್ತಷ್ಟು ಶಕ್ತಿ ಬಂದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಸಾಹಿತಿ ಪ್ರೊ. ವಿಜಯಾದೇವಿ, ಕಸಾಪ ಪದಾಧಿಕಾರಿಗಳಾದ ಎಂ.ಎಂ.ಸ್ವಾಮಿ, ಎಂ.ನವೀನ್‌ಕುಮಾರ್, ಡಿ.ಗಣೇಶ್, ಮಂಜಪ್ಪ, ಮಹಾದೇವಿ, ರಘು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net