ಸ್ಥಳ ಮಹಜರು ನಡೆಸುತ್ತಿರುವ ಸಿಸಿಬಿ

CCB
Published on

ಬೆಂಗಳೂರು: ಬಿಜೆಪಿ ಟಿಕೆಟ್ ಕೊಡಿಸುವ ನೆಪದಲ್ಲಿ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ೫ ಕೋಟಿ ರೂ.ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಮತ್ತೊಬ್ಬ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದೆ.
ಉಡುಪಿ ಜಿಲ್ಲೆಯ ಪ್ರಸಾದ್ ಬೈಂದೂರನ್ನು ವಶಕ್ಕೆ ಪಡೆದು ರಿಕವರಿ ಪ್ರಕ್ರಿಯೆಗೆ ಮುಂದಾಗಿದೆ. ಈತನನ್ನು ಎರಡು ದಿನದ ಹಿಂದೆ ವಿಚಾರಣೆ ನಡೆಸಿ ಕಳುಹಿಸಿದ್ದ ಸಿಸಿಬಿ ಆತನನ್ನು ಮತ್ತೆ ವಶಕ್ಕೆ ಪಡೆದಿದೆ. ಸಿಸಿಬಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಮತ್ತೊಂದೆಡೆ ಚೈತ್ರ ಕುಂದಾಪುರ ಮತ್ತು ಪ್ರಸಾದ್ ಬೈಂದೂರು ಹಣದ ಡೀಲ್ ಬಗ್ಗೆ ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು, ಅದರಲ್ಲಿ ಮಾಜಿ ಸಚಿವರೊಬ್ಬರ ಹೆಸರು ಪ್ರಸ್ತಾಪವಾಗಿದೆ.

ಮೂರು ಕಡೆ ಸ್ಥಳ ಮಹಜರು:
ಮಂಗಮ್ಮನಪಾಳ್ಯದಲ್ಲಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿ ಕಚೇರಿ, ಗೋವಿಂದರಾಜನಗರದಲ್ಲಿರುವ ಅಭಿನವ ಹಾಲಶ್ರೀ ನಿವಾಸ, ಕೆ.ಕೆ ಗೆಸ್ಟ್ ಹೌಸ್‌ನ ಎಡರನೇ ಮಹಡಿಯಲ್ಲಿರುವ ೨೦೭ ಸಂಖ್ಯೆ ರೂಮ್ ಅನ್ನು ಸಿಸಿಬಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.
ಉದ್ಯಮಿ ಗೋವಿಂದ ಬಾಬು ಪೂಜಾರಿ ಕಚೇರಿಯಲ್ಲಿ ಟಿಕೆಟ್ ಕೊಡಿಸುವ ಸಂಬಂಧ ಮೀಟಿಂಗ್ ನಡೆದಿದ್ದು, ಅಲ್ಲದೇ ಆರೋಪಿ ಗಗನ್ ಅಲ್ಲಿಂದಲೇ ಹಣ ತೆಗೆದುಕೊಂಡು ಹೋಗಿದ್ದ. ಹೀಗಾಗಿ ಅಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಗೋವಿಂದರಾಜನಗರ ನಿವಾಸದಲ್ಲಿ ಅಭಿನವ ಹಾಲಶ್ರೀ ಒಂದೂವರೆ ಕೋಟಿ ರೂ.ಪಡೆದಿದ್ದರು ಎನ್ನಲಾಗಿದೆ. ಜತೆಗೆ ಕೆ.ಕೆ.ಗೆಸ್ಟ್ ಹೌಸ್‌ನಲ್ಲಿ ಹಲವು ಬಾರಿ ಮೀಟಿಂಗ್ ನಡೆದಿತ್ತು. ಇನ್ನು ಕಬಾಬ್ ವ್ಯಾಪಾರಿ ಚನ್ನಾನಾಯ್ಕಾ ಚುನಾವಣ ಸಮಿತಿ ಸದಸ್ಯ ಎಂದು ಭೇಟಿಯಾಗಿದ್ದು ಇಲ್ಲಿಯೇ ಹೀಗಾಗಿ ಮೂರು ಕಡೆಗಳಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಹಾಲಶ್ರೀ ನಿವಾಸ ಮತ್ತು ಮಠ ಸೇರಿ ಹಲವು ಕಡೆ ಮಹಜರು ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸ್ಕ್ರಿಪ್ಟ್‌ಗೆ ತಕ್ಕಂತೆ ಲೊಕೇಶನ್:
ಇನ್ನು ಆರೋಪಿಗಳು ಕೃತ್ಯಕ್ಕೆ ಆಗಾಗ ಸ್ಥಳಗಳನ್ನು ಬದಲಾಯಿಸುತ್ತಿದ್ದರು. ತಮ್ಮ ಸ್ಕ್ರಿಪ್ಟ್‌ಗೆ ತಕ್ಕಂತೆ ಲೊಕೇಶನ್‌ಗಳನ್ನು ವಂಚಕರು ಹುಡುಕುತ್ತಿದ್ದರು. ಹೀಗಾಗಿ ಸಿಸಿಬಿ ಪೊಲೀಸರು ಕೃತ್ಯ ನಡೆದ ಸ್ಥಳಗಳ ಮಹಜರು ಮಾಡಲು ಮುಂದಾಗಿದ್ದಾರೆ.

