

ಶಿಕಾರಿಪುರ: ಈ ಬಾರಿ ರೈತರಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆಗಳೆರಡೂ ಆತಂಕ ಸೃಷ್ಟಿಸಿವೆ. ಮುಂಗಾರು ಹಂಗಾಮಿನಲ್ಲಿ ಸುಮಾರು ಮೂರೂವರೆ ಸಾವಿರ ಹೆಕ್ಟೇರ್‌ಗೂ ಹೆಚ್ಚು ಮೆಕ್ಕೆಜೋಳ ಹಾಳಾಗಿತ್ತು. ಈಗ ಹಿಂಗಾರು ಕೂಡ ರೈತರನ್ನು ನಷ್ಟಕ್ಕೆ ಸಿಲುಕಿಸಿದೆ.
ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ವಾಡಿಕೆಗಿಂತ ಮೂರು ಪಟ್ಟು ಹೆಚ್ಚು ಮಳೆಯಾಗಿದೆ. ಇದರಿಂದ ಹಲವು ಕಡೆಗಳಲ್ಲಿ ಕೊಯ್ಲಿಗೆ ಬಂದ ಮೆಕ್ಕೆಜೋಳದಲ್ಲಿ ನೀರು ನಿಂತಿದೆ. ಮೇ ತಿಂಗಳಲ್ಲಿ ಬಿತ್ತನೆಯಾದಂತಹ ಮೆಕ್ಕೆಜೋಳ ಈಗ ಕೊಯ್ಲು ಸಾಧ್ಯವಾಗದೆ ಪರದಾಡುವ ಸ್ಥಿತಿ ಇದೆ.
ಕಸಬಾ ಹೋಬಳಿಯಲ್ಲಿ 22.3 ಮಿ.ಮೀ ಮಳೆಗೆ 77.1 ಮಿ.ಮೀ ಮಳೆಯಾಗಿದೆ. ಅಂಜನಾಪುರ ಹೋಬಳಿಯಲ್ಲಿ 24.8 ಮಿ.ಮೀ ಮಳೆಗೆ 74.1 ಮಿ.ಮೀ ಮಳೆಯಾಗಿದೆ. ಹೊಸೂರು ಹೋಬಳಿಯಲ್ಲಿ 24.1 ಮಿ.ಮೀ ಮಳೆಗೆ 71.4 ಮಿ.ಮೀ ಮಳೆಯಾಗಿದೆ. ಉಡುಗಣಿ ಹೋಬಳಿಯಲ್ಲಿ 24 ಮಿ.ಮೀ.ಗೆ 72.2 ಮಿ.ಮೀ ಮಳೆಯಾಗಿದೆ. ತಾಳಗುಂದ ಹೋಬಳಿಯಲ್ಲಿ 23.9 ಮಿ.ಮೀ ಮಳೆಗೆ 60 ಮಿ.ಮೀ ಮಳೆಯಾಗಿದೆ.
ಹೊಲಗಳಲ್ಲಿ ನೀರು ನಿಂತಿರುವುದರಿಂದ ಯಂತ್ರಗಳಿಂದಲೂ ಕಟಾವು ಮಾಡಲಾಗುತ್ತಿಲ್ಲ. ಮಳೆಯ ಅಬ್ಬರಕ್ಕೆ ಮೆಕ್ಕೆಜೋಳಕ್ಕೆ ಫಂಗಸ್ ಉಂಟಾಗುತ್ತದೆ. ಇದರಿಂದ ಗುಣಮಟ್ಟ ಹಾಳಾಗಿ ಸೂಕ್ತ ಬೆಲೆ ದೊರೆಯುವುದಿಲ್ಲ.
ಕಳೆದ ತಿಂಗಳು ಕಂದುಜಿಗಿ ಹುಳುಗಳ ಹಾವಳಿಯಿಂದ ಭತ್ತಕ್ಕೆ ತೊಂದರೆಯಾಗಿತ್ತು. ಈಗ ಕಳೆದ ಹತ್ತು ದಿನಗಳಿಂದ ವಾಯುಭಾರ ಕುಸಿತದಿಂದ ಮಳೆ ಸುರಿಯುತ್ತಿದ್ದು ಭತ್ತ ಈಗಿನ್ನೂ ತೆನೆ ಕಟ್ಟುತ್ತಿರುವುದರಿಂದ ಹೂಗಳು ಉದುರಿ ಇಳುವರಿ ಕಡಿಮೆಯಾಗುವುದು ನಿಶ್ಚಿತ. ಆಗಸ್ಟ್ ಮೊದಲ ಮತ್ತು ಎರಡನೇ ವಾರದಲ್ಲಿ ನಾಟಿ ಮಾಡಿದ ಭತ್ತ ಈಗಿನ್ನೂ ತೆನೆ ಕಟ್ಟಲು ಪ್ರಾರಂಭವಾದ್ದರಿಂದ ಅವುಗಳಿಗೆ ಮಳೆಯಿಂದ ತೊಂದರೆ ಆಗುವುದು ಖಚಿತ. ಇದರಿಂದ ಉತ್ತಮ ಬೆಳೆ ಬರುವುದಿಲ್ಲ. ಆದರೆ ಮಳೆಯಿಂದ ಕಂದುಜಿಗಿ ಹುಳುವಿನ ಬಾಧೆ ಕಡಿಮೆಯಾಗಿದೆ. ಮಳೆ ನಿಲ್ಲದಿದ್ದರೆ ಮೆಕ್ಕೆಜೋಳ ಮತ್ತು ಭತ್ತಕ್ಕೆ ಇನ್ನೂ ಹೆಚ್ಚಿನ ತೊಂದರೆ ಆಗುವುದು ಖಚಿತ ಎನ್ನುತ್ತಾರೆ ರೈತರು.
ಹಿಂಗಾರು ಮಳೆಯಿಂದ ಮೆಕ್ಕೆಜೋಳ ಹಾಗೂ ಭತ್ತದ ಬೆಳೆಗಳು ಹಾಳಾಗಿವೆ. ರೈತರಿಗೆ ಪರಿಹಾರ ಒದಗಿಸಲು ಆರ್‌ಐ ಮತ್ತು ವಿಎಗಳು ಸರ್ವೇ ನಡೆಸುತ್ತಿದ್ದಾರೆ. ಸಂತ್ರಸ್ತರಿಗೆ ಪರಿಹಾರ ನೀಡಲು ಮಾಹಿತಿ ಸಂಗ್ರಹ ಪ್ರಕ್ರಿಯೆ ಆರಂಭವಾಗಿದೆ. ರೈತರು ಬೆಳೆ ನಾಶದ ನಿಖರ ಮಾಹಿತಿಯನ್ನು ವಿಎ ಅವರಿಗೆ ತಲುಪಿಸಬೇಕು. ಈಗಾಗಲೇ ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ ಎಂದು ಶಿಕಾರಿಪುರ ತಹಸೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ಅವರು ವಿಜಯವಾಣಿಗೆ ಮಾಹಿತಿ ನೀಡಿದರು.