

ಬಂಡಾಯ ಚಳವಳಿ ನನ್ನ ಸಾಹಿತ್ಯಕ್ಕೆ ವಿಶೇಷವಾದ ದಿಕ್ಕು ದೆಸೆಯನ್ನೇ ತೋರಿಸಿದೆ. ಏಕೆಂದರೆ ಅಲ್ಲಿಯವರೆಗೆ ತಳಸಮುದಾಯದ ಸಂವೇದನೆ, ತಲ್ಲಣಗಳು ಸಾಹಿತ್ಯದಲ್ಲಿ ಇರಲಿಲ್ಲ. ಆದರೆ ಎಂಭತ್ತರ ದಶಕದಲ್ಲಿ ಕನ್ನಡ ಸಾಹಿತ್ಯ ಮೂರು ಶಾಖೆಗಳಾಗಿ ವಿಭಜನೆಯಾಯಿತು. ದಲಿತ ಸಾಹಿತ್ಯ, ಸ್ತ್ರೀವಾದ ಹಾಗೂ ಮುಸ್ಲಿಂ ಎಂಬುದಾಗಿ. ಆಗ ನಮಗೂ ಬರೆಯಬೇಕೆಂಬ ಒತ್ತಾಸೆ ಇತ್ತು. ಆದರೆ ಮುಸ್ಲಿಂ ಸಾಹಿತ್ಯ ಸೃಷ್ಟಿಸಬೇಕಾದರೆ ಅದರ ವಿಷಯ, ವಸ್ತು, ಹೆಸರು, ಹಿನ್ನೆಲೆ ಇದೆಲ್ಲ ಯಾವ ರೀತಿ ಇರಬೇಕು ಎಂಬ ಸ್ಪಷ್ಟತೆ ಇರಲಿಲ್ಲ. ಬಂಡಾಯ ಚಳವಳಿಯ ಸಭೆಗಳಲ್ಲಿ, ಗೋಷ್ಠಿಗಳಲ್ಲಿ ನಾವಿದನ್ನು ಪ್ರಸ್ತಾಪ ಮಾಡುತ್ತಿದ್ದೆವು. ಬರಗೂರು ಅವರು ಅವಶ್ಯಕ ಸೈದ್ಧಾಂತಿಕ ಸ್ಪಷ್ಟತೆಯನ್ನು ನನಗೆ ಒದಗಿಸಿಕೊಟ್ಟರು. ಅವರು ಮತ್ತು ಚೆನ್ನಣ್ಣ ವಾಲೀಕಾರ, ಕಾಳೇಗೌಡ ನಾಗವಾರ ಮೊದಲಾದವರ ನೇತೃತ್ವದ ಬಂಡಾಯ ಸಾಹಿತ್ಯ ಸಂಘಟನೆಯು ನಮ್ಮನ್ನು ಪ್ರೇರೇಪಿಸಿತು. ಅವರೆಲ್ಲ ‘ನಿಮ್ಮ ಸುತ್ತಮುತ್ತಲಿನ ಅಂಶಗಳ ಬಗ್ಗೆ ಬರೀರಿ, ಪ್ರಾಮಾಣಿಕವಾಗಿ ಬರೀರಿ’ ಎಂದು ಮಾರ್ಗದರ್ಶನ ನೀಡುತ್ತಿದ್ದರು. ನನ್ನ ಬದುಕಿನುದ್ದಕ್ಕೂ ಕನ್ನಡ ಸಾಂಸ್ಕೃತಿಕ ಲೋಕವು ನನಗೆ ನೀಡಿದ ಒಳನೋಟಗಳು, ಕ್ಷಮತೆ, ವೈಚಾರಿಕ ಅರಿವು ಮತ್ತು ಒಳಗೊಳ್ಳುವಿಕೆಯು ನನ್ನ ಸೃಜನಶೀಲ ಅಭಿವ್ಯಕ್ತಿಗೆ ಪಕ್ವತೆಯನ್ನು ಮತ್ತು ಮೆರುಗನ್ನು ನೀಡಿವೆ.
