ಶಿವಮೊಗ್ಗ ಜಿಲ್ಲಾದ್ಯಂತ ತಗ್ಗಿದ ಮಳೆ, ಇಳಿಯದ ನೆರೆ

tunga river Flood
ಶಿವಮೊಗ್ಗ ಸವಾಯಿ ಪಾಳ್ಯದ ಜಾಮೀಯಾ ಮಸೀದಿಯ ಶೌಚಗೃಹ ತುಂಗಾನದಿ ಪ್ರವಾಹಕ್ಕೆ ಕೊಚ್ಚಿ ಹೋಗಿದೆ.
Published on

ಶಿವಮೊಗ್ಗ: ಜಿಲ್ಲಾದ್ಯಂತ ಶನಿವಾರ ಮಳೆ ಅಬ್ಬರ ಕೊಂಚ ಕಡಿಮೆಯಾಗಿದ್ದರೂ ಸಾಗರ, ಸೊರಬ ಮತ್ತು ಹೊಸನಗರ ಭಾಗದಲ್ಲಿ ನೆರೆ ತಗ್ಗಿಲ್ಲ. ತುಂಗಾ ನದಿ ಉಕ್ಕಿ ಹರಿಯುತ್ತಿದ್ದು ಶಿವಮೊಗ್ಗದ ಹಳೇಮಂಡ್ಲಿ, ಸವಾಯಿಪಾಳ್ಯ, ಕುರುಬರ ಪಾಳ್ಯ, ಮಂಡಕ್ಕಿಭಟ್ಟಿ, ಲಾಲ್ ಬಂದರ್ ಕೇರಿ ಸೇರಿ ಕೆಲವೆಡೆ ಪ್ರವಾಹದ ಭೀತಿ ಎದುರಾಗಿದೆ. ಶುಕ್ರವಾರ ರಾತ್ರಿ ತೀರ್ಥಹಳ್ಳಿ ತಾಲೂಕಿನ ಹಾದಿಗಲ್ಲು ಸಮೀಪ ಬಾರಿ ಗಾಳಿಗೆ ಮರ ಬಿದ್ದು ಬೈಕ್ ಸವಾರನೊಬ್ಬ ಮೃತಪಟ್ಟಿದ್ದಾನೆ.

ಕಳೆದ ಎರಡು ವಾರದಿಂದ ಎಡಬಿಡದೇ ಸುರಿದಿದ್ದು ಮಳೆ ವಾರಂತ್ಯದ ಶನಿವಾರ ಶಿವಮೊಗ್ಗ ನಗರ ಸೇರಿ ಹಲವಡೆ ಬಿಡುವು ನೀಡಿತ್ತು. ಮಳೆ ಕಡಿಮೆಯಾಗಿದ್ದರೂ ಶೀತ ಗಾಳಿ ಜೋರಾಗಿದ್ದು ಜನರನ್ನು ಹೈರಾಣಾಗಿಸಿದೆ. ಮಳೆಯಿಂದ ತೋಯ್ದು ಒದ್ದೆಯಾಗಿದ್ದ ಮನೆ ಗೋಡೆಗಳು ಕುಸಿದಿವೆ. ಶಿವಮೊಗ್ಗ ನಗರದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಅಧಿಕಾರಿಗಳೊಂದಿಗೆ ಹತ್ತಾರು ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ತುಂಗಾನದಿಗೆ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದಿಂದ ನದಿಗೆ ಹೆಚ್ಚಿಗೆ ನೀರು ಹರಿಸಲಾಗುತ್ತಿದೆ. ಹಾಗಾಗಿ ತುಂಗಾನದಿಗೆ ಜಲಾಶಯದಿಂದ 85 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದ್ದು ಹಳೇಮಂಡ್ಲಿಯಲ್ಲಿ ಶಿವಮೊಗ್ಗ-ತೀರ್ಥಹಳ್ಳಿ ರಸ್ತೆ ಮೇಲೆ ನೀರು ನಿಂತಿತ್ತು. ನ್ಯೂ ಮಂಡ್ಲಿ ಬಳಿ ತುಂಗಾ ನದಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಲಕ್ಷ್ಮೀಪುರ ಸೇರಿ ನದಿ ಅಕ್ಕಪಕ್ಕದ ಜಮೀನು, ದೇವಸ್ಥಾನ ಜಲಾವೃತವಾಗಿದೆ.
ರಸ್ತೆ ಮೇಲೆ ನೀರು ನಿಂತಿರುವುದರಿಂದ ವಾಹನಗಳು ನಿಧಾನವಾಗಿ ಸಂಚರಿಸುತ್ತಿವೆ. ಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತಿದ್ದಂತೆ ನದಿ ದಂಡೆ ಮೇಲಿನ ಮನೆಗಳು, ಕಟ್ಟಡಗಳ ನಿವಾಸಿಗಳಲ್ಲಿ ಭೀತಿ ಉಂಟಾಗಿದೆ. ಹೊಸಹಳ್ಳಿ, ಸವಾಯಿಪಾಳ್ಯ, ಮದಾರಿಪಾಳ್ಯ, ನ್ಯೂಮಂಡ್ಲಿ, ಸೀಗೆಹಟ್ಟಿ ಭಾಗದಲ್ಲಿ ನೀರು ನುಗ್ಗುವ ಭಯ ಆವರಿಸಿದೆ. ಸವಾಯಿಪಾಳ್ಯದಲ್ಲಿ ಮಸೀದಿ ಹಿಂಭಾಗದ ಶೌಚಗೃಹ ಕೊಚ್ಚಿ ಹೋಗಿದ್ದು ಮತ್ತಷ್ಟು ಮಣ್ಣು ಕುಸಿಯುವ ಆತಂಕವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net