

ಕೊಳ್ಳೇಗಾಲ: ಪಟ್ಟಣದ ಪ್ರವಾಸಿ ಮಂದಿರದ ವೃತ್ತದಿಂದ ಕುರುಬನಕಟ್ಟೆ ಸಂಪರ್ಕ ಬೆಸೆಯುವ ರಸ್ತೆಯಲ್ಲಿ ಬೃಹತ್ ಗುಂಡಿ ನಿಮಾರ್ಣವಾಗಿದ್ದು ವಾಹನ ಸವಾರರು ಜೀವ ಭಯದಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದೊಳಗೆ ಹಾದು ಹೋಗಿರುವ 209 ಹೆದ್ದಾರಿ ರಸ್ತೆಗೆ ಪ್ರವಾಸಿ ಮಂದಿರದ ವೃತ್ತವಿದ್ದು. ಈ ವೃತ್ತದಿಂದಲೇ ವಾಹನ ಸವಾರರು ಕ್ರೈಸ್ತರ ಬೀದಿ, ಆರ್.ಎಂ.ಸಿ, ಲಿಂಗಣಾಪುರ, ಕುರುಬನ ಕಟ್ಟೆ, ಅರೇಪಾಳ್ಯ ಇನ್ನಿತರ ಗ್ರಾಮಗಳಿಗೆ ತೆರಳಬೇಕಿದೆ.
ಬೆಳಗಿನಿಂದ ಸಂಜೆವರೆವಿಗೂ ವೃತ್ತದಲ್ಲಿ ಸಾವಿರಾರು ವಾಹನಗಳು ಸಂಚಾರ ನಡೆಸಲಿದ್ದು ವಾಹನ ಸವಾರರು ಗುಂಡಿಯನ್ನು ತಪ್ಪಿಸಿಕೊಂಡು ಹೋಗಲು ಹರಸಾಹಸ ಪಡಬೇಕಾಗಿದೆ. ಕೆಲವು ದಿನಗಳಿಂದ ಸುರಿದ ಮಳೆ ನೀರಿಗೆ ಗುಂಡಿ ಭರ್ತಿಯಾದಾಗ ಬೈಕ್ ಸವಾರರು ಗುಂಡಿಯ ಪ್ರಮಾಣ ತಿಳಿಯದೆ ಸಂಚರಿಸಿ ಆಯಾತಪ್ಪಿ ಬಿದ್ದಿರುವ ಘಟನೆಗಳು ನಡೆದಿವೆ.
ಇಷ್ಟಾದರೂ ಅನಾಹುತದ ಮುನ್ಸೂಚನೆ ತೋರುತ್ತಿರುವ ಈ ಗುಂಡಿಯನ್ನು ಮುಚ್ಚಿಸಲು ನಗರಸಭೆ ಅಧಿಕಾರಿಗಳಾಗಲಿ ಮತ್ತು ಜನ ಪ್ರತಿನಿಧಿಗಳಾಗಲಿ ಕ್ರಮವಹಿಸಿಲ್ಲದಿರುವುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.
ಗುಂಡಿ ಸಮೀಪದಲ್ಲಿಯೇ ಪ್ರವಾಸಿ ಮಂದಿರವಿದ್ದು ಅತಿ ಗಣ್ಯರು, ಅಧಿಕಾರಿಗಳು, ಜನಪ್ರತಿನಿಧಿಗಳು ಈ ವೃತ್ತದಲ್ಲಿಯೇ ಸಂಚರಿಸುತ್ತಾರೆ. ಆದರೂ ಸಂಚಾರಕ್ಕೆ ತೊಂದರೆ ಆಗುತ್ತಿರುವ ಗುಂಡಿಯ ಬಗ್ಗೆ ಗಮನಹರಿಸದಿರುವುದು ವಿಪರ್ಯಾಸವಾಗಿದೆ.
ಗುಂಡಿಯಿಂದ ಸಂಚಾರಕ್ಕೆ ಅಡಚಣೆ ಆಗುತ್ತಿರುವ ಬಗ್ಗೆ ಸಾರ್ವಜನಿಕರು ಗುಂಡಿಯ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡು ವ್ಯವಸ್ಥೆ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.