

ಬೆಂಗಳೂರು: ಮುಖ್ಯಮಂತ್ರಿ ವಿರುದ್ಧ ಪ್ರಕರಣ ದಾಖಲಿಸಲು ಕೋರ್ಟ್ ಆದೇಶದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಸಣ್ಣ ಕಿಡಿ ಹೊತ್ತಿದೆ. ಸಿದ್ದರಾಮಯ್ಯ ಅವರು ಸ್ವಯಂಪ್ರೇರಿತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಕೆ.ಬಿ.ಕೋಳಿವಾಡ ಆಗ್ರಹಿಸಿದ್ದಾರೆ.
ಅವರ ಈ ಮಾತು ಸಚಿವ ಸಂಪುಟ ಸದಸ್ಯರನ್ನು ಕೆರಳಿಸಿದೆ. ಕೋಳಿವಾಡ ಅಭಿಪ್ರಾಯಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಂತೂ ಕೋಳಿವಾಡಗೆ ವಯಸ್ಸಾಗಿದೆ, ತಲೆ ಕೆಟ್ಟಿದೆ ಎಂದು ಆಕ್ರೋಶ ಹೊರಹಾಕಿದರು.
ಹೈಕಮಾಂಡ್, ಸಚಿವರು, ಶಾಸಕರೆಲ್ಲರೂ ಸಿಎಂ ಬೆನ್ನಿಗೆ ನಿಂತಿರುವಾಗ ಕೋಳಿವಾಡ ಕಿಡಿ ಹೊತ್ತಿಸಿದ್ದು, ಮೊದಲ ಬಾರಿಗೆ ರಾಜೀನಾಮೆಯ ಕೂಗು ಹೊಮ್ಮಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ರಾಜೀನಾಮೆ ಕೊಡಬೇಕೋ ಬಿಡಬೇಕೋ ಅವರಿಗೆ ಸೇರಿದ್ದು. ನನ್ನ ಅಭಿಪ್ರಾಯ ನಾನು ಹೇಳುತ್ತಿದ್ದೇನೆ. ನಾನು ಕೆಪಿಸಿಸಿ ಶಿಸ್ತು ಸಮಿತಿಯ ಸದಸ್ಯನಾಗಿ ಮಾತನ್ನಾಡುತ್ತಿಲ್ಲ. ಪಕ್ಷದಲ್ಲಿ ಹೇಳಲು ವೇದಿಕೆಯೇ ಇಲ್ಲ, ಹಾಗಾಗಿ ಇಲ್ಲಿ ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಬೇಕು ಎಂದರು.
ನನ್ನ ಹೇಳಿಕೆ ಪಕ್ಷ ವಿರೋಧಿ ಚಟುವಟಿಕೆ ಅನ್ನಿಸಿದರೆ ನೋಟಿಸ್ ಕೊಡಲಿ. ಹೈಕಮಾಂಡ್ ನೋಟಿಸ್ ನೀಡಿದರೂ ಉತ್ತರ ನೀಡುತ್ತೇನೆ. ಸಿದ್ದರಾಮಯ್ಯಗಿಂತಲೂ ನಾನು ಕಾಂಗ್ರೆಸ್‌ನಲ್ಲಿ ಸೀನಿಯರ್. ಅವರಿಗಿಂತಲೂ ಹದಿಮೂರು ವರ್ಷ ಸೀನಿಯರ್. ನಾನು ಎಂದೂ ಪಕ್ಷ ಬಿಟ್ಟು ಹೋದವನಲ್ಲ. ಬೇರೆ ಪಕ್ಷದಿಂದಲೂ ಬಂದವನಲ್ಲ ಎಂದು ಗುಡುಗಿದರು.
ಕೋರ್ಟ್ ತೀರ್ಪಿನ ಕಾರಣ ಸಿಎಂ ರಾಜೀನಾಮೆ ನೀಡಬೇಕು. ಆರೋಪ ಮುಕ್ತರಾದ ಬಳಿಕ ಮತ್ತೆ ಸಿಎಂ ಆಗಲಿ. ಅಲ್ಲಿಯವರೆಗೂ ರಾಜೀನಾಮೆ ನೀಡಬೇಕು. ನನ್ನ ಅಭಿಪ್ರಾಯ ನಾನು ಹೇಳಿದ್ದೇನೆ. ಪಕ್ಷದ ಹಿತದೃಷ್ಟಿಯಿಂದ ಸಿಎಂ ರಾಜೀನಾಮೆ ನೀಡಬೇಕು. ಇದು ನನ್ನ ಅಭಿಪ್ರಾಯ ಅಷ್ಟೇ ಎಂದರು.
ತನಿಖೆ ನಡೆದು ನಿಷ್ಕಳಂಕರಾದ ಬಳಿಕ ಅವರೇ ಮತ್ತೆ ಸಿಎಂ ಆಗಲಿ. ಇದು ಎಲ್ಲಾ ಶಾಸಕರ ಅಭಿಪ್ರಾಯವಾಗಿದೆ. ಸಿದ್ದರಾಮಯ್ಯ ನೂರಕ್ಕೆ ನೂರರಷ್ಟು ಎಲ್ಲಿಯೂ ತಪ್ಪು ಮಾಡಿಲ್ಲ. ಯಾವುದೇ ಆಮಿಷ, ಸಹಿ ಕೂಡ ಇಲ್ಲ. ಆದರೂ ಸಿಎಂ ವಿರುದ್ಧ ಕೋರ್ಟ್ ತೀರ್ಪು ಬಂದಿದೆ. ತನಿಖೆ ಮುಗಿಯೋವರೆಗೂ ರಾಜೀನಾಮೆ ನೀಡಲಿ. ಪಕ್ಷಕ್ಕೆ ಮುಜುಗರ ಆಗುತ್ತಿರುವುದರಿಂದ ರಾಜೀನಾಮೆ ನೀಡಬೇಕು ಎಂದು ಹೇಳಿದರು.