

ಶಿವಮೊಗ್ಗ: ಕಾಂಗ್ರೆಸ್ ಪಕ್ಷಕ್ಕೆ ನಿಜವಾದ ಬೆನ್ನೆಲುಬು ಹಿಂದುಳಿದ ವರ್ಗವಾಗಿದೆ. ಅದನ್ನು ಸ್ವತಃ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರೂ ಒಪ್ಪಿಕೊಂಡಿದ್ದಾರೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ, ಸಚಿವ ಮಧು ಬಂಗಾರಪ್ಪ ಹೇಳಿದರು.
ಅಂಬೇಡ್ಕರ್ ಭವನದಲ್ಲಿ ಶನಿವಾರ ಕಾಂಗ್ರೆಸ್ ಹಿಂದುಳಿದ ವಿಭಾಗದ ನೂತನ ಜಿಲ್ಲಾಧ್ಯಕ್ಷ ರಮೇಶ್ ಶಂಕರಘಟ್ಟ ಅವರ ಪದಗ್ರಹಣ ಸಮಾರಂಭ ಹಾಗೂ ಹಿಂದುಳಿದ ವರ್ಗಗಳ ಜಿಲ್ಲಾ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಿಂದುಳಿದ ವರ್ಗದವರನ್ನು ಗುರುತಿಸದೇ ಹೋಗಿದ್ದಕ್ಕೆ ರಾಹುಲ್ ಗಾಂಧಿ ಅವರೇ ಕ್ಷಮೆ ಕೋರಿದ್ದಾರೆ. ಶೇ.58ರಷ್ಟು ಹಿಂದುಳಿದ ವರ್ಗದವರಿದ್ದು, ಪಕ್ಷದಿಂದ ಬಿಟ್ಟು ಹೋಗಿರುವ ಹಿಂದುಳಿದ ವರ್ಗದವರನ್ನು ಪುನಃ ಪಕ್ಷಕ್ಕೆ ಕರೆತರುವ ಕೆಲಸ ಆಗಬೇಕಿದೆ ಎಂದರು.
100 ದಿನದಲ್ಲಿ ನೂರು ಹಿಂದುಳಿದ ವರ್ಗಗಳ ಸಮಾವೇಶವನ್ನು ರಾಜ್ಯದಲ್ಲಿ ವಾಯ್ಸ ಆಫ್ ಒಬಿಸಿ ಮೂಲಕ ನಡೆಸುವಂತೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಸೂಚನೆ ನೀಡಿದ್ದರು. ನೂರು ದಿನದ ಬದಲು 20ರಿಂದ 25 ದಿನಗಳಲ್ಲೇ 100 ಸಮಾವೇಶಗಳನ್ನು ನಡೆಸಲು ಚಿಂತನೆ ನಡೆಸಿದ್ದೇವೆ. ಇಡೀ ದೇಶದಲ್ಲೇ ಮೊದಲ ಸಮಾವೇಶ ಶಿವಮೊಗ್ಗದಿಂದಲೇ ಆರಂಭಗೊಂಡಿದೆ ಎಂದರು.
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಮಾತನಾಡಿ, ಪಕ್ಷದಲ್ಲಿ ಜವಾಬ್ದಾರಿಯನ್ನು ಅಧಿಕಾರ ಎಂದು ಭಾವಿಸಿದರೆ ಕಾರ್ಯಕರ್ತರಿಂದ ದೂರ ಆಗುತ್ತೇವೆ. ಕೊಟ್ಟ ಅಧಿಕಾರವನ್ನು ಸುಂದರ ಕಲಾಕೃತಿ ನಿರ್ಮಿಸುವ ಜವಾಬ್ದಾರಿ ಎಂದು ಭಾವಿಸಬೇಕು. ಅಧಿಕಾರ ಎಂದು ಭಾವಿಸಿದರೆ ಸಂಘಟನೆಗೆ ಬಹಳ ದೊಡ್ಡ ಪೆಟ್ಟು ಬೀಳಲಿದೆ ಎಂದು ಎಚ್ಚರಿಕೆ ನೀಡಿದರು. ಸಿಎಂ ಸಿದ್ದರಾಮಯ್ಯ ಅಂತಹ ನಾಯಕರರಿದ್ದರೂ ಹಿಂದುಳಿದವರನ್ನು ನಮ್ಮೊಟ್ಟಿಗೆ ಕರೆದುಕೊಂಡು ಬರುತ್ತಿಲ್ಲ ಎಂದಾದರೆ ಅದು ನಮ್ಮ ದೌರ್ಬಲ್ಯ. ಕೇವಲ ಜಾತಿಯಿಂದ ಹಿಂದುಳಿದ ನಾಯಕರಾಗಬಾರದು. ಸಮಾಜದ ನೇಯ್ಗೆಯನ್ನು ಅರ್ಥ ಮಾಡಿಕೊಳ್ಳಬೇಕು. ಶೋಷಣೆ ಎಲ್ಲಿ ಆಗುತ್ತಿದೆ ಎಂಬುದನ್ನು ಅರಿತರಬೇಕು. ಆ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯದ ಅಧ್ಯಯನ ಆಗಬೇಕಿದೆ ಎಂದರು.
ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಮಾತನಾಡಿ, ಪ್ರತಿಯೊಬ್ಬರೂ ಪಕ್ಷದಲ್ಲಿ ಜವಾಬ್ದಾರಿ ಅರಿತು ಕೆಲಸ ಮಾಡಬೇಕಿದೆ. ಬಿಜೆಪಿಯವರು ಹಿಂದುಳಿದ ವರ್ಗದ ಸಣ್ಣ ಸಣ್ಣ ಸಮಾಜದವರನ್ನು ಪಕ್ಷಕ್ಕೆ ಸೆಳೆಯುತ್ತಿದ್ದಾರೆ. ಅದೇ ರೀತಿ ರಮೇಶ್ ಶಂಕರಘಟ್ಟ ಅವರು ಇನ್ಮುಂದೆ ಮಾಡಬೇಕಿದೆ ಎಂದು ಸಲಹೆ ನೀಡಿದರು.
ರಾಜ್ಯ ಎಸ್‌ಸಿ, ಎಸ್ಟಿ, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಕೋಮುವಾದಿ ಪಕ್ಷಗಳು ಅಲ್ಪಸಂಖ್ಯಾತರು, ಹಿಂದುಳಿದ ಸಮುದಾಯವರನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡಿವೆ. ಇನ್ಮುಂದೆ ಅದಕ್ಕೆ ಕಡಿವಾಣ ಹಾಕಬೇಕಿದೆ. ಸಣ್ಣ ಸಣ್ಣ ಸಮುದಾಯಗಳಿಗೂ ಅವಕಾಶ ಬೇಕಿದೆ ಎಂದರು.
ನೂತನ ಜಿಲ್ಲಾಧ್ಯಕ್ಷ ಅಧಿಕಾರ ಸ್ವೀಕರಿಸಿ ಮಾತನಾಡಿದ ರಮೇಶ್ ಶಂಕರಘಟ್ಟ, ಎರಡು ದಿನದಲ್ಲಿ ಹಳೇ ಕಮಿಟಿಗಳನ್ನು ವಿಸರ್ಜಿಸಿ, ನೂತನ ಕಮಿಟಿಗಳನ್ನು ಆಯ್ಕೆ ಮಾಡಲಾಗುವುದು. ಹಳೇ ಕಮಿಟಿಗಳಲ್ಲಿ ಕ್ರಿಯಾಶೀಲ ಸದಸ್ಯರಿದ್ದರೆ ಅವರನ್ನು ಉಳಿಸಿಕೊಳ್ಳಲಾಗುವುದು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಂಎಲ್‌ಸಿ ಬಲ್ಕೀಶ್ ಬಾನು, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಪ್ರಮುಖರಾದ ಪುಷ್ಪಾ ಶಿವಕುಮಾರ್, ಕಲಗೋಡು ರತ್ನಾಕರ್, ಸಿ.ಎಸ್.ಚಂದ್ರಭೂಪಾಲ್, ಬಿ.ಕೆ.ಮೋಹನ್, ಎಸ್.ಕೆ.ಮರಿಯಪ್ಪ, ಎಂ.ಶ್ರೀಕಾಂತ್, ಶ್ವೇತಾ ಬಂಡಿ, ಡಾ. ಶ್ರೀನಿವಾಸ್ ಕರಿಯಣ್ಣ, ನಾಗರಾಜ್‌ಗೌಡ, ಗೋಣಿ ಮಾಲತೇಶ್, ಕಲೀಂ ಪಾಶಾ, ಜಿ.ಡಿ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.