ನಿಜವಾದ ಅರ್ಥದಲ್ಲಿ ಯೋಗ

Untitled-design-103
Published on

| ಸ್ವಾಮಿ ಜಪಾನಂದ

ಸಂಸ್ಕೃತದ ಯುಜ್ ಧಾತುವಿನಿಂದ ಯೋಗ ಎಂಬ ಪದ ಬಂದಿದೆ. ಇದರ ಅರ್ಥ ಪರಿಪಕ್ವವಾದ ಕೇಂದ್ರೀಕೃತವಾದ ಮನಸ್ಸು. ಈ ಪದದ ಮತ್ತೊಂದು ಮೂಲ ಯುಜಿರ್ ಯೋಗ. ಇದರ ಅರ್ಥ ಒಟ್ಟುಗೂಡುವಿಕೆ. ಈ ಎರಡೂ ಅರ್ಥಗಳ ಸಮ್ಮಿಶ್ರಣ ಎಂದರೆ ಮನಸ್ಸನ್ನು ಏಕಾಗ್ರತೆಗೊಳಿಸುವ ವಿಜ್ಞಾನ. ಈ ಮೂಲಕ ಅಧ್ಯಾತ್ಮದ ಪ್ರಗತಿ ಅಂದರೆ ಜೀವಾತ್ಮ ಪರಮಾತ್ಮನಲ್ಲಿ ಮಿಲನಗೊಳ್ಳುವುದು ಎಂದರ್ಥ. ಈ ವಿಚಾರಗಳನ್ನು ಕ್ರಿ.ಪೂ.2000 ವರುಷಗಳ ಹಿಂದೆಯೇ ‘ಯೋಗ ದರ್ಶನ’ ಎಂಬ ಮಹಾನ್ ಪ್ರಕರಣ ಗ್ರಂಥವನ್ನು ಶ್ರೀ ಪತಂಜಲಿ ಮಹರ್ಷಿಗಳು ರಚಿಸಿದರು. ಜೀವ ಸಾಧನೆಯ ಮೂಲಕ ಈಶ್ವರನನ್ನು ಹೊಂದುವುದೇ ಯೋಗಾಭ್ಯಾಸ ಎನ್ನಬಹುದು. ಅಂದರೆ ಯೋಗ ಅಭ್ಯಾಸ ಮಾಡುವವರ ಮೂಲ ಗುರಿ ಪರಬ್ರಹ್ಮ ವಸ್ತುವನ್ನು ಅರಿಯುವುದು ಅಥವಾ ಅಣು ಬ್ರಹ್ಮಾಂಡವನ್ನು ಸೇರುವುದು ಎಂದರ್ಥ.

ಈ ನಿಟ್ಟಿನಲ್ಲಿ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಸರಳವಾದ ರೀತಿಯಲ್ಲಿ ಹೇಳಿದ್ದಾರೆ. ಕೆಲ ಕೆಲವರು ಯೋಗಿಯ ಲಕ್ಷಣಗಳಿಂದ ಜನ್ಮ ತಳೆಯುತ್ತಾರೆ; ಆದರೆ ಅವರೂ ಎಚ್ಚರಿಕೆಯಿಂದಿರಬೇಕು. ಪ್ರಾಪಂಚಿಕ ವಿಷಯ ಭೋಗ ವಸ್ತುಗಳಿಂದ ದೂರವಿರಬೇಕು. ಇವು ಯೋಗದ ಪ್ರತಿಬಂಧಕ. ಅದು ಅವರನ್ನು ಯೋಗ ಭ್ರಷ್ಟರನ್ನಾಗಿ ಮಾಡಿ ಪ್ರಾಪಂಚಿಕತ್ವದೆಡೆಗೆ ಎಳೆದು ಬಿಡುತ್ತದೆ. ಬಹುಶಃ ಭೋಗಾಸಕ್ತಿ ಅವರಲ್ಲಿ ಮುಗಿಯಿತು ಎಂದರೆ ಮತ್ತೆ ಭಗವಂತನ ಕಡೆಗೆ ಹೊರಟು ಹೋಗುತ್ತಾರೆ. ಅವರಿಗೆ ಯೋಗಾವಸ್ಥೆ ಬಂದು ಬಿಡುತ್ತದೆ ಎಂದು ಯೋಗಿಯ ಮಾರ್ಗವನ್ನು ಅವರು ವಿವರಿಸುತ್ತಾರೆ.