ಚೈತ್ರ ಕುಂದಾಪುರ ಡಿಸ್ಚಾರ್ಜ್:
ಚೈತ್ರಾ ಕುಂದಾಪುರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಆರೋಗ್ಯ ಸುಸ್ಥಿತಿಯಲ್ಲಿದೆ. ಎಂಆರ್‌ಐ ಮತ್ತು ಇಸಿಜಿ ವರದಿ ನಾರ್ಮಲ್ ಆಗಿದ್ದು, ಆಸ್ಪತ್ರೆಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಡಿಸ್ಚಾರ್ಜ್ ಮಾಡಲಾಗುವುದು ಎಂದು ಬಿಎಂಆರ್‌ಸಿಎಲ್‌ನ ಡೀನ್ ಮತ್ತು ನಿರ್ದೇಶಕ ಡಾ.ರಮೇಶ್ ಕೃಷ್ಣ ತಿಳಿಸಿದ್ದಾರೆ. ಸಿಸಿಬಿ ಪೊಲಿಸರ ವಶದಲ್ಲಿದ್ದ ಚೈತ್ರಾ ಕುಂದಾಪುರ ಶುಕ್ರವಾರ ಬೆಳಗ್ಗೆ ಕುಸಿದು ಬಿದ್ದಿದ್ದು, ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವಿಶೇಷ ತಂಡದಿಂದ ತನಿಖೆ:
ಬಂಧಿನಕ್ಕೊಳಗಾಗಿರುವ ಆರೋಪಿ ಚೈತ್ರಾ ಕುಂದಾಪುರ ಆರೋಪದ ಹಿನ್ನೆಲೆಯಲ್ಲಿ ಬಿಬಿಎಂಪಿ ಇಂದಿರಾ ಕ್ಯಾಂಟಿನ್ ಬಾಕಿ ಬಿಲ್ ಬಗ್ಗೆ ಸಿಸಿಬಿ ವಿಶೇಷ ತಂಡ ತನಿಖೆ ಕೈಗೊಂಡಿದೆ.
ಸಿಸಿಬಿ ಕಚೇರಿಗೆ ವಿಚಾರಣೆಗೆ ಆಗಮಿಸಿದ ಸಂದರ್ಭದಲ್ಲಿ ಇಂದಿರಾ ಕ್ಯಾಂಟಿನ್ ಬಾಕಿ ಬಿಲ್ ಬಗ್ಗೆ ಚೈತ್ರಾ ಆರೋಪ ಮಾಡಿದ್ದರು. ಈ ಸಂಬಂಧ ಸಿಸಿಬಿ ಪೊಲೀಸರು ವಿಚಾರಣೆ ಚುರುಕುಗೊಳಿಸಿದ್ದಾರೆ.
ಬಾಕಿ ಬಿಲ್ ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಶೇಷ ತಂಡ ರಚಿಸಿದ್ದು, ಮಾಹಿತಿ ಕಲೆ ಹಾಕಲು ಮುಂದಾದ ತಂಡ ಪಾಲಿಕೆಯ ಹಿರಿಯ ಅಧಿಕಾರಿಗಳ ಬಳಿ ಮಾಹಿತಿ ಸಂಗ್ರಹಿಸಿದೆ. ಜತೆಗೆ ಇಂದಿರಾ ಕ್ಯಾಂಟಿನ್ ಬಿಲ್ ಬಿಡುಗಡೆ ಮಾಡುವ ಅಧಿಕಾರಿಗಳ ಕಾಲ್ ಡೀಟೈಲ್ಸ್ ಕೂಡ ಕಲೆ ಹಾಕಿದ್ದಾರೆ.
ಗೋವಿಂದ ಪೂಜಾರಿಗೆ ಸೇರಿದ ಕ್ಯಾಂಟಿನ್ ವ್ಯವಹಾರಗಳ ಬಗ್ಗೆ ಪೂರ್ಣ ಮಾಹಿತಿ ನೀಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಗೋವಿಂದ ಪೂಜಾರಿ ಎಷ್ಟು ವರ್ಷಗಳಿಂದ ಕ್ಯಾಂಟಿನ್‌ಗಳಿಗೆ ಊಟ ಸರಬರಾಜು ಮಾಡುತ್ತಿದ್ದಾರೆ. ಇದುವರೆಗೂ ಇವರಿಗೆ ಎಷ್ಟು ಹಣ ಬಿಡುಗಡೆ ಮಾಡಿದ್ದೀರಿ? ಕಳೆದ ಎರಡು ವರ್ಷಗಳಿಂದ ಎಷ್ಟು ಹಣ ಬಾಕಿ ನೀಡಬೇಕಿತ್ತು. ಮೂರು ತಿಂಗಳಲ್ಲಿ ಎಷ್ಟು ಹಣ ಬಿಡುಗಡೆ ಮಾಡಿದ್ದೀರಿ? ಎಂಬುದು ಸೇರಿ ಕ್ಯಾಂಟಿನ್‌ಗೆ ಸಂಬಂಧಿಸಿದಂತೆ ಹಲವಾರು ವಿಷಯಗಳ ಬಗ್ಗೆ ಸಿಸಿಬಿ ಅಧಿಕಾರಿಗಳು ಬಿಬಿಎಂಪಿ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದಿದ್ದಾರೆ.

