

ನವದೆಹಲಿ: ಕೇರಳದ ಶಬರಿಮಲೆ ದೇವಸ್ಥಾನ ಸೇರಿ ಧಾರ್ವಿುಕ ಸ್ಥಳಗಳಲ್ಲಿ ಮಹಿಳೆಯರ ಪ್ರವೇಶ ಕುರಿತಂತೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಗೆ ಸುಪ್ರೀಂಕೋರ್ಟ್ 10 ದಿನಗಳ ಅವಧಿಯನ್ನು ನಿಗದಿಪಡಿಸಿದೆ. ನ್ಯಾಯಪೀಠ ಕೇಳಬೇಕಾದ ಪ್ರಶ್ನೆಗಳು ಸಂಪೂರ್ಣ ಕಾನೂನು ಬದ್ಧವಾಗಿರುತ್ತವೆ. ಆದ್ದರಿಂದ ಪ್ರಕರಣದ ವಿಚಾರಣೆಗೆ 10 ದಿನಕ್ಕಿಂತ ಹೆಚ್ಚಿನ ಸಮಯ ಬೇಕಾಗುವುದಿಲ್ಲ ಎಂದು ಮುಖ್ಯನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ಪೀಠ ಮಂಗಳವಾರ ಹೇಳಿದೆ. ಜತೆಗೆ ಅರ್ಜಿದಾರರಲ್ಲಿ ಯಾರಾದರೂ ಹೆಚ್ಚು ಸಮಯ ಬಯಸಿದರೂ ಅವರಿಗೆ ಸಮಯ ನೀಡಲಾಗುವುದಿಲ್ಲ ಎಂದು ಸಿಜೆಐ ಬೊಬ್ಡೆ ಸ್ಪಷ್ಟಪಡಿಸಿದ್ದಾರೆ.
ಒಂಬತ್ತು ನ್ಯಾಯಾಧೀಶರ ಪೀಠ ಪರಿಗಣಿಸಬೇಕಾದ ಸಾಮಾನ್ಯ ಕಾನೂನು ಪ್ರಶ್ನೆಗಳನ್ನು ವಿವಿಧ ಅರ್ಜಿದಾರರ ವಕೀಲರಿಗೆ ನಿಗದಿತ ಸಮಯದೊಳಗೆ ರೂಪಿಸಲು ಸಾಧ್ಯವಾಗಿಲ್ಲ ಎಂದು ಸಾಲಿಟರಿ ಜನರಲ್ ತುಷಾರ್ ಮೆಹ್ತಾ ಕೋರ್ಟ್ ಮುಂದೆ ಪ್ರಸ್ತಾಪಿಸಿದ್ದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಬೊಬ್ಡೆ, 10 ದಿನಕ್ಕಿಂತ ಹೆಚ್ಚು ಸಮಯ ನೀಡುವುದಿಲ್ಲ ಎಂದು ಉತ್ತರಿಸಿದರು.
ವಕೀಲರು ಪಸ್ತಾಪಿಸಿದ ಕಾನೂನು ಪ್ರಶ್ನೆಗಳನ್ನು ಕೋರ್ಟ್ ಮುಂದೆ ಮಂಡಿಸುವಂತೆ ನ್ಯಾಯಪೀಠ ಮೆಹ್ತಾಗೆ ಸೂಚಿಸಿದೆ. ಅರ್ಜಿಗಳ ವಿಚಾರಣೆಗಾಗಿ ರಚಿಸಲಾಗಿರುವ 9 ನ್ಯಾಯಮೂರ್ತಿಗಳ ಪೀಠದಲ್ಲಿ, ಸಿಜೆಐ ಜತೆ ನ್ಯಾಯಮೂರ್ತಿಗಳಾದ ಆರ್. ಭಾನುಮತಿ, ಅಶೋಕ್ ಭೂಷಣ್, ಎಲ್. ನಾಗೇಶ್ವರ ರಾವ್, ಬಿ.ಆರ್ ಗವಾಯಿ, ಎಸ್.ಎ ನಜೀರ್, ಎಂ.ಎಂ ಶಾಂತನಗೌಡರ್, ಆರ್. ಸುಭಾಷ್ ರೆಡ್ಡಿ ಮತ್ತು ಸೂರ್ಯಕಾಂತ್ ಇದ್ದಾರೆ. ಮಹಿಳೆಯರ ಪ್ರವೇಶ ನಿಷೇಧವನ್ನು ಅಸಿಂಧುಗೊಳಿಸಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯನ್ನು ಈ ಒಂಬತ್ತು ಸದಸ್ಯರ ಪೀಠ ವಿಚಾರಣೆ ನಡೆಸಲಿದೆ.