ಬದುಕಿನ ಬೆಲೆ ಬಲು ದೊಡ್ಡದು

1-67bb5f09a8b3f
Published on
ರಾಜ್ಯವನ್ನು ಅಥವಾ ರಾಷ್ಟ್ರವನ್ನು ಕಟ್ಟುವುದಕ್ಕಿಂತ ಮಾನವನ ಮನಸ್ಸನ್ನು ಕಟ್ಟುವುದು ಅತ್ಯಂತ ಕಷ್ಟದ ಕೆಲಸ. ನಂಬಿಕೆ ಮತ್ತು ವಿಶ್ವಾಸವಿಲ್ಲದ ಜನ ಸಮುದಾಯ ಹೆಚ್ಚುತ್ತಿದೆ. ತಾನೊಬ್ಬ ಚೆನ್ನಾಗಿದ್ದರೆ ಸಾಕು ಎಂಬ ಸಂಕುಚಿತ ಪ್ರವೃತ್ತಿ ಬೆಳೆಯುತ್ತಿದೆ. ಮನುಷ್ಯನಿಗೆ ಯೋಗ್ಯ ಸಂಸ್ಕಾರ ಮತ್ತು ಸದ್ವಿಚಾರಗಳನ್ನು ತುಂಬುವುದರ ಮೂಲಕ ಇದನ್ನು ನಿಯಂತ್ರಿಸಬೇಕಾಗಿದೆ.

ಅಜ್ಞಾನ ಮತ್ತು ಅಶಿಸ್ತಿನ ಕಾರಣದಿಂದಾಗಿ ಮನುಷ್ಯ ಕಷ್ಟದಲ್ಲಿ ಸಿಲುಕುತ್ತಿದ್ದಾನೆ. ಜಗತ್ತಿನಲ್ಲಿ ನಡೆಯುತ್ತಿರುವ ಕೋಲಾಹಲ, ತುಮುಲ, ದ್ವೇಷ ಮತ್ತು ಅಸೂಯೆಗಳನ್ನು ಕಂಡಾಗ ಈ ಮಾತು ಸತ್ಯವೆಂದೆನಿಸುತ್ತದೆ. ಬದುಕು ಎಷ್ಟೇ ದುಃಖ ಮತ್ತು ನಿರಾಶಾಮಯವಾಗಿದ್ದರೂ ಬದುಕಿನ ಬೆಲೆ ಬಲು ದೊಡ್ಡದು. ಸಾರ್ಥಕ ಮತ್ತು ಸಮೃದ್ಧ ಬದುಕನ್ನು ಕಟ್ಟಿಕೊಳ್ಳುವುದೇ ಎಲ್ಲರ ಗುರಿಯಾಗಬೇಕಾ ಗಿದೆ. ಸ್ವಾರ್ಥ ಜೀವನದಿಂದ ಸಮಾಜದ ವ್ಯವಸ್ಥೆ ಕೆಡುವುದು.

ತ್ಯಾಗ, ಔದಾರ್ಯಗಳಿಂದ ಮನುಷ್ಯನಿಗೆ ಉನ್ನತಿ ಪ್ರಾಪ್ತವಾಗುತ್ತದೆ. ಪ್ರತಿ ಯೊಂದು ಧರ್ಮದ ಇತಿಹಾಸವನ್ನು ಅವಲೋಕನ ಮಾಡಿದಾಗ ಅಂತಃಕಲಹ ಕಾಣುತ್ತೇವೆ. ಪರಸ್ಪರ ತಿಕ್ಕಾಟ-ಒಳಭೇದಗಳನ್ನು ಕಾಣುತ್ತೇವೆ. ಇದು ಸಮಾಜದ ಅವನತಿಗೆ ಕಾರಣವಾಗುತ್ತದೆ.ಮಾನವೀಯ ಗುಣ ಮೌಲ್ಯಗಳನ್ನು ವೀರಶೈವ ಧರ್ಮ ಹೊಂದಿದೆ. ಧರ್ಮ ಧರ್ಮಗಳಲ್ಲಿ ವಿರೋಧ ಇಲ್ಲದಿರುವುದೇ ನಿಜವಾದ ಧರ್ಮ. ಮಾನವನ ಬದುಕಿಗೆ ಆಧಾರವಾಗಿರುವ ಧರ್ಮ ಸೂತ್ರಗಳನ್ನು ಪರಿಪಾಲಿಸಿಕೊಂಡು ಒಳಿತಿನತ್ತ ಕರೆದೊಯ್ಯುವುದೇ ನಿಜವಾದ ಧರ್ಮ.

ವೈಚಾರಿಕತೆ ಮತ್ತು ಸುಧಾ ರಣೆಯ ಹೆಸರಿನಲ್ಲಿ ಧರ್ಮ, ಸಂಸ್ಕೃತಿಯನ್ನು ಕಲುಷಿತಗೊಳಿಸುತ್ತಿರುವ ಜನರ ಸಂಖ್ಯೆ ಇಂದು ಅಧಿಕವಾಗಿದೆ. ನಂಬಿಕೆ ವಿಶ್ವಾಸದ ಮೇಲೆ ಸಂಬಂಧಗಳು ನಿಂತುಕೊಂಡಿವೆ. ನಂಬಿಕೆ ಕಳೆದುಕೊಂಡವರಿಗೆ ದೇವರು ಧರ್ಮ ಕಣ್ಣಿಗೆ ಕಾಣದು. ವಿಶಾಲ ತತ್ವ ತಳಹದಿಯ ಮೇಲೆ ವೀರಶೈವ ಧರ್ಮವನ್ನು ಸ್ಥಾಪಿಸಿ ತನ್ಮೂಲಕ ಮಾನವ ಕುಲಕೋಟಿಯ ಉದ್ಧಾರಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಶ್ರಮಿಸಿದ್ದನ್ನು ಅರಿಯಬೇಕಾಗುತ್ತದೆ. ಅಸಂಯಮ, ಅಸಹನೆ, ಅತಿರೇಕ ಅಲ್ಲದೇ ನೀತಿ, ಸಾತ್ವಿಕತೆ, ಸಹಾನುಭೂತಿಯ ಕೊರತೆಯನ್ನು ಕಾಣುತ್ತೇವೆ. ಇದನ್ನು ದೂರ ಮಾಡಲು ಏನು ಮಾಡಬೇಕೆಂಬುದು ಯಾರಿಗೂ ತಿಳಿಯದ ಮತ್ತು ಬಿಡಿಸಲಾಗದ ಕಗ್ಗಂಟಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net