ಚೀನಾ-ಪಾಕ್ ಕಾರಿಡಾರ್ ವಿರುದ್ಧ ಸಿಡಿದೆದ್ದ ಜನ: ಗ್ವಾದಾರ್​ನಲ್ಲಿ ಜನಜೀವನಕ್ಕೆ ಹಲವು ನಿರ್ಬಂಧ, ವಾರದಿಂದ ನಡೆಯುತ್ತಿದೆ ಪ್ರತಿಭಟನೆ

Nation
Published on

ಕರಾಚಿ: ಚೀನಾದ ಮಹತ್ವಾಕಾಂಕ್ಷೆಯ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ವಿರುದ್ಧ ಗ್ವಾದಾರ್​ನಲ್ಲಿ ತೀವ್ರ ಜನವಿರೋಧ ವ್ಯಕ್ತವಾಗಿದೆ. ಕಾರಿಡಾರ್ ವ್ಯಾಪ್ತಿಯಲ್ಲಿ ಅತೀವ ನಿರ್ಬಂಧಗಳು ಇರುವ ಕಾರಣ ಜನಜೀವನಕ್ಕೆ ಬಹಳಷ್ಟು ತೊಂದರೆಗಳಾಗುತ್ತಿವೆ. ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದ್ದು, ಕಳೆದ ಒಂದು ವಾರದಿಂದ ಇಲ್ಲಿ ಜನ ಪಕ್ಷಬೇಧ ಮರೆತು ಪ್ರತಿಭಟನೆ ನಡೆಸುತ್ತಿದ್ದಾರೆ.

ಬಹುಕೋಟಿ ಡಾಲರ್ ಮೌಲ್ಯದ ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್(ಸಿಪಿಇಸಿ) ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿರುವ ಗ್ವಾದಾರ್ ಬಂದರಿನ ಜತೆಗೆ ಚೀನಾದ ಕ್ಸಿನ್ ಜಿಯಾಂಗ್ ಪ್ರಾಂತ್ಯವನ್ನು ಜೋಡಿಸುತ್ತದೆ. ಗ್ವಾದಾರ್ ಬಲೂಚಿಸ್ತಾನದ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಇಲ್ಲಿ ನಿರ್ಬಂಧ ಹೇರಿರುವ ಕಾರಣ ಜನಜೀವನಕ್ಕೆ ತೊಂದರೆಯಾಗಿದೆ. ರಾಜಕೀಯ ಕಾರ್ಯಕರ್ತರು ಮತ್ತು ನಾಗರಿಕ ಹಕ್ಕುಗಳ ಚಳವಳಿಗಾರರ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳ ಹಕ್ಕುಗಳಿಗಾಗಿ ಪ್ರತಿಭಟನೆ ಶುರುವಾಗಿದೆ.

‘ನಮ್ಮ ಹಕ್ಕು ನಮಗೆ ಕೊಡಿ’: ಗ್ವಾದಾರ್​ಗೆ ಹಕ್ಕುಗಳನ್ನು ನೀಡಿ(ಗಿವ್ ರೈಟ್ಸ್ ಟು ಗ್ವಾದಾರ್) ಎಂಬ ಘೊಷ ವಾಕ್ಯದೊಂದಿಗೆ ಪ್ರತಿಭಟನೆ ನಡೆಯುತ್ತಿದೆ. ಈ ರ್ಯಾಲಿಯ ನೇತೃತ್ವ ವಹಿಸಿರುವ ಮೌಲಾನಾ ಹಿದಾಯತ್ ಉರ್ ರೆಹಮಾನ್, ಸರ್ಕಾರ ಸ್ಥಳೀಯ ನಿವಾಸಿಗಳ ಸಮಸ್ಯೆಗಳನ್ನು ಪರಿಹರಿಸುವಲ್ಲಿ, ಮೂಲಭೂತ ಅಗತ್ಯಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ನಾವು ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

ಮೀನುಗಾರಿಕೆ ಮುಖ್ಯಕಾರಣ: ಮಕ್ರಾನ್ ಕರಾವಳಿಯಲ್ಲಿ ಚೀನಾದ ಬೃಹತ್ ಮೀನುಗಾರಿಕೆ ಟ್ರಾಲರ್​ಗಳಿಗೆ ಅವಕಾಶವನ್ನು ಪಾಕ್ ಸರ್ಕಾರ ನೀಡಿದೆ. ಇಮ್ರಾನ್ ಖಾನ್ ಸರ್ಕಾರದ ಈ ಕ್ರಮವು ಸ್ಥಳೀಯ ಮೀನುಗಾರರ ಹೊಟ್ಟೆಪಾಡಿಗೆ ಸಂಚಕಾರ ತಂದಿದೆ. ಸ್ಥಳೀಯ ಮೀನುಗಾರರ ಪುಟ್ಟ ದೋಣಿಗಳು ಚೀನಾದ ಈ ದೊಡ್ಡ ಟ್ರಾಲರ್​ಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದಾರೆ.

ಮಣ್ಣಿನ ಮಕ್ಕಳಲ್ಲ ಪರದೇಶಿಗಳು: ಗ್ವಾದರ್ ಡೀಪ್ ಸೀ ಪೋರ್ಟ್ ನಿರ್ವಣವಾಗಿದ್ದರೂ ನಗರದ ಜನರು ಈಗಲೂ ಉದ್ಯೋಗವಿಲ್ಲದೆ ಕಷ್ಟಪಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಏನೂ ಮಾಡಿಲ್ಲ. ಇದೂ ಸಾಲದೆಂಬಂತೆ, ಸಿಪಿಇಸಿ ಹೆಸರಲ್ಲಿ ಈ ಪ್ರದೇಶಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಹಲವು ಚೆಕ್​ಪಾಯಿಂಟ್ ಸ್ಥಾಪಿಸಿದ್ದು, ಪ್ರತಿಯೊಂದರಲ್ಲೂ ತಪಾಸಣೆಗಳಿಗೆ ಒಳಗಾಗಬೇಕಾದ ಅನಿವಾರ್ಯತೆ ಗ್ವಾದಾರ್ ವಾಸಿಗಳಿಗೆ ಎದುರಾಗಿದೆ. ಇದು ಅವರ ಆಕ್ರೋಶಕ್ಕೆ ಕಾರಣ.

