

ಬೆಂಗಳೂರು: ನೆರೆಯ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಮಹಿಳೆಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಕೊಟ್ಟಿಗೆಪಾಳ್ಯ ನಿವಾಸಿ ರತ್ನಾ ಬಂಧಿತೆ. ಆರೋಪಿಯಿಂದ 1.06 ಲಕ್ಷ ರೂ. ಮೌಲ್ಯದ 17.7 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಮನೆ ಮಾಲೀಕರು ಮನೆ ಬೀಗ ಹಾಕಿ ಶೂನಲ್ಲಿ ಕೀ ಇಟ್ಟು ಊರಿಗೆ ಹೋಗಿದ್ದರು. ಶೂನಲ್ಲಿ ಕೀ ಇಟ್ಟಿರುವುದನ್ನು ಗಮನಿಸಿದ್ದ ರತ್ನಾ, ಆ ಕೀ ತೆಗೆದುಕೊಂಡು ಮನೆಯ ಬೀಗ ತೆರೆದು ಕಳ್ಳತನ ಮಾಡಿದ್ದಳು.
ಕೆಲ ದಿನಗಳ ನಂತರ ಮನೆ ಮಾಲೀಕರು ಬಂದಾಗ ಕಳ್ಳತನ ಬೆಳಕಿಗೆ ಬಂದಿತ್ತು. ಈ ಬಗ್ಗೆ ನೆರೆಮನೆಯವರು ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮನೆಯ ಬೀಗ ಮುರಿಯದೆ ಕಳ್ಳತನ ಕೃತ್ಯದ ಹಿಂದೆ ಪರಿಚಿತರ ಕೈವಾಡದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು.
ಇದರ ಆಧಾರದ ಮೇಲೆ ರತ್ನಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ. ಕೊಟ್ಟಿಗೆಪಾಳ್ಯದಲ್ಲಿ ಪತಿ ಮತ್ತು ಮಕ್ಕಳ ಜತೆ ನೆಲೆಸಿದ್ದ ರತ್ನಾ ಹಣದಾಸೆಗೆ ನೆರೆ ಮನೆಯಲ್ಲಿ ಕಳ್ಳತನ ಮಾಡಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.