

ಶಿವಮೊಗ್ಗ: ಸಾರ್ವಜನಿಕ ಆಡಳಿತದ ಮೂರು ಅಂಗಗಳಿಗೆ ಸಹಕಾರ, ಸಲಹೆ ನೀಡುವ ಹಾಗೂ ಸಾರ್ವಜನಿಕ ಆಡಳಿತ ಸುಗಮಗೊಳಿಸುವಲ್ಲಿ ವಕೀಲ ಸಮುದಾಯ ಸದಾ ಮುಂದಿರುತ್ತದೆ ಎಂದು ಉಪ ಲೋಕಾಯುಕ್ತ ನ್ಯಾ.ಕೆ.ಎನ್. ಫಣೀಂದ್ರ ಹೇಳಿದರು.
ನಗರದ ವಕೀಲರ ಭವನದಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಘಟಕ ಮತ್ತು ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಆಡಳಿತ ಮತ್ತು ಉತ್ತಮ ಆಡಳಿತದಲ್ಲಿ ವಕೀಲರ ಪಾತ್ರ ಕುರಿತು ಸಂವಾದ ನಡೆಸಿದ ಅವರು, ಹಿಂದೆ ರಾಷ್ಟ್ರ ಕಟ್ಟುವಲ್ಲಿ ವಕೀಲರ ಪಾತ್ರ ಮಹತ್ವದಾಗಿತ್ತು. ಬಹುತೇಕ ಸ್ವಾತಂತ್ರ್ಯ ಹೋರಾಟಗಾರರೆಲ್ಲ ವಕೀಲರಾಗಿದ್ದರು. ಮೇಲ್ಪಂಕ್ತಿಯ ಸಮುದಾಯ ಇದು. ಸರ್ಕಾರದ ಇತರೆ ಅಂಗಗಳಿಗಿಂತ ನ್ಯಾಯಾಂಗದ ಮೇಲೆ ಜನರಿಗೆ ಹೆಚ್ಚಿನ ನಂಬಿಕೆ, ವಿಶ್ವಾಸ ಇದೆ ಎಂದರು.
ನಮ್ಮ ದೇಶದಲ್ಲಿ ವಕೀಲರು, ನ್ಯಾಯಾಧೀಶರ ಸಂಖ್ಯೆ ಕಡಿಮೆ ಇದೆ. ಆದರೂ ವ್ಯವಸ್ಥೆ ಕುಸಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಈ ಮೂರು ಅಂಗಗಳು ಸೇರಿದರೆ ಮಾತ್ರ ಸಾರ್ವಜನಿಕ ಆಡಳಿತ ಸಾಧ್ಯ. ಕಾನೂನು, ವಿಶ್ಲೇಷಣೆ ತರಬೇತಿ, ಪರಿಣತಿ, ಜ್ಞಾನದ ಜತೆ ಸಾಮಾಜಿಕ ಪ್ರವೃತ್ತಿ ಬೆಳೆಸಿಕೊಂಡರೆ ಇತರೆ ಅಂಗಗಳಿಗೆ ಒತ್ತಾಸೆಯಾಗಿ ನಿಲ್ಲಬಹುದು ಎಂದು ಹೇಳಿದರು..
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಂಜುನಾಥ ನಾಯಕ್, ಸಿವಿಲ್ ನ್ಯಾಯಾಧೀಶ ಕಿರಣ್ ಪಿ.ಎಂ. ಪಾಟೀಲ್, ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಸ್.ಎ.ಶ್ರೀನಿವಾಸ, ವಿಶೇಷ ಸಾರ್ವಜನಿಕ ಅಭಿಯೋಜಕ ಎಂ.ಡಿ.ಸುಂದರರಾಜ್ ಉಪಸ್ಥಿತರಿದ್ದರು.