ಪ್ರಮುಖ ಬೇಡಿಕೆಗಳು

  1. ಗ್ವಾದಾರ್ ನಗರದಲ್ಲಿರುವ ಅನಗತ್ಯ ಸೆಕ್ಯುರಿಟಿ ಚೆಕ್ ಪೋಸ್ಟ್​ಗಳನ್ನು ತೆಗೆಯಬೇಕು.
  2. ನಿವಾಸಿಗಳಿಗೆ ನೀರು ಮತ್ತು ವಿದ್ಯುತ್ ಪೂರೈಕೆ ಮಾಡಬೇಕು.
  3. ಮಕ್ರಾನ್ ಕರಾವಳಿಯಿಂದ ದೊಡ್ಡ ಮೀನುಗಾರಿಕೆ ಟ್ರಾಲರ್​ಗಳನ್ನು ತೆರವುಗೊಳಿಸಬೇಕು.
  4. ಪಂಗೂರ್ ಮತ್ತು ಗ್ವಾದಾರ್ ನಡುವಿನ ಇರಾನ್ ಗಡಿಯನ್ನು ತೆರೆಯಬೇಕು.

ಚೀನಾ ವ್ಯಾಪಾರಕ್ಕೆ ಸರ್ಕಾರದ ಬೆಂಬಲ

ಚೀನಾ ಮಾಡುವ ಎಲ್ಲ ವ್ಯವಹಾರಗಳಿಗೆ, ವ್ಯಾಪಾರಗಳಿಗೆ ಪಾಕ್ ಸರ್ಕಾರ ಆದ್ಯತೆಯ ಮೇರೆಗೆ ಬೆಂಬಲ ನೀಡುತ್ತದೆ ಎಂದು ಪ್ರಧಾನಿ ಇಮ್ರಾನ್ ಖಾನ್ ಘೋಷಿಸಿದ್ದಾರೆ. ಚೀನಾದ ಹೂಡಿಕೆದಾರರು ರಸ್ತೆ ಸಂಪರ್ಕ ಮತ್ತು ಅಗತ್ಯವಸ್ತುಗಳ ಲಭ್ಯತೆಯ ವಿಚಾರವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕೆಂದು ಸರ್ಕಾರಿ ಸಂಸ್ಥೆಗಳಿಗೆ ಮತ್ತು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ವಿಶೇಷ ಆರ್ಥಿಕ ವಲಯಗಳಲ್ಲಿ ಚೀನಾ ತನ್ನ ಹೂಡಿಕೆಯನ್ನು ಹೆಚ್ಚಿಸುವುದಕ್ಕೆ ತೋರುತ್ತಿರುವ ಆಸಕ್ತಿಗೆ ಧನ್ಯವಾದ ಅರ್ಪಿಸಿದ್ದಾರೆ. ನ.20ರಂದು ಚ್ಯಾಲೆಂಜ್ ಫ್ಯಾಷನ್ ಕಂಪನಿಯ ಚೆನ್ ಯಾನ್ ನೇತೃತ್ವದ ವಾಣಿಜ್ಯೋದ್ಯಮಿಗಳ ನಿಯೋಗವು ಖಾನ್ ಅವರನ್ನು ಭೇಟಿಯಾದ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ.

ಚೀನಾ ಪರ ನಿಲುವಿಗೆ ಸಮಜಾಯಿಷಿ: ಚೀನಾದ ವಾಣಿಜ್ಯೋದ್ಯಮಿ ಗಳು ಗ್ಲಾಸ್, ಸಿರಾಮಿಕ್ಸ್ ಮತ್ತು ಐಟಿ ಕ್ಷೇತ್ರಗಳಲ್ಲಿ ಕಾರ್ಯಾಚರಣೆ ಆರಂಭಿಸಲು ಸಿದ್ಧರಿದ್ದಾರೆ ಎನ್ನ ್ಢಾಗಿದೆ. ಉದಾಹರಣೆಗೆ ಒಪ್ಪೊ ಮೊಬೈಲ್ ಕಂಪೆನಿಯು ಪಾಕಿಸ್ತಾನದಲ್ಲಿ ಉತ್ಪಾದನಾ ಘಟಕ ಮತ್ತು ಆರ್ ಆಂಡ್ ಡಿ ಕೇಂದ್ರವನ್ನು ತೆರೆಯಲು ಇಚ್ಛಿಸುತ್ತಿದೆ. ಇದರಿಂದ ಸ್ಮಾರ್ಟ್​ಫೋನ್​ಗಳ ಮೇಲೆ ಖರ್ಚಾಗುತ್ತಿರುವ ವಿದೇಶೀ ವಿನಿಮಯವನ್ನು ಉಳಿಸುವುದರೊಂದಿಗೆ ಟೆಕ್ ಪದವೀಧರರಿಗೆ ಉದ್ಯೋಗಾವಕಾಶವಾಗುತ್ತದೆ ಎಂಬುದು ಸರ್ಕಾರದ ಸಮಜಾಯಿಷಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net