

ಬೆಂಗಳೂರು/ಹಾವೇರಿ: ಕರೊನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬಡವರ ಕಲ್ಯಾಣ ಯೋಜನೆಯಡಿ ಮಹಿಳೆಯರ ಪ್ರಧಾನಮಂತ್ರಿ ಜನಧನ್ ಖಾತೆಗೆ ಹಾಕಿರುವ 500 ರೂ. ಪಡೆಯಲು ಬೆಂಗಳೂರು ಸೇರಿ ರಾಜ್ಯಾದ್ಯಂತ ಬ್ಯಾಂಕ್-ಎಟಿಎಂಗಳ ಮುಂದೆ ಜನರು ಮುಗಿಬಿದ್ದಿದ್ದಾರೆ. ಆದಷ್ಟು ಬೇಗ ಖಾತೆಯಿಂದ ಹಣ ಪಡೆಯದಿದ್ದರೆ ನಿಮಗೆ ಅದರ ಅಗತ್ಯ ಇಲ್ಲವೆಂದು ಸರ್ಕಾರ ಮರಳಿ ಪಡೆಯುತ್ತದೆ ಎಂದು ಕಿಡಿಗೇಡಿಗಳು ಹಬ್ಬಿಸಿದ್ದ ವದಂತಿ ಕಾರಣ ಜನಜಂಗುಳಿ ಉಂಟಾಗಿತ್ತು ಎನ್ನಲಾಗಿದೆ. ಹಣ ಡ್ರಾ ಮಾಡಿಕೊಳ್ಳಲು ಕಾಲಾವಕಾಶ ಇದೆ ಎಂದು ಕೆಲವೆಡೆ ಬ್ಯಾಂಕ್ ಅಧಿಕಾರಿಗಳು, ಪೊಲೀಸರು ಹೇಳಿದರೂ ಜನಜಂಗುಳಿ ಮುಂದುವರಿದಿತ್ತು. ಬ್ಯಾಂಕ್ ಖಾತೆ ಸಂಖ್ಯೆ 0-1ರಿಂದ ಕೊನೆಗೊಳ್ಳುವವರು ಏ.3ರಂದು, 2-3ರಿಂದ ಕೊನೆಗೊಳ್ಳುವವರು ಏ.4, 4-5ರಿಂದ ಕೊನೆಗೊಳ್ಳುವವರು ಏ.7, 6-7ರಿಂದ ಕೊನೆಗೊಳ್ಳುವವರು ಏ.8, 8-9ರಿಂದ ಕೊನೆಗೊಳ್ಳುವವರು ಏ.9ರಂದು ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ ಹಣ ಪಡೆಯಬಹುದು. ಅಲ್ಲದೆ. ಏ.9ರ ನಂತರ ಯಾವುದೇ ಅವಧಿಯಲ್ಲಿ ಬ್ಯಾಂಕಿನ ಶಾಖೆಗಳಲ್ಲಿ ಹಣ ಪಡೆಯಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ. ಕೆಲವರು ಮಾಹಿತಿ ತಿಳಿಯದೆ ಬ್ಯಾಂಕಿಗೆ ಜಮಾಯಿಸುತ್ತಿದ್ದಾರೆ.