ಪೊಲೀಸರಿಗೆ ಸಾರ್ವಜನಿಕರು ಸಹಕಾರ ನೀಡುವುದು ಅಗತ್ಯ

Published on

ಕೆ.ಆರ್.ನಗರ: ತಾಲೂಕಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಮತ್ತು ಮಾಧ್ಯಮದವರು ಅಗತ್ಯ ಸಹಕಾರ ನೀಡಬೇಕು ಎಂದು ಪಟ್ಟಣ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಶಿವಪ್ರಕಾಶ್ ಕೋರಿದರು.


ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಆಯೋಜಿಸಿದ್ದ ಮಾಧ್ಯಮದವರೊಂದಿಗೆ ಸಭೆಯಲ್ಲಿ ಮಾತನಾಡಿದ ಅವರು, ವಾಹನ ಸವಾರರು ಕಡ್ಡಾಯವಾಗಿ ಅಗತ್ಯ ದಾಖಲೆ ಹೊಂದುವುದರೊಂದಿಗೆ ಹೆಲ್ಮೆಟ್, ತಮಗೆ ಮತ್ತು ವಾಹನಗಳಿಗೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ತಾಲೂಕಿನಾದ್ಯಂತ ಯಾವುದೇ ಸ್ಥಳದಲ್ಲಿ ಅಕ್ರಮ ಚಟುವಟಿಕೆಗಳು ಮತ್ತು ಕಾನೂನು ಬಾಹಿರ ಕೆಲಸಗಳು ನಡೆದಾಗ ನಮಗೆ ನಾಗರಿಕರು ಮಾಹಿತಿ ನೀಡಿದರೆ ಅಂತಹವರ ಹೆಸರನ್ನು ಗೌಪ್ಯವಾಗಿಟ್ಟು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಪರಾಧ ಮತ್ತು ಅಪಘಾತ ಮುಕ್ತ ಸಮಾಜ ನಿರ್ಮಾಣ ಮಾಡಲು ನಮ್ಮೊಂದಿಗೆ ಸಹಕಾರ ನೀಡಬೇಕು. ಹಂತ ಹಂತವಾಗಿ ಪಟ್ಟಣದಲ್ಲಿ ಸಂಚಾರ ದಟ್ಟಣೆ, ಸಂಚಾರ ನಿಯಮ ಪಾಲನೆ ವಿಚಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.


ಈಗಾಗಲೇ ಇಲಾಖೆ ವತಿಯಿಂದ ಗಸ್ತು ಹೆಚ್ಚಿಸಲಾಗಿದ್ದು, ಕಳ್ಳತನ ಸೇರಿದಂತೆ ಇತರ ನಿಯಮ ಬಾಹಿರ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ನಾಗರಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳುತ್ತೇವೆ ಎಂದರಲ್ಲದೆ ಪಟ್ಟಣದಲ್ಲಿ ವಾಸಿಸುವ ನಾಗರಿಕರು ಬೇರೆ ಊರುಗಳಿಗೆ ಹೊಗುವ ಸಮಯ ಎದುರಾದಾಗ ಠಾಣೆಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು ಎಂದರು.


ಪಟ್ಟಣದ ಕೃಷ್ಣರಾಜೇಂದ್ರ ಕ್ರೀಡಾಂಗಣ, ಪುರಸಭೆ ಬಯಲು ರಂಗ ಮಂದಿರ, ಮಹಾತ್ಮಗಾಂಧಿ ಉದ್ಯಾನ ಸೇರಿದಂತೆ ಇತರೆಡೆಗಳಲ್ಲಿ ಹಗಲು ಹೊತ್ತಿನಲ್ಲೂ ಮದ್ಯ ಸೇವಿಸಿ ಪುಂಡರು ನಾಗರಿಕರಿಗೆ ತೊಂದರೆ ನೀಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿವೆ. ಇದನ್ನು ನಿಯಂತ್ರಿಸಲು ವಿಶೇಷ ಪೊಲೀಸ್ ತಂಡ ರಚನೆ ಮಾಡಿ ದಿಢೀರ್ ದಾಳಿ ನಡೆಸುವುದಾಗಿ ಮಾಹಿತಿ ನೀಡಿದರು.


ಕಾರ್ಯಕ್ರಮದಲ್ಲಿ ಉಪ ನಿರೀಕ್ಷಕ ಸ್ವಾಮಿಗೌಡ, ಎಎಸ್‌ಐಗಳಾದ ಸುಬ್ರಮಣ್ಯ, ದೇವರಾಜು, ಶ್ರೀನಿವಾಸ್, ಮುಖ್ಯ ಪೇದೆಗಳಾದ ಪರಶುರಾಂ, ನಂಜುಂಡಸ್ವಾಮಿ, ಅನಿಲ್, ಸಂಜಯ್, ಹರೀಶ್ ಮತ್ತು ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net