ಪರಮಹಂಸರು ಪ್ರಥಮವಾಗಿ ನರೇಂದ್ರನಾಥ (ಸ್ವಾಮಿ ವಿವೇಕಾನಂದರು)ನನ್ನು ಕಂಡಾಗ ನೀನು ಯೋಗಿ ಎಂದು ತಿಳಿಸುತ್ತಾರೆ. ಯುವ ನರೇಂದ್ರನಾಥ ಪ್ರತಿ ದಿನ ಮಲಗುವ ಮುನ್ನ ತನ್ನ ಎರಡೂ ನೇತ್ರಗಳ ಮಧ್ಯೆ, ಭ್ರೂಮಧ್ಯದಲ್ಲಿ ದಿವ್ಯ ಜ್ಯೋತಿಯನ್ನು ಕಾಣುತ್ತಿದ್ದನಂತೆ. ಇದು ನಿಜವಾದ ಅರ್ಥದಲ್ಲಿ ಯೋಗಿಯ ವೈಶಿಷ್ಟ್ಯ. ಪರಮಹಂಸರು ತಿಳಿಸಿದಂತೆ ಮುಂದೆ ಇದೇ ನರೇಂದ್ರನಾಥ ಯುಗಪುರುಷನಾಗಿ, ಮಹಾನ್ ಯೋಗಿಯಾಗಿ, ವಿಶ್ವಮಾನವನಾಗಿ, ಧ್ಯಾನ ಮೂರ್ತಿಯಾಗಿ ಸಹಸ್ರ ಸಹಸ್ರ ಮಂದಿಗೆ ಆತ್ಮ ಸ್ಪುರಣವಾಗುವಂತಹ ಭೋಧನೆಗಳನ್ನು, ವಿಚಾರಗಳನ್ನು ಮಂಡಿಸುತ್ತಾರೆ. ನಿಜವಾದ ಯೋಗಿಯ ಸಹವಾಸದಿಂದ ಜತೆಯಲ್ಲಿರುವವರೂ ಯೋಗಿಗಳಾಗುವ ಅವಕಾಶ ದೊರ ೆಯುತ್ತದೆ. ರಾಮಕೃಷ್ಣ ಪರಮಹಂಸರು ಈ ಮಹಾನ್ ತತ್ತ್ವಕ್ಕೆ ಅದ್ಭುತ ಉದಾಹರಣೆ. ಪರಮಹಂಸರು ದಕ್ಷಿಣೇಶ್ವರದ ಗಂಗಾತೀರದ ದಟ್ಟ ಕಾನನದಲ್ಲಿ ಸಮಸ್ತ ಬಂಧನಗಳನ್ನು ತೊರೆದು ಧ್ಯಾನಸ್ಥರಾಗಿ ದಿನಗಟ್ಟಲೆ ಕೇವಲ ಆತ್ಮಸ್ಥರಾಗಿ ಸಾಧನೆಯಲ್ಲಿ ಮುಳುಗುತ್ತಿದ್ದ ಸನ್ನಿವೇಶಗಳು ಅಪಾರ. ಆ ಸಂದರ್ಭದಲ್ಲಿ ಪರಮಹಂಸರನ್ನು ಸ್ವತಃ ಕಂಡ ಕೆಲ ಸಾಧು ಸಂತರ ಪ್ರಕಾರ, ರಾಮಕೃಷ್ಣರು ಧ್ಯಾನಸ್ಥರಾಗಿ ಪಂಚವಟಿಯ ಕಾನನದಲ್ಲಿ ಕಳೆದಾಗ ಅವರ ಮೈಮೇಲೆ ಸರಿಸೃಪಗಳು ಹರಿದಾಡುತ್ತಾ, ಶಿರದ ಕೂದಲುಗಳ ಮಧ್ಯೆ ಪಕ್ಷಿಗಳು ಗೂಡು ಕಟ್ಟಿದ್ದೂ ಇತ್ತು. ಈ ಅನುಭವಗಳನ್ನು ನಾವು ‘ಶ್ರೀರಾಮಕೃಷ್ಣ ಲೀಲಾ ಪ್ರಸಂಗ’ ಗ್ರಂಥದಲ್ಲಿ ಕಾಣುತ್ತೇವೆ. ಈ ಅಧ್ಯಾತ್ಮಿಕ ಉತ್ತುಂಗ ಭಾವದಲ್ಲಿದ್ದಾಗ ರಾಮಕೃಷ್ಣರ ಮನಸ್ಸು ಕೇವಲ ಈಶ್ವರನಲ್ಲಿ ಕೇಂದ್ರೀಕೃತವಾಗಿರುತ್ತಿತ್ತು. ಇದೇ ನಿಜವಾದ ಅರ್ಥದಲ್ಲಿ ಯೋಗ.