ಬ್ಯಾಂಕ್‌ನಲ್ಲಿ ಹಣ, ಚಿನ್ನ ಇಟ್ಟಿದ್ದ ಚೈತ್ರಾ:
ಸಿಸಿಬಿ ಪೊಲೀಸರು ಚೈತ್ರಾಗೆ ಸೇರಿದ ಕೋಟ್ಯಂತರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸರ್ಚ್ ವಾರೆಂಟ್ ಪಡೆದು ಶೋಧನೆ ನಡೆಸಿದ ಸಿಸಿಬಿ ಪೊಲೀಸರು ಉಡುಪಿಯ ಉಪ್ಪೂರು ಶ್ರೀರಾಮ ಸೊಸೈಟಿಯ ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದ ಆಸ್ತಿ ಪತ್ರ, ಬಂಗಾರ ಪತ್ತೆ ಮಾಡಿದೆ. ೧.೮ ಕೋಟಿ ರೂ ಎ್.ಡಿ ಹಣ, ೪೦ ಲಕ್ಷ ರೂ. ನಗದು, ಸುಮಾರು ೬೫ ಲಕ್ಷ ರೂ. ಮೌಲ್ಯದ ೪೦೦ ಗ್ರಾಂ ಚಿನ್ನ ಕೂಡ ಪತ್ತೆ ಮಾಡಿದೆ. ಚೈತ್ರ ತನ್ನ ಸ್ನೇಹಿತ ಶ್ರೀಕಾಂತ್ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಹಣ, ಚಿನ್ನ ಇಟ್ಟಿದ್ದರು. ಚೈತ್ರ ಕೋಟಿ ಲೂಟಿ ಹೊಡೆದು ಗೆಳೆಯ ಶ್ರೀಕಾಂತ್ ಹೆಸರಲ್ಲಿ ಉಡುಪಿಯ ಹಿರಿಯಡ್ಕದ ಎರಡು ಹಂತಸ್ತಿನ ಮನೆ ಕಟ್ಟಿಸುತ್ತಿದ್ದರು. ಆತನನ್ನು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಕಾಮಗಾರಿ ಅರ್ಧದಲ್ಲಿಯೇ ನಿಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net