ರೈತ ಚಳವಳಿ ಮತ್ತು ದಲಿತ ಚಳವಳಿಯಲ್ಲಿ ತಾವು ತೊಡಗಿಸಿಕೊಂಡವರು. ಅದು ನಿಮ್ಮ ಸಾಹಿತ್ಯಕ್ಕೆ ಹಾಗೂ ವ್ಯಕ್ತಿತ್ವಕ್ಕೆ ಪೂರಕವಾಯಿತೆ?
ದಲಿತ ಸಂಘರ್ಷ ಸಮಿತಿಯ ಅನೇಕ ವಿಚಾರ ಸಂಕಿರಣಗಳಲ್ಲಿ ನಾನು ಭಾಗಿಯಾಗುತ್ತಿದ್ದೆ. ಸಂವಿಧಾನ, ದಲಿತರ ಪರಿಸ್ಥಿತಿಯ ಚಿತ್ರಣ, ಅಂಬೇಡ್ಕರ್ ವಿಚಾರಧಾರೆ, ಸಾಮಾಜಿಕ ಯಾಜಮಾನ್ಯದ ಅಸಹನೀಯ ಸ್ಥಿತಿ ಇಂಥವೆಲ್ಲ ಅಲ್ಲಿ ವಿಶ್ಲೇಷಣೆಗೊಳಪಡುತ್ತಿದ್ದವು. ದಲಿತರ ಬಗ್ಗೆ ಮೊದಲಿನಿಂದಲೂ ನನಗೆ ಅನುಕಂಪ ಇತ್ತು. ಆದರೆ ಬಿ.ವಿ. ಚಂದ್ರಪ್ರಸಾದ್ ತ್ಯಾಗಿ, ಜಯರಾಂ ಮೊದಲಾದವರ ಜತೆ ಕೆಲಸ ಮಾಡಿದ ನಂತರ ದಲಿತರ ಸಮಸ್ಯೆಗಳ ಬಗ್ಗೆ ಸ್ಪಷ್ಟತೆ ದೊರೆಯಿತು. ಅದೇ ರೀತಿ ರೈತ ಸಂಘಟನೆಗಳಲ್ಲಿ, ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಸ್ತ್ರೀವಾದಿ ವಿಚಾರಸಂಕಿರಣಗಳು, ಗೋಕಾಕ್ ಚಳವಳಿ, ರಂಗಭೂಮಿ ಚಟುವಟಿಕೆ ಇಲ್ಲೆಲ್ಲ ತೊಡಗಿಸಿಕೊಂಡೆ. ಇದರಿಂದಾಗಿ ನನ್ನೊಳಗೆ ಸಾಮಾಜಿಕ ಒಳನೋಟ ಮೂಡಲು, ಖಚಿತ ನಿಲುವು ರೂಪುಗೊಳ್ಳಲು ಸಾಧ್ಯವಾಯಿತು.
ಶಿಕ್ಷಕಿಯಾಗಿದ್ದವರು, ಲೇಖಕಿಯಾಗಿ ರೂಪುಗೊಂಡ ಬಗೆ ಹೇಗೆ?
