

ಅರಕಲಗೂಡು: ಮನುಷ್ಯ ಅಸಹಾಯಕರ ನೋವಿಗೆ ಸ್ಪಂದಿಸುವ ಸದ್ಗುಣ ಬೆಳೆಸಿಕೊಳ್ಳಬೇಕು ಎಂದು ಸಂಗೀತ ವಿದ್ವಾನ್ ಆರ್.ಕೆ. ಪದ್ಮನಾಭ ಹೇಳಿದರು.
ಪಟ್ಟಣ ಹೊರ ವಲಯದ ಶಂಭುನಾಥಪುರದ ಮಧುಶ್ರೀ ವೃದ್ಧಾಶ್ರಮದಲ್ಲಿ ಇತ್ತೀಚೆಗೆ ವೃದ್ಧರಿಗೆ ವಿವಿಧ ವಸ್ತುಗಳನ್ನು ವಿತರಿಸುವ ಮೂಲಕ ತಮ್ಮ 76ನೇ ಜನ್ಮದಿನ ಆಚರಿಸಿಕೊಂಡು ಮಾತನಾಡಿದ ಅವರು, ಬದುಕು ನಶ್ವರ. ಆಸ್ತಿ, ಅಂತಸ್ತು ಗಳಿಸುವುದರಲ್ಲೇ ಕಳೆಯದೇ ಸಂಪಾದನೆಯ ಒಂದಷ್ಟು ಭಾಗವನ್ನು ಅಸಹಾಯಕರಿಗೆ ಹಂಚುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ವೃದ್ಧಾಶ್ರಮಗಳನ್ನು ಮುನ್ನಡೆಸುವುದು ಕಷ್ಟದ ಕೆಲಸ. ಆದರೆ ಬಡ ಜನತೆಯ ಸೇವೆಯೇ ದೇವರ ಸೇವೆ ಇದ್ದಂತೆ ಎಂಬುದನ್ನು ಮನಗಂಡು ಸಾವಿತ್ರಮ್ಮ, ಮಧು ಮತ್ತು ಪ್ರಕಾಶ್ ಅವರು ತಮ್ಮ ನಿಷ್ಕಲ್ಮಶವಾದ ಪ್ರೀತಿಯ ಭಾವನೆಗಳನ್ನು ಮೈಗೂಡಿಸಿಕೊಂಡು ವೃದ್ಧಾಶ್ರಮ ತೆರೆದು ಅನೇಕ ವೃದ್ಧರಿಗೆ ಪ್ರತಿದಿನ ಊಟೋಪಚಾರ, ವೈದ್ಯಕೀಯ ಸೇವೆ ನೀಡುತ್ತಾ ದೇವರನ್ನು ಕಾಣುತ್ತಿದ್ದಾರೆ ಎಂದು ಶ್ಲಾಘಿಸಿದರು.
ಯೌವನ ನಿರಂತರವಾಗಿ ಉಳಿಯುವುದಿಲ್ಲ ಎನ್ನುವ ಸತ್ಯ ಅರಿತು ವೃದ್ಧರ ಕಷ್ಟಕ್ಕೆ ಮಿಡಿಯುತ್ತಿರುವ ಜೀವಗಳಿಗೆ ದೇವರ ಆಶೀರ್ವಾದ ಸದಾ ಇರುತ್ತದೆ. ಈ ಆಶ್ರಮಕ್ಕೆ ಪ್ರತಿವರ್ಷ 10 ಸಾವಿರ ರೂ. ನಗದು ನೀಡುತ್ತೇನೆ. ಇದೀಗ ವೃದ್ಧರಿಗೆ ಬೆಚ್ಚನೆಯ ಬೆಡ್‌ಶಿಟ್ ಹೊದಿಕೆ, ಟೋಪಿ, ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಸಂಗೀತ ಹಾಗೂ ದೇವರ ಸ್ಮರಣೆ ಆಲಿಸಲು ಸ್ಪೀಕರ್ ಯಂತ್ರ, ರಾಮಾಯಣ, ಮಹಾಭಾರತ ಪುಸ್ತಗಳನ್ನು ನೀಡಿರುವೆ ಎಂದರು.
ಸಂಗೀತ ವಿದ್ವಾನ್ ಆರ್.ಕೆ.ಪಿ. ಬಳದ ರಮೇಶ್ ವಾಟಾಳ್, ಪ್ರವೀಣ್, ಗುರು, ನಾಗೇಶ್, ಯತಿರಾಜ್, ಪುನೀತ್ ಗೌಡ, ಆಟೋ ಧರ್ಮ, ವಿಜಿ, ಮಂಜು, ನರಸಿಂಹ, ನಾಗೇಂದ್ರ, ರವಿವರ್ಧನ್, ಧನಂಜಯ, ನಟರಾಜ್, ವಿನೋದ್ ಕುಮಾರ್, ಸುರೇಶ್, ಚಂದ್ರು ಇತರರು ಇದ್ದರು.