

ಶಿವಮೊಗ್ಗ: ಮೂಳೆಗಳು ದೇಹದ ಅವಿಭಾಜ್ಯ ಅಂಗ. ಇವು ದೇಹಕ್ಕೆ ಆಧಾರ. ಆಕಾರ, ರಕ್ಷಣೆ ನೀಡುತ್ತವೆ. ಆದರೆ ಇತ್ತೀಚೆಗೆ 40 ವರ್ಷ ಮೇಲ್ಪಟ್ಟವರಲ್ಲೂ ಮೂಳೆ ಸವೆತದ ಸಮಸ್ಯೆ ಕಾಣಿಸುತ್ತಿರುವುದು ಆತಂಕದ ಸಂಗತಿ ಎಂದು ಕೀಲು ಹಾಗೂ ಮೂಳೆ ತಜ್ಞ ವೈದ್ಯ ಕೆ.ಗಿರೀಶ್ ಹೇಳಿದರು.
ಮಿತ್ರೆ ಕಾಸ್ಮೋ ಕ್ಲಬ್ ಮಹಿಳಾ ಬಳಗದಿಂದ ಏರ್ಪಡಿಸಿದ್ದ ವೈದ್ಯರ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದ ಅವರು, ದೇಹಕ್ಕೆ ಅಗತ್ಯ ಖನಿಜಾಂಶಗಳ ಸಂಗ್ರಹಿಸುವಿಕೆ, ರಕ್ತ ಕಣಗಳ ಉತ್ಪಾದನೆ, ಪ್ರತಿ ಜೀವಿಯ ಬೆಳವಣಿಗೆ ಹಾಗೂ ದೇಹ ರಚನೆಯಲ್ಲಿ ಮೂಳೆಗಳು ಪ್ರಮುಖ ಪಾತ್ರವಹಿಸುತ್ತವೆ ಎಂದರು.
ಮೂಳೆ ಸವೆತ, ಮಂಡಿ ನೋವು 60 ವರ್ಷ ಮೇಲ್ಪಟ್ಟವರನ್ನು ಕಾಡಬೇಕು. ಈಗ ಅದಕ್ಕಿಂತ ಕಡಿಮೆ ವಯಸ್ಸಿನವರಲ್ಲೂ ಸಮಸ್ಯೆ ಕಾಣುತ್ತಿದೆ. ಮೂಳೆ ಸವೆತದಿಂದ ದೈನಂದಿನ ಚಟುವಟಿಕೆಗಳಲ್ಲಿ ಆಗುವ ಸಮಸ್ಯೆಗಳು, ಇದಕ್ಕಿರುವ ಪರಿಹಾರದ ಬಗ್ಗೆ ವಿವರಿಸಿದರು.
ಫಿಸಿಯೋಥೆರಪಿಸ್ಟ್ ಡಾ.ಉಮೇಶ್ ಮಾತನಾಡಿ, ಮೂಳೆ ರೋಗ ಸಮಸ್ಯೆಯಿಂದ ಬಳಲುತ್ತಿದ್ದೇವೆ ಎಂದು ಗೊತ್ತಾಗುವುಷ್ಟರಲ್ಲಿ ಸಮಸ್ಯೆಯ ಮೂರನೇ ಹಂತ ತಲುಪಿರುತ್ತೇವೆ. ದೇಹಕ್ಕೆ ನಿತ್ಯ ವ್ಯಾಯಾಮ, ನಡಿಗೆ ಅಗತ್ಯ. ಇಲ್ಲದಿದ್ದರೆ ನಮ್ಮ ದೇಹದ ತೂಕ ಹೆಚ್ಚುತ್ತದೆ. ಆಗ ಬೊಜ್ಜು ಉಂಟಾಗಿ ಮೂಳೆಗಳ ಸಾಮರ್ಥ್ಯ ಕುಗ್ಗುತ್ತದೆ ಎಂದು ತಿಳಿಸಿದರು.
ಡಾ. ಗಿರೀಶ್, ಡಾ. ಶೋಭಾ ಗಿರೀಶ್, ಡಾ. ಉಮೇಶ್, ಡಾ. ಹರೀಶ್ ಅವರನ್ನು ಸನ್ಮಾನಿಸಲಾಯಿತು. ಡಾ. ಎಚ್.ಕೆ.ಹರೀಶ್, ಡಾ. ಸೈಮಾ, ಕಾಸ್ಮೋ ಕ್ಲಬ್ ಮಹಿಳಾ ಬಳಗದ ಅಧ್ಯಕ್ಷೆ ಶ್ರೀರಂಜಿನಿ ದತ್ತಾತ್ರಿ ಇದ್ದರು.