ನಾನು ಆಕಾಶವಾಣಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಉದ್ಘೋಷಕಿಯಾಗಿದ್ದೆ. ಮೂರು ತಿಂಗಳು ಕೆಲಸ ಮಾಡಿದ ನಂತರ ಕರಾರು ಮುಗಿಯಿತು. ಸಕಲೇಶಪುರದ ಬೆಳಗೋಡು ಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿದೆ. ಮೂರು ವರ್ಷದ ನಂತರ ಮದುವೆಯಾಯಿತು. ಮದುವೆಯ ನಂತರ ಕೆಲಸ ಮುಂದುವರಿಸಲು ಕೊಡುವುದಿಲ್ಲ ಎಂಬ ಸುಳಿವಿತ್ತು. ಹೀಗಾಗಿ ಬಿಟ್ಟುಬಿಟ್ಟೆ. ಅದು 1981ನೇ ಇಸವಿ. ನನಗೆ ಹೆರಿಗೆಯಾದ ಸಂದರ್ಭ. ನಾನು ಸ್ವಲ್ಪ ಖಿನ್ನತೆಗೆ ಜಾರಿದ್ದೆ. ಸಂಸಾರದಲ್ಲಿ ತೊಡಗಿಸಿಕೊಳ್ಳಬೇಕಾಗಿತ್ತು. ನಾನು ಅಪಾರ ಮಾನಸಿಕ ಯಾತನೆಯಲ್ಲಿದ್ದೆ. ಯಾವುದೇ ಬೌದ್ಧಿಕ ಕೆಲಸ, ಅವಕಾಶ ಇರಲಿಲ್ಲ. ಆ ಸಮಯದಲ್ಲಿ ನನ್ನ ಪತಿ ಅನೇಕ ಪುಸ್ತಕಗಳನ್ನು ತಂದುಕೊಟ್ಟರು. ನಿಯಮಿತವಾಗಿ ಪತ್ರಿಕೆಗಳನ್ನೂ ತರುತ್ತಿದ್ದರು. ಹಾಗೆ ಒಂದು ದಿನ ಲಂಕೇಶ್ ಪತ್ರಿಕೆ ತಂದರು. ‘ಸ್ವಲ್ಪ ಭಿನ್ನವಾಗಿದೆ ನೋಡು’ ಅಂದರು. ಓದಿದೆ. ಖುಷಿಯಾಯಿತು. ಏಕೆಂದರೆ ಅಲ್ಲಿ ಬರೆಯಲು ಕಟ್ಟುಪಾಡುಗಳಿರಲಿಲ್ಲ. ಅದೇ ಸಮಯಕ್ಕೆ ವಿಜಯಪುರದಲ್ಲಿ ನಜ್ಮಾ ಭಾಂಗಿ ಎಂಬ ಟೀಚರ್ ಸಿನಿಮಾಕ್ಕೆ ಹೋದಳೆಂಬ ಕಾರಣಕ್ಕೆ ಕೆಲವು ಮುಸ್ಲಿಮರು ಅವಳಿಗೆ ಕಿರುಕುಳ ನೀಡಿ, ಮನೆಗೆ ನೀರು ಸರಬರಾಜು ನಿಲ್ಲಿಸಿದ್ದರೆಂಬ ಸುದ್ದಿ ಓದಿದೆ. ನನಗೆ ವಿಪರೀತ ಕೋಪ ಬಂತು. ಈ ಥರ ದಬ್ಬಾಳಿಕೆ ನಡೆಸುವುದು ಸೂಕ್ತ ಅಲ್ಲ, ಇಸ್ಲಾಂನಲ್ಲಿ ಮನರಂಜನೆಗೆ ಎಷ್ಟು ಅವಕಾಶವಿದೆ ಎಂದು ಲೇಖನ ಬರೆದು ಪೋಸ್ಟ್ ಮಾಡಿದೆ. ಲಂಕೇಶ್ ಪತ್ರಿಕೆಯಲ್ಲಿ ಅದು ಪ್ರಕಟವಾಯಿತು. ನಂತರ ನನ್ನ ಪ್ರತಿಭೆ ಮತ್ತು ಸಾಹಿತ್ಯಾಸಕ್ತಿಯನ್ನು ಗುರುತಿಸಿದ ಪಿ.ಲಂಕೇಶ್ ಅವರು ನನಗೆ ಅಪಾರ ಅವಕಾಶಗಳನ್ನು ಕಲ್ಪಿಸಿಕೊಟ್ಟರು. ಪತ್ರಿಕಾ ವರದಿಗಳ ಜೊತೆಯಲ್ಲಿ ಸೃಜನಶೀಲ ಕೃತಿಗಳ ಬರವಣಿಗೆಯಲ್ಲಿ ತೊಡಗುವಂತೆ ನನ್ನ ಮನಸ್ಸನ್ನು ಉದ್ದೀಪನಗೊಳಿಸಿದರು. ಆಮೇಲೆ ಅದೇ ಪತ್ರಿಕೆಯ ಹಾಸನ ಜಿಲ್ಲಾ ವರದಿಗಾರ್ತಿಯನ್ನಾಗಿ ಮಾಡಿದರು. 10 ವರ್ಷ ಕೆಲಸ ಮಾಡಿದೆ.
