ಸಂಚಾರ ಸಮಸ್ಯೆಗೆ ಮುಕ್ತಿ ಕೊಡಿ ಪ್ಲೀಸ್ ಎಂದ ಸಾರ್ವಜನಿಕರು

Dayanand B
Published on

ಬೆಂಗಳೂರು: ಮಳೆಗಾಲ ಆರಂಭವಾಗಿದ್ದು, ಪ್ರಮುಖ ರಸ್ತೆ, ಜಂಕ್ಷನ್‌ಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಲುತ್ತಿದೆ. ಸಂಚಾರವೇ ದುಸ್ತರವಾಗಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಸ್ಪಂದಿಸಿತ್ತಿಲ್ಲ. ದಯವಿಟ್ಟು ತಮ್ಮ ಮೂಲಕ ಈ ಸಮಸ್ಯೆಗೆ ಮುಕ್ತಿ ಕೊಡಿಸಿ ಎಂದು ನಗರ ಪೊಲೀಸ್ ಆಯುಕ್ತರಿಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ನಗರ ಸಂಚಾರ ಪೊಲೀಸ್ ವಿಭಾಗದಿಂದ ಶನಿವಾರ ಆರ್.ಕೆ.ಹೆಗಡೆ ನಗರದಲ್ಲಿ ಆಯೋಜಿಸಿದ್ದ ಮಾಸಿಕ ಸಂಚಾರ ಸಂಪರ್ಕ ಸಭೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರಿಗೆ ನೂರಾರು ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸಿದರು.
ಮಳೆಗಾಲದಲ್ಲಿ ಬಿಬಿಎಂಪಿ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ೩-೪ ಅಡಿ ನೀರು ತುಂಬಿಕೊಂಡಿರುವ ರಸ್ತೆಗಳಲ್ಲೇ ಸಂಚಾರ ಮಾಡಬೇಕಾದ ಅನಿವಾರ್ಯತೆ ಇದೆ. ಈ ವೇಳೆ ಯಾವ ರಸ್ತೆಯಲ್ಲಿ ಎಷ್ಟು ಗುಂಡಿಗಳು, ಮ್ಯಾನ್‌ವೋಲ್‌ಗಳು ಇರುತ್ತವೆ ಎಂಬುದು ಗೊತ್ತಾಗುವುದಿಲ್ಲ. ಅನಾಹುತ ಸಂಭವಿಸಿದರೂ ನಮ್ಮ ಮೇಲೆ ನಿರ್ಲಕ್ಷ್ಯ ಚಾಲನೆ ಅಂತಾ ಕೇಸ್ ಆಗುತ್ತದೆ. ಈ ಕುರಿತು ತಾವೇ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಆಯುಕ್ತರು, ಸಭೆಯಲ್ಲಿದ್ದ ಬಿಬಿಎಂಪಿ ಅಧಿಕಾರಿಗಳಿಗೆ ಒಳಚರಂಡಿಗಳನ್ನು ಸ್ವಚ್ಚಗೊಳಿಸಿದರೆ, ಈ ಸಮಸ್ಯೆ ಪರಿಹಾರ ಸಿಗಬಹುದು. ಈ ಕುರಿತು ಗಮನ ಹರಿಸುವಂತೆ ಸೂಚಿಸಿದರು.
ಇನ್ನು ನಗರದ ಕೆಲವೆಡೆ ಕಾರ್ಯನಿರ್ವಹಿಸದ ಸಿಗ್ನಲ್ ದೀಪಗಳು, ನೋ-ಪಾರ್ಕಿಂಗ್ ಜಾಗದಲ್ಲಿ ವಾಹನಗಳ ನಿಲುಗಡೆ, ರಾತ್ರಿ ವೇಳೆ ಹೊಯ್ಸಳ ವಾಹನ ಗಸ್ತು ಹೆಚ್ಚಿಸಿ, ಟ್ರಾಫಿಕ್ ಜಾಮ್ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಅಲ್ಲದೆ, ರಸ್ತೆ ಹಂಪ್ಸ್‌ಗಳ ಅವಶ್ಯಕತೆ ಇದೆ. ಯುವಕರ ಬೈಕ್ ರೇಸ್‌ಗೆ ಕಡಿವಾಣ ಹಾಕಬೇಕು. ಸಿಗ್ನಲ್ ಲೈಟ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಫುಟ್‌ಪಾತ್ ಒತ್ತುವರಿ ಮಾಡಿಕೊಂಡು ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವ ಕಾರಣ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗಿದೆ. ಕೂಡಲೇ ತೆರವು ಮಾಡಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.
ಅದಕ್ಕೆ ಉತ್ತರಿಸಿದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್, ಹೆಣ್ಣೂರು ಸಿಗ್ನಲ್ ಬಳಿ ಸಿಗ್ನಲ್ ಲೈಟ್ ಅಳವಡಿಸಲಾಗುವುದು. ಫುಟ್‌ಪಾತ್ ಒತ್ತುವರಿ ತೆರವಿಗೆ ಬಿಬಿಎಂಪಿ ಅವರ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ಬೈರತಿ ಕ್ರಾಸ್ ನಿವಾಸಿಯೊಬ್ಬರು ಮಾತನಾಡಿ, ನಗರದಲ್ಲಿ ಎರಡು ದಶಕದ ಹಿಂದೆ ಸಮಸ್ಯೆ ಇರಲಿಲ್ಲ. ಈಗ ರಸ್ತೆ ವಿಸ್ತರಣೆ ಮಾಡಿದರೂ ವಾಹನ ದಟ್ಟಣೆ ಕಡಿಮೆ ಆಗಿಲ್ಲ. ಬೆಳಿಗ್ಗೆ ರಸ್ತೆ ದಾಟಲು ಆಗಲು ಹರಸಾಹಸ ಪಡುವಂತಾಗಿದೆ ಎಂದು ದೂರಿದರು.
ಅದಕ್ಕೆ ಉತ್ತರಿಸಿದ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ, ಎರಡು ದಶಕದಲ್ಲಿ ಬೆಂಗಳೂರು ನಗರ ವ್ಯಾಪಕವಾಗಿ ಬೆಳೆದಿದೆ. ವಾಹನ ದಟ್ಟಣೆ ಹೆಚ್ಚಾಗಿದೆ. ಭೂಮಿ ಬೆಲೆಯೂ ದುಪ್ಪಟಾಗಿದೆ. ಹೀಗಾಗಿ ಸಮಸ್ಯೆಗಳು ಹೆಚ್ಚುತ್ತಿದೆ. ಕಳ್ಳತನ ತಡೆಗೆ ರಾತ್ರಿ ವೇಳೆ ಹೊಯ್ಸಳ ವಾಹನ ಗಸ್ತು ವ್ಯವಸ್ಥೆ ಹೆಚ್ಚಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಉತ್ತರ ಸಂಚಾರ ವಿಭಾಗದ ಡಿಸಿಪಿ ಡಿ.ಆರ್. ಸಿರಿ ಗೌರಿ, ಕಾನೂನು ಮತ್ತು ವ್ಯವಸ್ಥೆ ಈಶಾನ್ಯ ವಿಭಾಗದ ಡಿಸಿಪಿ ಸಚಿತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net