ಐಪಿಎಸ್ ಅಧಿಕಾರಿಗೆ ಕಾರಿಗೆ ಡಿಕ್ಕಿ, ನಿಂದಿಸಿದ್ದ ಸವಾರ ಸೆರೆ

arrested
Published on

ಬೆಂಗಳೂರು: ಐಪಿಎಸ್ ಅಧಿಕಾರಿ ಡಾ.ಶೋಭಾರಾಣಿ ಅವರು ಪ್ರಯಾಣಿಸುತ್ತಿದ್ದ ಸರ್ಕಾರಿ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಬಳಿಕ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಪಡಿಸಿದ ಆರೋಪದಡಿ ದ್ವಿಚಕ್ರ ವಾಹನ ಸವಾರನೊಬ್ಬನನ್ನು ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಾಣವಾರದ ಎಜಿಬಿ ಲೇಔಟ್ ನಿವಾಸಿ ಜಿ.ಅಭಿಷೇಕ್(೨೨) ಬಂಧಿತ.
ಜ.೩ರಂದು ಬೆಳಗ್ಗೆ ೧೦.೧೫ ಕ್ಕೆ ಗೊರಗುಂಟೆಪಾಳ್ಯ ಟ್ರಾಫಿಕ್ ಸಿಗ್ನಲ್ ಬಳಿ ಈ ಘಟನೆ ನಡೆದಿತ್ತು. ಬಿಎಂಟಿಎಫ್ ಎಸ್.ಪಿ. ಡಾ.ಶೋಭಾರಾಣಿ ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆದರಿಕೆ ಹಾಕಿದ ಆರೋಪ:
ಡಾ.ಶೋಭಾರಾಣಿ ಅವರು ತಮ್ಮ ಸರ್ಕಾರಿ ಕಾರಿನಲ್ಲಿ ಜ.೩ರಂದು ಬೆಳಗ್ಗೆ ಮನೆಯಿಂದ ಕಚೇರಿಗೆ ಪ್ರಯಾಣಿಸುತ್ತಿದ್ದರು. ಗೊರಗುಂಟೆಪಾಳ್ಯದ ಟ್ರಾಫಿಕ್ ಸಿಗ್ನಲ್ ಬಳಿ ಹೋಗುವಾಗ ಹಿಂದಿನಿಂದ ವೇಗವಾಗಿ ಬಂದ ದ್ವಿಚಕ್ರ ವಾಹನ ಸವಾರ ಅಭಿಷೇಕ್ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಕಾರು ನಿಲ್ಲಿಸಿದ ಚಾಲಕ ಕೆಳಗೆ ಇಳಿದು ಪರಿಶೀಲಿಸುವಾಗ, ದ್ವಿಚಕ್ರ ವಾಹನ ಸವಾರ ಅಭಿಷೇಕ್, ಕಾರಿನ ಚಾಲಕನನ್ನು ಬಾಯಿಗೆ ಬಂದ ಹಾಗೆ ನಿಂದಿಸಲು ಶುರು ಮಾಡಿದ್ದಾನೆ.
ಈ ವೇಳೆ ಕಾರಿನಿಂದ ಕೆಳಗೆ ಇಳಿದಿರುವ ಡಾ.ಶೋಭಾರಾಣಿ ಅವರು ದ್ವಿಚಕ್ರ ವಾಹನ ಸವಾರನಿಗೆ ಬುದ್ಧಿವಾದ ಹೇಳಲು ಮುಂದಾಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಅಭಿಷೇಕ್, ಮಹಿಳಾ ಅಧಿಕಾರಿ ಎಂಬುದನ್ನು ಮರೆತು ಜಗಳ ತೆಗೆದು ಅನುಚಿತವಾಗಿ ವರ್ತಿಸಿ ಅವಾಚ್ಯಶಬ್ಧಗಳಿಂದ ನಿಂದಿಸಿದ್ದಾನೆ. ಕರ್ತವ್ಯಕ್ಕೆ ಹೋಗದಂತೆ ಅಡ್ಡಿಪಡಿಸಿದ್ದಾನೆ. ಅಲ್ಲದೇ ನಾನು ಪ್ರತಿಷ್ಠಿತ ಚಾರ್ಟೆಡ್ ಅಕೌಂಟೆಂಟ್ ಪುತ್ರನಾಗಿದ್ದು, ಸ್ವತಃ ಚಾರ್ಟೆಡ್ ಅಕೌಂಟೆಂಟ್ ಆಗಿದ್ದೇನೆ. ನೀವು ನನ್ನನ್ನು ಏನು ಮಾಡಿಕೊಳ್ಳಲು ಆಗುವುದಿಲ್ಲ ಎಂದು ಡಾ.ಶೋಭಾರಾಣಿ ಅವರಿಗೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಹೇಳಿಕೆ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net