ಇಪ್ಪತೆôದು ವರ್ಷಗಳ ಹಿಂದೆ ನಿಮಗೆ ಸಾಮಾಜಿಕ ಬಹಿಷ್ಕಾರ ಹಾಕಿ ಫತ್ವಾ ಹೊರಡಿಸಲಾಗಿತ್ತು. ತಾವು ಮಾಡಿದ ಅಂಥ ಘೋರ ಅಪರಾಧ ಏನಾಗಿತ್ತು ?
1999ರಲ್ಲಿ ನನ್ನ ‘ಬೆಂಕಿ ಮಳೆ’ ಹೆಸರಿನ ಕಥಾ ಸಂಕಲನ ಪ್ರಕಟವಾಯಿತು. ಏಳು ಕಥೆಗಳ ಸಂಕಲನ ಅದು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಆ ಕೃತಿಗೆ ಹಲವಾರು ಪ್ರಶಸ್ತಿಗಳು ಬಂದವು. ಆ ಸಂದರ್ಭದಲ್ಲಿ ಜನವಾಹಿನಿ ಪತ್ರಿಕೆಯವರು ನನ್ನನ್ನು ಸಂದರ್ಶನ ಮಾಡಿದರು. ದಲಿತರು ದೇವಾಲಯ ಪ್ರವೇಶಕ್ಕೆ ಅವಕಾಶ ಬೇಕೆಂದು ಹೋರಾಟ ಮಾಡುತ್ತಿದ್ದ ಸಂದರ್ಭ ಅದಾಗಿತ್ತು. ಹಾಗೆಯೇ ಮಸೀದಿಗಳಲ್ಲಿ ಮುಸ್ಲಿಂ ಮಹಿಳೆ ಪ್ರವೇಶಿಸಲು ಅವಕಾಶವಿಲ್ಲ, ಈ ಅವಕಾಶಕ್ಕೆ ಅಥವಾ ಪ್ರವೇಶ ಹಕ್ಕಿಗಾಗಿ ಹೋರಾಟ ಮಾಡುತ್ತೀರಾ ಎಂದು ಸಂದರ್ಶಕರು ಪ್ರಶ್ನಿಸಿದ್ದರು. ಅದಕ್ಕೆ ಉತ್ತರವಾಗಿ ನಾನು, ‘ಮುಸ್ಲಿಂ ಮಹಿಳೆಯರು ಮಸೀದಿ ಪ್ರವೇಶಿಸಲು ಹೋರಾಡುವ ಅಗತ್ಯ ಇಲ್ಲ, ಏಕೆಂದರೆ ಮಹಿಳೆ ಮಸೀದಿಗೆ ಹೋಗಲು ಯಾವುದೇ ಅಡ್ಡಿ ಇಲ್ಲ. ಪುರುಷಶಾಹಿ ವ್ಯವಸ್ಥೆಯಿಂದ ಅವಕಾಶ ಸಿಗುತ್ತಿಲ್ಲ ಅಷ್ಟೇ’ ಎಂದು ಹೇಳಿದ್ದೆ. ಇದನ್ನು ಕೆಲವರು ಗಂಭೀರವಾಗಿ ಪರಿಗಣಿಸಿ ನಾನು ಹೇಳಿದ್ದನ್ನು ವಿವಾದವಾಗಿಸಿದರು. ನನ್ನ ಮೇಲೆ ಫತ್ವಾ ಹೊರಡಿಸಿ ಬಹಿಷ್ಕಾರ ಹಾಕಿದರು. ಮೂರು ತಿಂಗಳ ಕಾಲ ಇದು ದೊಡ್ಡ ಚರ್ಚೆಯಾಯಿತು. ನಂತರ ಬಹಿಷ್ಕಾರವನ್ನು ಹಿಂದಕ್ಕೆ ಪಡೆದುಕೊಂಡರು.