ಸಿನಿಮಾದಲ್ಲಿ ಮಾದರಿ ಪಾತ್ರಗಳ ಕೊರತೆಯೇ ಸಮಸ್ಯೆ

cinema
ಕುವೆಂಪು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಏರ್ಪಡಿಸಿರುವ 15ನೇ ಸಹ್ಯಾದ್ರಿ ಚಲನಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಚ್.ಯು.ವೈದ್ಯನಾಥ್ ಅವರನ್ನು ಸನ್ಮಾನಿಸಲಾಯಿತು. ಪ್ರೊ. ಎಸ್.ಎಂ.ಗೋಪಿನಾಥ್, ಪ್ರೊ. ಎಂ.ಆರ್.ಸತ್ಯಪ್ರಕಾಶ್, ಪ್ರೊ. ಸತೀಶ್‌ಕುಮಾರ್, ಪ್ರೊ. ವರ್ಗೀಸ್ ಮುಂತಾದವರಿದ್ದರು.
Published on

ಶಿವಮೊಗ್ಗ : ಸಮಾಜಕ್ಕೆ ಮಾದರಿ ಆಗಬಲ್ಲ ಪಾತ್ರಗಳ ಕೊರತೆಯೇ ಆಧುನಿಕ ಸಿನಿಮಾಗಳ ಪ್ರಮುಖ ಸಮಸ್ಯೆಯಾಗಿದೆ ಎಂದು ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.ಎಂ.ಗೋಪಿನಾಥ್ ಅಭಿಪ್ರಾಯಪಟ್ಟರು.

ಕುವೆಂಪು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಸೆ.21ರವರೆಗೆ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿರುವ 15ನೇ ಸಹ್ಯಾದ್ರಿ ಚಲನಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಯಕನೇ ಖಳನಾಯಕ ಆಗಿರುವ, ಅತಿ ಹಿಂಸೆ, ಕೊಳ್ಳೆ ಹೊಡೆಯುವಿಕೆ ಮುಂತಾದ ಪಾತ್ರಗಳುಳ್ಳ ಸಿನಿಮಾಗಳನ್ನು ನಾವಿಂದು ಕಾಣುತ್ತಿದ್ದೇವೆ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬಹುತೇಕ ಇದೇ ಕಥಾನಕವಿರುತ್ತದೆ. ಯುವಜನರು ಇದನ್ನೇ ಸ್ಫೂರ್ತಿಯಾಗಿ ಸ್ವೀಕರಿಸಬೇಕೇ ಎಂದು ಪ್ರಶ್ನಿಸಿದರು.
ಸಿನಿಮೊಗೆ ಶಿವಮೊಗ್ಗ ಚಿತ್ರ ಸಮಾಜದ ಸಂಚಾಲಕ ಮತ್ತು ಪತ್ರಕರ್ತ ಎಚ್.ಯು.ವೈದ್ಯನಾಥ ಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿ, ಇಂದಿನ ಸಿನಿಮಾಗಳಲ್ಲಿ ನಾಯಕ, ನಾಯಕಿಯರ ವಿಜೃಂಭಣೆ ಅಧಿಕಗೊಂಡು ಕಥೆ ಗೌಣವಾಗುತ್ತಿದೆ. ಉತ್ತಮ ಬದುಕಿಗೆ ಬೇಕಾದ ಆದರ್ಶಗಳನ್ನು ಬದಿಗೆ ಸರಿಸಲಾಗುತ್ತಿದೆ. ಸಿನಿಮಾ ರಂಗವು ಉದ್ಯಮವಾದ ನಂತರ ಈ ಬಿಕ್ಕಟ್ಟುಗಳು ಹೆಚ್ಚಾಗಿದೆ. ಸಾಮಾಜಿಕ ಸಂದೇಶ, ಕಾಳಜಿಗಿಂತ, ಲಾಭದ ಉದ್ದೇಶಗಳು ಮುಖ್ಯವಾಗಿರುವುದೇ ಇದಕ್ಕೆ ಕಾರಣ ಎಂದರು.
ಸಿನಿಮಾ ಮನರಂಜನೆಯ ಸರಕು ಮಾತ್ರವಲ್ಲ. ಅದು ಸಾಮಾಜಿಕ, ಸಾಂಸ್ಕೃತಿಕ ಬದುಕನ್ನು ದಾಖಲಿಸುವ ಮಾಧ್ಯಮ ರೂಪ. ಅದನ್ನು ಕೇವಲ ಮೋಜಿಗಾಗಿ ನೋಡದೆ, ಅಧ್ಯಯನ ದೃಷ್ಟಿಯಿಂದ ಕಾಣಬೇಕು. ಮೇಲ್ನೋಟದ ಆಚರಣೆ ತೋರಿಕೆಗಿಂತ, ಪಾತ್ರಗಳ ಅನುಭಾವ, ಬದುಕಿನ ಆಳ, ತುಮುಲಗಳನ್ನು ದಾಟಿಸಿಕೊಳ್ಳುವ ಪ್ರಯತ್ನದಲ್ಲಿ ಸಿನಿಮಾ ವೀಕ್ಷಣೆ ಮಾಡಿ ಎಂದು ಸಲಹೆ ನೀಡಿದರು.
ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷ ಪ್ರೊ. ಎಂ.ಆರ್.ಸತ್ಯಪ್ರಕಾಶ್, ಅಧ್ಯಾಪಕರಾದ ಪ್ರೊ. ವರ್ಗೀಸ್, ಪ್ರೊ. ಸತೀಶ್‌ಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net