

ಕಳೆದ ವರ್ಷ (2023) ಕರ್ನಾಟಕವು ಭೀಕರ ಬರಗಾಲದಿಂದ ತತ್ತರಿಸಿದ್ದು ಗೊತ್ತಿರುವಂಥದ್ದೇ. ರಾಜ್ಯದ 236 ತಾಲೂಕುಗಳಲ್ಲಿ 223ನ್ನು ಬರಪೀಡಿತ ಎಂದು ಘೊಷಿಸಲಾಗಿತ್ತು. ಈ ಪೈಕಿ 196 ತಾಲ್ಲೂಕುಗಳಂತೂ ತೀವ್ರ ಪೀಡಿತವಾಗಿದ್ದವು. ಬರ, ಅತಿವೃಷ್ಟಿ, ಭೂಕಂಪದಂಥ ನೈಸರ್ಗಿಕ ವಿಕೋಪಗಳು ಹೇಳಿಕೇಳಿ ಬರುವಂಥದ್ದಲ್ಲ. ಇಂಥ ವಿಪತ್ತುಗಳನ್ನು ಎದುರಿಸುವುದು ಸವಾಲು ಕೂಡ ಹೌದು. ಕಳೆದ ವರ್ಷದ ಅನಾವೃಷ್ಟಿ ರೈತರ ಗಾಯದ ಮೇಲೆ ಬರೆ ಎಳೆದಂತಾಯಿತು. ಅಲ್ಲದೆ, ಆಹಾರ ಧಾನ್ಯಗಳು ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆಯಾಗಿ ಜನಸಾಮಾನ್ಯರು ಹೈರಾಣಾದರು. ಬರ ಉಂಟುಮಾಡುವ ಅಡ್ಡಪರಿಣಾಮಗಳು ಒಂದೆರಡಲ್ಲ.
ನಮ್ಮದು ಒಕ್ಕೂಟ ವ್ಯವಸ್ಥೆ. ಯಾವುದೇ ಸಂಕಷ್ಟ, ಸವಾಲು, ವಿಪತ್ತುಗಳು ಎದುರಾದಾಗ ಪರಸ್ಪರ ಸಹಕಾರ, ಸಮನ್ವಯದಿಂದ ಎದುರಿಸಬೇಕು. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಸಕಾರಾತ್ಮಕ ಸಂಪ್ರದಾಯ. ಆದರೆ, ಕರ್ನಾಟಕಕ್ಕೆ ಬರ ಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ವಿವಾದ ಸಂಘರ್ಷದ ಸ್ವರೂಪ ಪಡೆದುಕೊಂಡು, ನ್ಯಾಯಾಲಯದ ಮೆಟ್ಟಿಲು ಏರಿದ್ದು ಸರಿಯಾದ ಬೆಳವಣಿಗೆಯೇನಲ್ಲ. ಈಗಂತೂ, ನ್ಯಾಯಾಲಯ ಕೂಡ ‘ಈ ವಿವಾದವನ್ನು ನೀವೇ ಬಗೆಹರಿಸಿಕೊಳ್ಳಿ’ ಎಂದು ಹೇಳುವ ಮೂಲಕ ವಿವಾದದ ಚೆಂಡು ಕೇಂದ್ರ, ರಾಜ್ಯದ ಅಂಗಳಕ್ಕೆ ಬಂದು ತಲುಪಿದೆ. 2023ರ ರಾಜ್ಯದ ಬರ ನಿರ್ವಹಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (ಎನ್ಡಿಆರ್ಎಫ್) ಹಣಕಾಸು ನೆರವು ಬಿಡುಗಡೆ ಮಾಡುವ ವಿಚಾರವನ್ನು ಕೇಂದ್ರ ಮತ್ತು ಕರ್ನಾಟಕ ಸರ್ಕಾರ ಪರಿಹರಿಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಮಂಗಳವಾರ ಸಲಹೆ ನೀಡಿದೆ. ಬರ ನಿರ್ವಹಣೆಗಾಗಿ ರಾಜ್ಯಕ್ಕೆ ಎನ್ಡಿಆರ್ಎಫ್ನಿಂದ ಹಣಕಾಸು ನೆರವು ಬಿಡುಗಡೆ ಮಾಡಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ಕೋರ್ಟ್, ಈ ಸೂಚನೆ ನೀಡಿದೆ.
18,171 ಕೋಟಿ ರೂ. ಬಿಡುಗಡೆಗೆ ಮನವಿ ಮಾಡಲಾಗಿತ್ತು. ಆದರೆ ಕೇಂದ್ರದಿಂದ ಬಂದಿದ್ದು 3,819 ಕೋಟಿ ರೂ. ಮಾತ್ರ ಎಂಬುದು ರಾಜ್ಯ ಸರ್ಕಾರದ ವಾದ. ಆದರೆ, ಕರ್ನಾಟಕಕ್ಕೆ ಅನ್ಯಾಯ ಅಥವಾ ತಾರತಮ್ಯ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಈ ಹಗ್ಗಜಗ್ಗಾಟದ ನಡುವೆ ರೈತರು ಮತ್ತು ಬರದಿಂದ ಸಂತ್ರಸ್ತರಾದ ಇತರ ಜನಸಾಮಾನ್ಯರು ಮಾತ್ರ ಪರಿಹಾರಕ್ಕೆ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ‘ಬರವು ನಮ್ಮ ಬದುಕನ್ನೇ ಘಾಸಿಗೊಳಿಸಿದೆ. ಹೀಗಾಗಿ, ನ್ಯಾಯಯುತ ಪರಿಹಾರ ನೀಡಿ, ನೆರವಾಗಬೇಕು. ನಮಗೆ ರಾಜಕೀಯ ಬೇಕಿಲ್ಲ’ ಎಂಬುದು ರೈತರ ಅಳಲು.
ಎಲ್ಲ ವಿಷಯಗಳನ್ನು ರಾಜಕೀಯದ ಕನ್ನಡಕದಿಂದ ನೋಡಿದರೆ ಅದರಿಂದ ಹಾನಿಯೇ ಹೆಚ್ಚು. ಹಾಗಾಗಿ, ಬರ ಪರಿಸ್ಥಿತಿಯಂಥ ಗಂಭೀರ ವಿಷಯದಲ್ಲಿ ರೈತರ ಕಾಳಜಿ ಮುಖ್ಯವಾಗಬೇಕು. ತಾಂತ್ರಿಕ ಸಮಸ್ಯೆಗಳು ಇದ್ದಲ್ಲಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ನ್ಯಾಯಾಲಯದ ಮೆಟ್ಟಿಲು ಹತ್ತಿದರೆ, ವಿವಾದ ಬಗೆಹರಿಯಲು ಮತ್ತಷ್ಟು ಸಮಯ ತೆಗೆದುಕೊಳ್ಳುತ್ತದೆ. ಇನ್ನಾದರೂ ಬರ ಪರಿಹಾರ ವಿವಾದ ಸೌಹಾರ್ದದಿಂದ ಇತ್ಯರ್ಥವಾಗಲಿ.