

ನವದೆಹಲಿ: ಮಹಾಮಾರಿ ಕರೊನಾ ವೈರಸ್ನ ಮೂರನೇ ಅಲೆಗೆ ಅಮೆರಿಕ ತತ್ತರಿಸಿದ್ದು, ಈ ಹಿಂದಿಗಿಂತಲೂ ಅಧಿಕ ಪ್ರಮಾಣದಲ್ಲಿ ಸೋಂಕು ಹಾಗೂ ಸಾವಿನ ಪ್ರಕರಣಗಳು ವರದಿಯಾಗುತ್ತಿವೆ. ಈ ಮಧ್ಯೆ, ಅಮೆರಿಕ ತುರ್ತು ಬಳಕೆಗೆ ಅನುಮೋದನೆ ನೀಡಿರುವ ಫೈಜರ್ ಲಸಿಕೆಯ ಡೋಸ್ಗಳು ಸೋಮವಾರದ ವೇಳೆಗೆ ಎಲ್ಲ ಆಸ್ಪತ್ರೆಗಳಲ್ಲಿ ಲಭ್ಯವಿರಲಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅಧ್ಯಕ್ಷೀಯ ಚುನಾವಣೆ ಬಳಿಕ ಸ್ಪೋಟಗೊಂಡಿರುವ ಕರೊನಾ ಸೋಂಕು ಈ ಬಾರಿ ಅಮೆರಿಕದ ಎಲ್ಲ ರಾಜ್ಯಗಳಲ್ಲೂ ತಾಂಡವವಾಡುತ್ತಿದೆ. ಕಳೆದ ವಾರ ಒಂದೇ ದಿನ 3 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದ ದಾಖಲೆಯಾಗಿದೆ. ಸದ್ಯ ಪ್ರತಿದಿನ ಸರಾಸರಿ 2,500 ಜನರು ಕರೊನಾಗೆ ಬಲಿಯಾಗುತ್ತಿದ್ದು, ನಿತ್ಯ 2 ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಜಾಗತಿಕವಾಗಿ ಪ್ರತಿದಿನ ಸುಮಾರು 6 ಲಕ್ಷ ಪ್ರಕರಣಗಳು ವರದಿಯಾಗುತ್ತಿದ್ದು, ಇದರಲ್ಲಿ ಅಮೆರಿಕದ ಪಾಲು ಶೇಕಡ 30ಕ್ಕಿಂತ ಹೆಚ್ಚಿದೆ. ಶನಿವಾರ ಹೊಸದಾಗಿ 2.20 ಲಕ್ಷ ಕೇಸ್ಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1.65 ಕೋಟಿಗೆ ಏರಿಕೆಯಾಗಿದೆ. ಹೊಸದಾಗಿ 2,309 ಮಂದಿ ಸಾವನ್ನಪು್ಪವ ಮೂಲಕ ಮೃತರ ಸಂಖ್ಯೆ 3.05 ಲಕ್ಷಕ್ಕೆ ಏರಿಕೆಯಾಗಿದೆ. ಈವರೆಗೆ 96 ಲಕ್ಷ ಸೋಂಕಿತರು ಗುಣಮುಖರಾಗಿದ್ದು, ಇನ್ನೂ 65 ಲಕ್ಷ ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 27 ಸಾವಿರ ರೋಗಿಗಳ ಸ್ಥಿತಿ ಚಿಂತಾಜನಕವಾಗಿದೆ. ಜಾಗತಿಕ ಪ್ರಕರಣಗಳ ಸಂಖ್ಯೆ 7.22 ಕೋಟಿಗೂ ಅಧಿಕವಾಗಿದ್ದು, ಈವರೆಗೆ 16.13 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. 5.06 ಕೋಟಿ ಸೋಂಕಿತರು ಗುಣಮುಖರಾಗಿದ್ದು, ಇನ್ನೂ 1.99 ಕೋಟಿ ಸಕ್ರಿಯ ಪ್ರಕರಣಗಳಿವೆ.
ಜನವರಿಯಿಂದ ವ್ಯಾಕ್ಸಿನೇಷನ್ ಪ್ರಕ್ರಿಯೆ ಶುರು
ಡಿಸೆಂಬರ್ ಅಂತ್ಯದೊಳಗೆ ಕೇಂದ್ರ ಸರ್ಕಾರ ತಮ್ಮ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವ ಸಾಧ್ಯತೆ ಇದ್ದು, ವ್ಯಾಕ್ಸಿನೇಷನ್ ಪ್ರಕ್ರಿಯೆ ಮುಂದಿನ ವರ್ಷ ಜನವರಿಯಲ್ಲಿ ಪ್ರಾರಂಭವಾಗಬಹುದು ಎಂದು ಪುಣೆಯ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್ಐಐ) ಸಿಇಒ ಆದಾರ್ ಪೂನಾವಾಲಾ 2021ರ ಅಕ್ಟೋಬರ್ ವೇಳೆಗೆ ಮೊದಲ ಆದ್ಯತೆಯ ಎಲ್ಲರಿಗೂ ಲಸಿಕೆ ನೀಡುವ ಪ್ರಕ್ರಿಯೆ ಪೂರ್ಣಗೊಳ್ಳಬಹುದು. ಬಳಿಕ ಮೊದಲಿನಲಂತೆ ಜನಜೀವನ ಪ್ರಾರಂಭವಾಗಬಹುದು ಎಂದು ಪೂನಾವಾಲಾ ಹೇಳಿದ್ದಾರೆ.
ಔಷಧ ಸರಬರಾಜು
ಫೈಜರ್ ಮತ್ತು ಬಯೋಎನ್ಟೆಕ್ ಅಭಿವೃದ್ಧಿಪಡಿಸಿರುವ ಕರೊನಾ ಲಸಿಕೆಯ ತುರ್ತು ಬಳಕೆಗೆ ಅಮೆರಿಕದ ಔಷಧ ನಿಯಂತ್ರಕ ಸಂಸ್ಥೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ಲಸಿಕೆ ಸರಬರಾಜು ಪ್ರಾರಂಭಿಸಲಾಗಿದೆ. ಕಲ್ಮಾಜೂನಲ್ಲಿನ ಫೈಜರ್ ಘಟಕದಿಂದ ಕೋಲ್ಡ್ ಸ್ಟೋರೇಜ್ ಬಾಕ್ಸ್ಗಳ ಮೂಲಕ ಲಸಿಕೆಗಳನ್ನು ಸರಬರಾಜು ಮಾಡಲಾಗುತ್ತಿದೆ.
ಶೇ.3.62ಕ್ಕೆ ಕುಸಿದ ಕೇಸ್ ಭಾರತದಲ್ಲಿ ಸಕ್ರಿಯ ಪ್ರಕರಣಗಳು ಶೇಕಡ 3.62ಕ್ಕೆ ಕುಸಿತ ಕಂಡಿವೆ. ಶನಿವಾರ 30,354 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 98.57 ಲಕ್ಷಕ್ಕೇರಿದೆ. ಹೊಸದಾಗಿ 390 ಮಂದಿ ಸೋಂಕಿಗೆ ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 1.43 ಲಕ್ಷಕ್ಕೆ ಏರಿಕೆಯಾಗಿದೆ. ಈವರೆಗೆ 93.56 ಲಕ್ಷ ಮಂದಿ ಗುಣಮುಖರಾಗಿದ್ದು, ಇನ್ನೂ 3.54 ಲಕ್ಷ ಸಕ್ರಿಯ ಪ್ರಕರಣಗಳಿವೆ.