ರಾಜಿ ಸಂಧಾನವೇ ಲೋಕ ಅದಾಲತ್‌ನ ಉದ್ದೇಶ

judge
ಲೋಕ ಅದಾಲತ್ ಕುರಿತ ಜಾಗೃತಿ ಅಭಿಯಾನವನ್ನು ನ್ಯಾಯಾಧೀಶ ಎಂ.ಎಸ್.ಸಂತೋಷ್ ಉದ್ಘಾಟಿಸಿದರು. ಕೆ.ಜಯಲಕ್ಷ್ಮೀ, ಎಲ್.ಹನುಮಾನಾಯ್ಕ, ಎಸ್.ಬಿ.ವೆಂಕಟೇಶ್, ಆರ್.ಬಿ.ನಂದಿನಿ ಇತರರಿದ್ದರು.
Published on

ಶಿವಮೊಗ್ಗ: ಲೋಕ ಅದಾಲತ್ ವಿಶೇಷ ನ್ಯಾಯಾಲಯ. ಪ್ರಕರಣಗಳ ರಾಜಿ ಸಂಧಾನವೇ ನ್ಯಾಯಾಲಯದ ಮೊದಲ ಆದ್ಯತೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತದಿಂದ ಬುಧವಾರ ಏರ್ಪಡಿಸಿದ್ದ ಲೋಕ ಅದಾಲತ್ ಕುರಿತ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರ ಉಪಯುಕ್ತ ಸೇವೆಗೆ ಸಂಬಂಧಿಸಿ ಇದೊಂದು ವಿಶೇಷ ವೇದಿಕೆ ಎಂದು ತಿಳಿಸಿದರು.

ಸಾರ್ವಜನಿಕ ಉಪಯುಕ್ತ ಸೇವೆಗಳ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಸಲ್ಲಿಸಬಹುದು. ಇತರ ನ್ಯಾಯಾಲಯಗಳಂತೆ ಇಲ್ಲಿ ಶುಲ್ಕ ಕಟ್ಟುವಂತಿಲ್ಲ. ಯಾವುದೇ ಆದಾಯ ಮಿತಿ ಇರುವುದಿಲ್ಲ. ಈ ಕಾಯಂ ಲೋಕ ಅದಾಲತ್ ರಾಜ್ಯದ 6 ಜಿಲ್ಲೆಗಳಲ್ಲಿ ಕಚೇರಿ ಹೊಂದಿದೆ. ಶಿವಮೊಗ್ಗ ಜಿಲ್ಲೆಯು ಮಂಗಳೂರಿನ ವ್ಯಾಪ್ತಿಗೆ ಸೇರಿದೆ ಎಂದರು.

ಉಭಯ ಪಕ್ಷಗಾರರು ರಾಜಿ ಸಂಧಾನಕ್ಕೆ ಒಪ್ಪದೇ ಇದ್ದಾಗ ವಿವಾದವನ್ನು ವಿಚಾರಣೆಗೆ ಒಳಪಡಿಸುವ ಅಧಿಕಾರ ನ್ಯಾಯಾಲಯಕ್ಕಿದೆ. ಅರ್ಜಿದಾರರಿಗೆ ಈ ತೀರ್ಪು ಸರಿ ಹೊಂದದೆ ಇದ್ದರೆ ಸಿವಿಲ್ ಹಾಗೂ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅವಕಾಶ ಇರುವುದಿಲ್ಲ. ಆದರೆ ನೇರವಾಗಿ ರಿಟ್ ಮೂಲಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದು ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸ್ವಯಂ ಸೇವಕ ಎಸ್.ಬಿ.ವೆಂಕಟೇಶ್ ಮಾತನಾಡಿ, ಸಾರ್ವಜನಿಕರಿಗೆ ಕಾಯಂ ಲೋಕ ಅದಾಲತ್ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ, ಅದಾಲತ್‌ನಲ್ಲಿ ಸಾರ್ವಜನಿಕರು ಹಾಗೂ ಅಧಿಕಾರಿಗಳು ಪ್ರಕರಣಗಳನ್ನು ದಾಖಲಿಸಬಹುದು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ಅರ್ಜಿ ಲಭ್ಯವಿರುತ್ತದೆ ಎಂದರು.

ಜಿಪಂ ಉಪ ಕಾರ್ಯದರ್ಶಿ ಕೆ.ಜಯಲಕ್ಷ್ಮೀ, ಜಿಪಂ ಯೋಜನಾ ನಿರ್ದೇಶಕಿ ಆರ್.ಬಿ.ನಂದಿನಿ, ಜಿಪಂ ಯೋಜನಾಧಿಕಾರಿ ಎಲ್.ಹನುಮಾನಾಯ್ಕ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಕೆ.ಎಸ್.ಶ್ರೀಕಾಂತ್, ನಗರ ಪಾಲಿಕೆ ಉಪ ಆಯುಕ್ತ ವಿರುಪಾಕ್ಷಪ್ಪ ಪೂಜಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net