

ಬೆಂಗಳೂರು: ಕರೊನಾ ಸೋಂಕಿನಿಂದಾಗಿ ಈ ನವದಂಪತಿಯ ಜೀವನ ಅತಂತ್ರ ಆಗಿದೆ. ಮನೆ ಮಾಲೀಕನ ದರ್ಪದಿಂದಾಗಿ ರಾತ್ರಿಯಿಡೀ ಒದ್ದಾಡುವಂತಾಯಿತು.
ರಂಗ ಮತ್ತು ಪವಿತ್ರಾ ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ರಂಗ ಕ್ಯಾಬ್ ಚಾಲಕನಾಗಿದ್ದ. ಆದರೆ ಈಗ ಲಾಕ್ಡೌನ್ ಪರಿಸ್ಥಿತಿ ಇದ್ದುದರಿಂದ ಆತನಿಗೆ ಕೆಲಸ ಇರಲಿಲ್ಲ. ಕೈಯಲ್ಲಿ ಹಣವೂ ಇರಲಿಲ್ಲ.
ಬದಲಗುಂಟೆಯಲ್ಲಿ ಮನೆ ಮಾಡಿದ್ದ ಈ ನವವಿವಾಹಿತರು, ಊಟಕ್ಕಾಗಿ ಬೇರೆಯವರ ಮನೆಯಲ್ಲಿ ಉಳಿದುಕೊಂಡಿದ್ದರು. ಆದರೆ ನಿನ್ನೆ ರಾತ್ರಿ ಸುಮಾರು 11 ಗಂಟೆ ಹೊತ್ತಿಗೆ ಬಗಲಗುಂಟೆಯ ತಮ್ಮ ಬಾಡಿಗೆ ಮನೆಗೆ ಬಂದ ಅವರಿಗೆ ಶಾಕ್ ಕಾದಿತ್ತು.
ಮನೆ ಮಾಲೀಕ ಶಿವಣ್ಣ ಗೇಟ್ ಬಳಿಯೇ ದಂಪತಿಯನ್ನು ಅಡ್ಡ ಹಾಕಿದ. ನೀವು ಊರೆಲ್ಲ ಸುತ್ತಾಡಿ ಬಂದಿದ್ದೀರಿ. ಮೊದಲು ಮೆಡಿಕಲ್ ರಿಪೋರ್ಟ್ ತನ್ನಿ. ಇಲ್ಲದಿದ್ದರೆ ಯಾವ ಕಾರಣಕ್ಕೂ ಮನೆಯೊಳಗೆ ಬಿಟ್ಟುಕೊಳ್ಳುವುದಿಲ್ಲ ಎಂದು ಹೇಳಿ, ಗೇಟಿಗೆ ಬೀಗ ಹಾಕಿ ದಂಪತಿಯನ್ನು ಹೊರಗೇ ನಿಲ್ಲಿಸಿದ್ದಾನೆ.
ವಿಧಿಯಿಲ್ಲದೆ ಆ ಜೋಡಿ ರಾತ್ರಿಯೆಲ್ಲ ಕಾರಿನಲ್ಲೇ ಉಳಿದುಕೊಂಡಿದೆ. (ದಿಗ್ವಿಜಯ ನ್ಯೂಸ್)