

ಶಿವಮೊಗ್ಗ: ವರ್ಗಾವಣೆ ವಿಚಾರ ಮತ್ತಿತರ ಸಮಸ್ಯೆಗಳನ್ನು ಹೇಳಿಕೊಳ್ಳಲು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಬಳಿ ತೆರಳುವ ಪೊಲೀಸ್ ಸಿಬ್ಬಂದಿ ಡಿಜಿಪಿ ಕಚೇರಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂಬ ರಾಜ್ಯ ಸರ್ಕಾರದ ಆದೇಶವನ್ನು ಖಂಡಿಸಿ ಶಾಂತವೇರಿ ಗೋಪಾಲ ಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ಪ್ರಮುಖರು ಬುಧವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಇದು ಹಿಟ್ಲರ್ ಧೋರಣೆಯಾಗಿದೆ. ಕೂಡಲೇ ಈ ಆದೇಶವನ್ನು ಸರ್ಕಾರ ಹಿಂಪಡೆಯಬೇಕು. ಸಾವಿರಾರು ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಅಂತರ ಜಿಲ್ಲಾ ವರ್ಗಾವಣೆಗೆ ಕಳೆದ ಏಳೆಂದು ವರ್ಷಗಳಿಂದ ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಮೂರು ವರ್ಷ ಸೇವೆ ಸಲ್ಲಿಸಿದವರಿಗೆ ಅಂತರ ಜಿಲ್ಲಾ ವರ್ಗಾವಣೆ ಮಾಡಬಹುದೆಂಬ ನಿಯಮವಿತ್ತು. ಅದು ಈಗ ಏಳು ವರ್ಷಕ್ಕೆ ಏರಿಕೆ ಮಾಡಲಾಗಿದೆ. ಆದರೂ ವರ್ಗಾವಣೆ ಸಿಗದೆ ಪೊಲೀಸರು ಹೈರಾಣಾಗಿದ್ದಾರೆ. ದೀರ್ಘಾವಧಿವರೆಗೆ ವೃದ್ಧ ತಂದೆ, ತಾಯಿ, ಪತಿ, ಪತ್ನಿ, ಮಕ್ಕಳನ್ನು ಬಿಟ್ಟು ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಿಬ್ಬಂದಿ ತಮ್ಮ ಸಮಸ್ಯೆಯನ್ನು ಗೃಹ ಸಚಿವರ ಗಮನಕ್ಕೆ ತರಲು ಅವರನ್ನು ಭೇಟಿಯಾಗುವುದು ತಪ್ಪೇ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಕಾನೂನು ಸುವ್ಯವಸ್ಥೆ ಕಾಪಾಡುವ ಗಂಭೀರ ಜವಾಬ್ದಾರಿ ಹೊತ್ತ ಪೊಲೀಸರು ಬಗ್ಗೆಯೂ ಸರ್ಕಾರ ಚಿಂತಿಸಬೇಕು. ಕೆಲಸದ ಒತ್ತಡದಲ್ಲಿ ಬಳಲುವ ಪೊಲೀಸರ ಹಿತರಕ್ಷಣೆ ಮಾಡಬೇಕು. ಅವರ ಅಹವಾಲು ಸ್ವೀಕರಿಸದೆ ನಿರ್ಬಂಧ ಹೇರುವುದು ಅಕ್ಷಮ್ಯ. ಪೊಲೀಸರನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ರೀತಿ ಸರಿಯಲ್ಲ. ಸರ್ಕಾರ ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಟ್ರಸ್ಟ್‌ನ ಪ್ರಮುಖರಾದ ಕಲ್ಲೂರು ಮೇಘರಾಜ್, ಎಚ್.ಎಂ.ಸಂಗಯ್ಯ, ಜನಮೇಜಿರಾವ್, ಡಾ. ಷಣ್ಮುಖಪ್ಪ, ಕೆ.ಸಿ.ತೇಜಮೂರ್ತಿ, ಎಸ್.ಪಿ.ಶಿವಣ್ಣ, ಪ್ರೊ. ಕಲ್ಲನ, ವೇದಾನಂದ್, ಶಂಕ್ರಾನಾಯ್ಕಾ, ಬಾಲು ಮತ್ತಿತರರು ಪ್ರತಿಭಟನೆಯಲ್ಲಿದ್ದರು.