ಪರಮಹಂಸರು ಹೇಳುವಂತೆ ಮನಸ್ಸು ಸ್ಥಿರವಾಗದ ಹೊರತು ಯೋಗಾವಸ್ಥೆ ಬಾರದು. ಸಂಸಾರದ ಗಾಳಿ ಮನಸ್ಸೆಂಬ ದೀಪವನ್ನು ಸರ್ವದಾ ಅಸ್ಥಿರವಾಗಿಸಲು ಪ್ರಯತ್ನಿಸುತ್ತಿರುತ್ತದೆ. ಆ ದೀಪ ಸ್ಥಿರವಾಗಿ ಬೆಳಗಲು ಮನಸ್ಸು ಸಂಪೂರ್ಣ ಕೇಂದ್ರೀಕೃತವಾಗಿರಬೇಕು. ಆಗ ಅದಕ್ಕೆ ಯೋಗಾವಸ್ಥೆ ಬಂದಿದೆ ಎನ್ನಬಹುದು. ಪಲ್ಲಟವಾಗುವಂತಹ, ಅಸ್ಥಿರವಾದಂತಹ ಮನಸ್ಸನ್ನು ಸ್ಥಿರವಾಗಿಡಲಾಗುತ್ತಿಲ್ಲದ ಕಾರಣ ಆಸೆ, ಆಕಾಂಕ್ಷೆ ಮತ್ತಿತರ ಆಕರ್ಷಣೆಗಳು ಮನಸ್ಸನ್ನು ಪಲ್ಲಟ ಮಾಡುವ ಸ್ಥಿತಿ. ಈ ಅಂಶವನ್ನೇ ಕನ್ನಡದ ಕವಿ ಹೀಗೆ ಬರೆಯುತ್ತಾನೆ. ‘ಚಪಲೆ ಸೊಡರ ಕುಡಿಯಂ ಪೋಲ್ವಳ್’ -ಸಂಪತ್ತು, ಆಸ್ತಿ, ಧನವಿದ್ದವರ ಸ್ಥಿತಿ ಎಂದರೆ ಸೊಡರಿನ ಕುಡಿ ಎಂದರೆ ದೀಪದ ಕುಡಿಯಂತೆ ಅಸ್ಥಿರ ಎನ್ನುತ್ತಾರೆ. ಹಾಗೆಯೇ ಪ್ರಾಪಂಚಿಕತೆ ಹೆಚ್ಚುತ್ತಾ ಹೋದಂತೆ ಮನಸ್ಸನ್ನು ನಿಗ್ರಹಿಸಲು ಕಷ್ಟ ಎಂದು ಅರಿಯಬೇಕು. ರಾಮಕೃಷ್ಣರು ಮತ್ತೊಂದು

ಉದಾಹರಣೆ ಕೊಡುತ್ತಾರೆ. ಹಕ್ಕಿ ಕಾವಿಗೆ ಕುಳಿತಿರುವಾಗ ಅದರ ಇಡೀ ಮನಸ್ಸು ತನ್ನ ಮೊಟ್ಟೆಯ ಮೇಲೆ ನೆಲಸಿರುತ್ತದೆ. ಆದರೆ ಅದರ ಕಣ್ಣು ಮಾತ್ರ ಸುಮ್ಮನೆ ಮೇಲಕ್ಕೆ ನೋಡುತ್ತಿರುವ ಹಾಗೆ ಕಾಣಿಸುತ್ತದೆ. ಹಾಗೆಯೇ ಈ ಪ್ರಪಂಚದಲ್ಲಿ ನಾವು ಎಷ್ಟೇ ಕೆಲಸ ಕಾರ್ಯಗಳಲ್ಲಿ ಮುಳುಗಿದ್ದಾಗ್ಯೂ ಆಂತರ್ಯದಲ್ಲಿ ಭಗವಂತನ ಸ್ಮರಣೆ, ಚಿಂತನ-ಮಂಥನ ಇತ್ಯಾದಿಗಳು ಏಕಪ್ರಕಾರವಾಗಿ ಸಾಗುತ್ತಿರಬೇಕು. ಇದೇ ಅತ್ಯಂತ ಮುಖ್ಯವಾದ ಅಂಶ. ಏಕಾಗ್ರತೆಯೊಂದಿದ್ದಲ್ಲಿ ಇದು ಸಾಧ್ಯ. ಇದೇ ನಿಜವಾದ ಅರ್ಥದಲ್ಲಿ ಯೋಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net